ಗಡಿ ಒತ್ತುವರಿ ಕುರಿತು ಮೋದಿ ಹೇಳಿಕೆ, ತಿರುಗೇಟು ನೀಡಿದ ಚೀನಾ

ನವದೆಹಲಿ: ಗಡಿ ಒತ್ತುವರಿ ಕುರಿತು ತೀಕ್ಷ್ಣ ಹೇಳಿಕೆ ನೀಡಿದ್ದ ನರೇಂದ್ರ ಮೋದಿ ಕುರಿತು ಕಿಡಿಕಾರಿರುವ ಚೀನಾ, ಕೆಲವು ಸುತ್ತಿನಿಂದ ಸಮಸ್ಯೆ ಪರಿಹಾರ ಸಾಧ್ಯವಿಲ್ಲ ಎಂದು ಖಾರವಾಗಿ ಹೇಳಿದೆ.
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಹೇಳಿಕೆ ಕುರಿತು ಮಾತನಾಡಿರುವ ಚೀನಾ ವಿದೇಶಾಂಗ ಸಚಿವೆ ಹುವಾ ಚುನ್ಯಿಂಗ್ ಇಂಡೋ-ಚೀನಾ ಗಡಿ ವಿವಾದ ಇಂದು ನಿನ್ನೆಯದಲ್ಲ. ಬಹಳ ವರ್ಷಗಳಿಂದಲೂ ಗಡಿ ಕುರಿತು ಉಭಯ ದೇಶಗಳ ಭಿನ್ನಾಭಿಪ್ರಾಯಗಳಿವೆ. ಕೆಲವು ಸುತ್ತಿನ ಮಾತುಕತೆಯಿಂದ ಸಮಸ್ಯೆ ಬಗೆಹರಿಯುವುದಿಲ್ಲ.
ಗಡಿ ವಿವಾದ ಉಭಯ ದೇಶಗಳ ಪಾಲಿಗೆ ಅತ್ಯಂತ ಸೂಕ್ಷ್ಮ ವಿಚಾರವಾಗಿದ್ದು, ನಾವು ಇಡುವ ಸಣ್ಣ ತಪ್ಪು ಹೆಜ್ಜೆಗಳು ದೊಡ್ಡ ಅನಾಹುತವನ್ನೇ ಸೃಷ್ಟಿಸಿ ಬಿಡುತ್ತವೆ. ಹೀಗಾಗಿ ಗಡಿ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಲು ಉಭಯದೇಶಗಳ ಪ್ರತಿನಿಧಿಗಳು ತಮ್ಮ ಪೂರ್ಣ ಶ್ರಮವಹಿಸಿ ಕೆಲಸ ಮಾಡುತ್ತಿದ್ದು, ಯಾವುದೇ ಹಂತದಲ್ಲಿಯೂ ಗಡಿಯಲ್ಲಿ ಅಶಾಂತಿಗೆ ಅನುವು ಮಾಡಿಕೊಡುವುದಿಲ್ಲ. ನಿಜ ಹೇಳಬೇಕು ಎಂದರೆ ಸಾಕಷ್ಟು ವರ್ಷಗಳಿಂದ ಉಭಯ ದೇಶಗಳ ಗಡಿಯಲ್ಲಿ ಸೈನಿಕರ ಗುಂಡಿನ ಚಕಮಕಿ ನಡೆದಿಲ್ಲ. ಇದು ಉಭಯ ದೇಶಗಳ ನಡುವಿನ ಸಾಮರಸ್ಯವನ್ನು ಮತ್ತು ಶಾಂತಿ ಕಾಪಾಡಬೇಕೆಂಬ ಬಯಕೆಯನ್ನು ಪ್ರದರ್ಶಿಸುತ್ತದೆ ಎಂದು ಹುವಾ ಚುನ್ಯಿಂಗ್ ಹೇಳಿದರು.
ನಿನ್ನೆ ಅರುಣಾಚಲ ಪ್ರದೇಶದಲ್ಲಿ ನಡೆದ ಲೋಕಸಭಾ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ್ದ ನರೇಂದ್ರ ಮೋದಿ ಗಡಿ ಅತಿಕ್ರಮಣ ಕುರಿತು ಚೀನಾಗೆ ಎಚ್ಚರಿಕೆ ನೀಡಿದ್ದರು. 'ಚೀನಾ ತನ್ನ ಗಡಿಯನ್ನು ವಿಸ್ತರಿಸಬೇಕು ಎಂಬ ಯೋಜನೆಯನ್ನು ಹಾಕಿಕೊಂಡಿದ್ದರೆ ಅದನ್ನು ಕೂಡಲೇ ನಿಲ್ಲಿಸಬೇಕು. ಉಭಯ ದೇಶಗಳ ನಡುವಿನ ಗಡಿ ಒಪ್ಪಂದವನ್ನು ಚೀನಾ ಗೌರವಿಸುವ ಮೂಲಕ ಉಭಯ ದೇಶಗಳ ಸಮೃದ್ಧಿ ಮತ್ತು ಅಭಿವೃದ್ಧಿಗೆ ಸಹಕರಿಸಬೇಕು' ಎಂದು ಮೋದಿ ಹೇಳಿದ್ದರು.
'ಅರುಣಾಚಲ ಪ್ರದೇಶ ಸಮಗ್ರ ಭಾರತದ ಭಾಗವಾಗಿದ್ದು, ಯಾವುದೇ ಬಾಹ್ಯಶಕ್ತಿಗಳು ಅದನ್ನು ನಮ್ಮಿಂದ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಅರುಣಾಚಲ ಪ್ರದೇಶದ ಜನರು ಯಾವುದೇ ಒತ್ತಡ ಅಥವಾ ಚೀನಾದ ಭಯದ ನೆರಳಲ್ಲಿ ಬದುಕುತ್ತಿಲ್ಲ ಎಂದು ಮೋದಿ ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


