ಭಾವಿ ಪ್ರಧಾನಿಗಳಿಗೆ ಕೇಜ್ರಿ 'ಪಂಚ ಪ್ರಶ್ನೆ'ಗಳು

ನವದೆಹಲಿ: ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿ ಅಭ್ಯರ್ಥಿಗಳೆಂದೇ ಬಿಂಬಿತವಾಗಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಐದು ಪ್ರಮುಖ ಪ್ರಶ್ನೆಗಳನ್ನು ಕೇಳಿದ್ದಾರೆ.
ನಿನ್ನೆ ಭಾನುವಾರ ಹರ್ಯಾಣದ ರೋಹ್ಟಕ್ನಲ್ಲಿ ನಡೆದ ಆಮ್ ಆದ್ಮಿ ಪಕ್ಷದ ಪ್ರಥಮ ಚುನಾವಣಾ ರ್ಯಾಲಿಯಲ್ಲಿ ದೇಶದ ಜನತೆನ್ನು ಉದ್ದೇಶಿಸಿ ಮಾತನಾಡಿದ ಅರವಿಂದ್ ಕೇಜ್ರಿವಾಲ್ ಅವರು ದೇಶದ ಭಾವಿ ಪ್ರಧಾನಿಗಳಿಗೆ ಪಂಚ ಪ್ರಶ್ನೆಗಳನ್ನು ಕೇಳುವ ಮೂಲಕ ಹೊಸದೊಂದು ಚರ್ಚೆಗೆ ವೇದಿಕೆ ಸಿದ್ದಗೊಳಿಸಿದ್ದಾರೆ.
ಇಬ್ಬರು ನಾಯಕರಿಗೆ ಕೇಜ್ರಿವಾಲ್ ಕೇಳಿದ ಪ್ರಶ್ನೆಗಳು
ಪ್ರಶ್ನೆ-1....ಗ್ಯಾಸ್ ದರ ಏರಿಕೆ ಕುರಿತು ನಿಮ್ಮ ನಿಲುವೇನು...? ಈ ವರೆಗೂ ಗ್ಯಾಸ್ ದರ ಏರಿಕೆ ಕುರಿತು ನೀವು (ರಾಹುಲ್ ಮತ್ತು ನರೇಂದ್ರ ಮೋದಿ) ಯಾವುದೇ ಪ್ರತಿಕ್ರಿಯೆ ನೀಡಿದೇ ಮೌನವಹಿಸಿರುವುದೇಕೆ..? ಗ್ಯಾಸ್ ದರ ಏರಿಕೆಯಲ್ಲಿ ಮುಖೇಶ್ ಮತ್ತು ರಿಲಯನ್ಸ್ ಸಂಸ್ಥೆಯ ಪಾತ್ರವೇನು..? ಗ್ಯಾಸ್ ದರ ಏರಿಕೆ ಮತ್ತು ರಿಲಯನ್ಸ್ ವಿಚಾರ ಬಂದಾಗ ಇಬ್ಬರು ನಾಯಕರು ಮೌನವಹಿಸುತ್ತಿರುವುದೇಕೆ..?
ಪ್ರಶ್ನೆ-2....ಮುಖೇಶ್ ಮತ್ತು ಅವರ ಸೋದರ ಅನಿಲ್ ಅಂಬಾನಿ ತಮ್ಮ ರಿಲಯನ್ಸ್ ಸಂಸ್ಥೆಯ ಮೂಲಕ ದೇಶದ ಬೊಕ್ಕಸಕ್ಕೆ ಭಾರಿ ಪ್ರಮಾಣದಲ್ಲಿ ತೆರಿಗೆ ನಷ್ಟವನ್ನುಂಟು ಮಾಡಿ, ಸ್ವಿಸ್ ಬ್ಯಾಂಕ್ನಲ್ಲಿ ಹಣವನ್ನು ಜೋಪಾನ ಮಾಡಿದ್ದಾರೆ. ಅವರ ಸ್ವಿಸ್ ಬ್ಯಾಂಕ್ ಖಾತೆಯ ವಿವರವನ್ನು ನಿಮಗೆ ನೀಡುತ್ತೇನೆ. ಆ ಹಣವನ್ನು ವಾಪಸ್ ತರಿಸುತ್ತೀರಾ...?
ಪ್ರಶ್ನೆ-3....ಲೋಕಸಭಾ ಚುನಾವಣಾ ಹಿನ್ನಲೆಯಲ್ಲಿ ನೀವು (ಬಿಜೆಪಿ ಮತ್ತು ಕಾಂಗ್ರೆಸ್) ದೇಶಾದ್ಯಂತ ರ್ಯಾಲಿಗಳನ್ನು ಮತ್ತು ಪ್ರಚಾರ ಕಾರ್ಯಕ್ರಮಗಳ್ನು ಹಮ್ಮಿಕೊಳ್ಳುತ್ತಿದ್ದೀರಿ...? ಈ ನಿಮ್ಮ ಎಲ್ಲ ಕಾರ್ಯಕ್ರಮಗಳಿಗೂ ಹಣ ಎಲ್ಲಿಂದ ಬರುತ್ತಿದೆ..? ಪ್ರಚಾರಕ್ಕಾಗಿ ನರೇಂದ್ರ ಮೋದಿ ಅವರು ರಾಜ್ಯದಿಂದ ರಾಜ್ಯಕ್ಕೆ ಹೆಲಿಕಾಪ್ಟರ್ ನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಅವರ ಹೆಲಿಕಾಪ್ಟರ್ ಪ್ರಯಾಣದ ವೆಚ್ಚವನ್ನು ಯಾರು ಭರಿಸುತ್ತಿದ್ದಾರೆ..? ಓರ್ವ ಚಹಾ ಮಾರಾಟಗಾರ ಹೆಲಿಕಾಪ್ಟರ್ ವೆಚ್ಚವನ್ನು ಭರಿಸಲು ಸಾಧ್ಯವೇ...?
ಪ್ರಶ್ನೆ-4....ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಜನಲೋಕಪಾಲ್ ಮಸೂದೆಯನ್ನು ಜಾರಿಗೆ ತರುವ ಅವಶ್ಯಕತೆ ಇದ್ದು, ನೀವು ದುರ್ಬಲ ಲೋಕಪಾಲ ಮಸೂದೆಯತ್ತ ಹೆಚ್ಚಿನ ಒಲವು ತೋರುತ್ತಿರುವುದೇಕೆ..? ಜನಲೋಕಪಾಲ್ ಮಸೂದೆ ಕುರಿತು ನಿಮ್ಮ ಸ್ಪಷ್ಟ ನಿಲುವನ್ನು ತಿಳಿಸಿ..?
ಪ್ರಶ್ನೆ-5....ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಮತ್ತು ಭ್ರಷ್ಟ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಲು ಆಯಾ ರಾಜ್ಯಗಳು ಲೋಕಾಯುಕ್ತವನ್ನು ಅಳವಡಿಸಿಕೊಂಡಿವೆ. ಆದರೆ ಗುಜರಾತಿನ ಲೋಕಾಯುಕ್ತ ದೇಶದಲ್ಲಿಯೇ ಅತ್ಯಂತ ದುರ್ಬಲ ಲೋಕಾಯುಕ್ತ ಸಂಸ್ಥೆ ಎಂದು ಹೇಳಲಾಗುತ್ತಿದೆ. ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿರುವ ನೀವು ಲೋಕಾಯುಕ್ತ ಕಾಯ್ದೆಗೆ ಒಳಟ್ಟಿಲ್ಲವೇಕೆ..? ಮತ್ತು ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟರ ತನಿಖೆ ನಡೆಸುವ ಮೊದಲು ನಿಮ್ಮ (ನರೇಂದ್ರ ಮೋದಿ) ಒಪ್ಪಿಗೆಯನ್ನೇಕೆ ಪಡೆಯಬೇಕು..?
ಅರವಿಂದಗ್ ಕೇಜ್ರಿವಾಲ್ ಅವರು ಕೇಳಿರುವ ಈ ಪ್ರಶ್ನೆಗಳ ರಿಲಯನ್ ಸಂಸ್ಥೆ ಮತ್ತು ಮುಖೇಶ್ ಅಂಬಾನಿಯವರನ್ನು ಕೇಂದ್ರವಾಗಿಸಿಕೊಂಡಂತಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಭ್ರಷ್ಟಾಚಾರದಲ್ಲಿ ತೊಡಗಿವೆ ಎಂಬ ಆರೋಪ ಕೂಡ ಇದೆ. ಆದರೆ ವಿಪರ್ಯಾಸವೆಂದರೆ ಅರವಿಂದ್ ಕೇಜ್ರಿವಾಲ್ ಅವರ ಈ ಪ್ರಶ್ನೆಗಳ ಕುರಿತು ರಾಹುಲ್ ಗಾಂಧಿಯಾಗಲಿ ಅಥವಾ ನರೇಂದ್ರ ಮೋದಿಯವರಾಗಲಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.
ಲೋಕಸಭಾ ಚುನಾವಣೆ ಈ ಸಂದರ್ಭದಲ್ಲಿ ದೇಶದ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಪಾಲಿಗೆ ಕೇಜ್ರಿವಾಲ್ ಅವರ ಈ ಪ್ರಶ್ನೆಗಳು ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


