ಈಗಿನ ಸುದ್ದಿ

ಮೀನುಗಾರರ ಹತ್ಯೆ ಪ್ರಕರಣ: ಇಟಲಿ ನಾವಿಕರು ಗಲ್ಲು ಶಿಕ್ಷೆಯಿಂದ ಪಾರು

ಮೀನುಗಾರರ ಹತ್ಯೆ ಪ್ರಕರಣ: ಇಟಲಿ ನಾವಿಕರು ಗಲ್ಲು ಶಿಕ್ಷೆಯಿಂದ ಪಾರು
Published On :

ನವದೆಹಲಿ: ಕೇರಳದಲ್ಲಿ ಮೀನುಗಾರರ ಹತ್ಯೆ ಮಾಡಿದ್ದ ಇಟಲಿ ನೌಕಾಪಡೆಯ ಅಧಿಕಾರಿಗಳ ವಿರುದ್ಧದ 'ವಿರೋಧಿ ಕಡಲ್ಗಳ್ಳತನ ಆರೋಪ'ವನ್ನು ಕೇಂದ್ರ ಸರ್ಕಾರ ಕೈಬಿಟ್ಟಿದೆ.

ಕೇರಳದಲ್ಲಿ ಭಾರತೀಯ ಮೀನುಗಾರರನ್ನು ಹತ್ಯೆಗೈದು ಗಲ್ಲು ಶಿಕ್ಷೆಯ ಭೀತಿ ಎದುರಿಸುತ್ತಿದ್ದ ಇಟಲಿ ನೌಕಾಪಡೆಯ ಅಧಿಕಾರಿಗಳು ಇದೀಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು, ಅಧಿಕಾರಿಗಳ ಮೇಲಿದ್ದ ವಿರೋಧಿ ಕಡಲ್ಗಳ್ಳತನ ಆರೋಪವನ್ನು ಕೇಂದ್ರ ಸರ್ಕಾರ ಇಂದು ಹಿಂಪಡೆದಿದೆ. ಆದರೆ ಪ್ರಕರಣದ ವಿಚಾರಣೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮುಂದುವರೆಸಲಿದೆ ಎಂದು ಅದು ಸ್ಪಷ್ಟಪಡಿಸಿದೆ.

ಕಳೆದ ಜನವರಿ 15ರಂದು ಸುಪ್ರೀಂಕೋರ್ಟ್ ಮೊರೆ ಹೋಗಿದ್ದ ಇಟಲಿ ಸರ್ಕಾರ ಕೇರಳದಲ್ಲಿ ಮೀನುಗಾರರನ್ನು ಕಡಲ್ಗಳ್ಳರೆಂದು ತಪ್ಪಾಗಿ ಗ್ರಹಿಸಿದ್ದ ತನ್ನ ನೌಕಾ ಸಿಬ್ಬಂದಿಗಳು ಅವರ ಮೇಲೆ ಗುಂಡು ಹಾರಿಸಿದ್ದರೇ ಹೊರತು, ಉದ್ದೇಶ ಪೂರ್ವಕವಾಗಿ ಅವರ ಮೇಲೆ ಗುಂಡು ಹಾರಿಸಿಲ್ಲ. ಹೀಗಾಗಿ ಪ್ರಕರಣವನ್ನು ಗಲ್ಲು ಶಿಕ್ಷೆ ವಿಧಿಸಬಹುದಾದ 'ಭಯೋತ್ಪಾದನಾ ಮತ್ತು ದೇಶ ವಿದ್ರೋಹಿ ಕಾಯ್ದೆ'ಯ ಅಡಿಯಲ್ಲಿ ವಿಚಾರಣೆ ನಡೆಸಬಾರದು ಎಂದು ಮನವಿ ಮಾಡಿತ್ತು.

2012ರಲ್ಲಿ ನಡೆದಿದ್ದ ಈ ಪ್ರಕರಣದಿಂದಾಗಿ ಇಟಲಿ ಮತ್ತು ಭಾರತ ದೇಶಗಳ ನಡುವಿನ ಸಂಬಂಧಕ್ಕೆ ಭಾರಿ ಹಿನ್ನಡೆಯನ್ನುಂಟಾಗಿತ್ತು. ಪ್ರಕರಣದ ಕುರಿತು ಕೆಂಡಾಮಂಡಲವಾಗಿದ್ದ ಭಾರತ, ಮೀನುಗಾರರ ಮೇಲೆ ಗುಂಡು ಹಾರಿಸಿದ್ದ ಇಟಲಿ ನೌಕಾಪಡೆಯ ಅಧಿಕಾರಿಗಳಾದ ಮಸ್ಸಿ ಮಿಲಿಯಾನೋ ಲಟೊರ್ರೆ ಮತ್ತು ಸಾಲ್ವಟೊರೆ ಗಿರೊನ್ ರನ್ನು ಬಂಧಿಸಿತ್ತು. ಬಳಿಕ ಇಟಲಿ ಮತ್ತು ಯೂರೋಪಿಯನ್ ಒಕ್ಕೂಟದ ಮಧ್ಯ ಪ್ರವೇಶದಿಂದಾಗಿ ಜಾಮೀನಿನ ಮೇಲೆ ಅವರನ್ನು ಬಿಡುಗಡೆಗೊಳಿಸಿತ್ತು.

ನಿನ್ನೆಯಷ್ಟೇ ಈ ಕುರಿತು ಹೇಳಿಕೆ ನೀಡಿದ್ದ ಕೇಂದ್ರ ರಕ್ಷಣಾ ಸಚಿವ ಎ.ಕೆ.ಆಂಟನಿ ಅವರು, ಪ್ರಕರಣದ ಕುರಿತು ಯಾವುದೇ ಕಾರಣಕ್ಕೂ ಇಟಲಿಯೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ. ಭಾರತೀಯ ನೆಲದ ಕಾನೂನಿನ ಅನ್ವಯವೇ ವಿಚಾರಣೆ ನಡೆಸಲಾಗುತ್ತದೆ ಎಂದು ಹೇಳಿದ್ದರು. ಆದರೆ ಇಂದು ಅದಾಗಲೇ ನೌಕಾಪಡೆಯ ಅಧಿಕಾರಿಗಳ ವಿರುದ್ಧದ ವಿರೋಧಿ ಕಡಲ್ಗಳ್ಳತನದ ಆರೋಪವನ್ನು ಕೇಂದ್ರ ಸರ್ಕಾರ ಹಿಂಪಡೆಯುವ ಮೂಲಕ ಪರೋಕ್ಷವಾಗಿ ಇಟಲಿ ನೌಕಾಪಡೆಯ ಅಧಿಕಾರಿಗಳನ್ನು ಗಲ್ಲು ಶಿಕ್ಷೆಯಿಂದ ರಕ್ಷಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.