ಡಬ್ಬಿಂಗ್‌ನಿಂದ ಕನ್ನಡ ಸಂಸ್ಕೃತಿ ನಾಶ: ನಟ ಶಿವರಾಜ್ ಕುಮಾರ್

ಬೆಂಗಳೂರು: ಕರ್ನಾಟಕದಲ್ಲಿ ಡಬ್ಬಿಂಗ್‌ಗೆ ಅವಕಾಶ ನೀಡಿದರೆ ಕನ್ನಡ ಭಾಷಾ ಸಂಸ್ಕೃತಿ ನಾಶವಾಗಲಿದೆ ಎಂದು ನಟ ಶಿವರಾಜ್ ಕುಮಾರ್ ಹೇಳಿದ್ದಾರೆ.
ಡಬ್ಬಿಂಗ್ ವಿರೋಧಿಸಿ ಬೆಂಗಳೂರಿನ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಂಡಿರುವ ನಟ ಶಿವರಾಜ್ ಕುಮಾರ್ ಅವರು ಡಬ್ಬಿಂಗ್‌ಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. 'ಡಬ್ಬಿಂಗ್‌ನಿಂದಾಗಿ ಕನ್ನಡ ಸಂಸ್ಕೃತಿ ನಾಶವಾಗುವ ಅಪಾಯವಿದೆ. ಕನ್ನಡಿಗರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ನಾವು ಇಂದು ಇಲ್ಲಿ ಯಾವುದಕ್ಕಾಗಿ ಹೋರಾಡುತ್ತಿದ್ದೇವೆ ಎಂಬುದರ ಬಗ್ಗೆ ಜನರಿಗೆ ತಿಳಿಯಲಿ. ನಮ್ಮ ಹೋರಾಟವನ್ನು ಅವರು ಬೆಂಬಲಿಸಲಿ. ಅವರು ಕೈ ಜೋಡಿಸಿದರೆ ಸಂತಸ'.
'ಡಬ್ಬಿಂಗ್‌ನಿಂದ ನಮಗೆ ಯಾವುದೇ ಪ್ರಯೋಜನವಿಲ್ಲ.ಪರಭಾಷಾ ಚಿತ್ರಗಳಲ್ಲಿ ಕನ್ನಡ ಸಂಸ್ಕೃತಿ ತೋರಿಸಲ್ಲ. ಪರಭಾಷಾ ಚಿತ್ರಗಳಿಗೆ ನಮ್ಮ ವಿರೋಧ. ಎಲ್ಲ ತಂತ್ರಜ್ಞರ ಉಳಿವಿಗಾಗಿ ನಮ್ಮ ಹೋರಾಟ. ಡಬ್ಬಿಂಗ್‌ನಿಂದಾಗಿ ಸಾವಿರಾರು ತಂತ್ರಜ್ಞರು ಬೀದಿಪಾಲಾಗುತ್ತಾರೆ. ಅಲ್ಲದೆ ಇದು ಕನ್ನಡಿಗರ ಉಳಿವಿನ ಪ್ರಶ್ನೆಯಾಗಿದ್ದು, ಕನ್ನಡಿಗರು ರ್ಯಾಲಿಯನ್ನು ಬೆಂಬಲಿಸಬೇಕು' ಎಂದು ಶಿವರಾಜ್ ಕುಮಾರ್ ಹೇಳಿದರು.
ನಾನು ಮೊದಲಿನಿಂದಲೂ ಡಬ್ಬಿಂಗ್ ವಿರೋಧಿ. ಅಪ್ಪಾಜಿ ಕೂಡ ಡಬ್ಬಿಂಗ್ ಅನ್ನು ವಿರೋಧಿಸಿದ್ದರು. ಇಡೀ ಚಿತ್ರರಂಗ ಡಬ್ಬಿಂಗ್ ವಿರುದ್ಧ ನಿಂತಿದೆ. ಡಬ್ಬಿಂಗ್‌ಗೆ ಯಾರೂ ಪ್ರೊತ್ಸಾಹ ನೀಡಬಾರದು. ಇದು ನಾಯಕತ್ವದ ವಿಚಾರವಲ್ಲ. ಇಲ್ಲಿ ಎಲ್ಲರೂ ನಾಯಕರೇ. ಇದು ಶಿವಣ್ಣನ ಸಮಾವೇಶವಲ್ಲ. ಕನ್ನಡಿಗರ ಪ್ರತಿಭಟನೆ. ಕೇವಲ ಮೈದಾನ ತುಂಬಿದರಷ್ಟೇ ಜನ ಸೇರಿದ್ದಾರೆ ಎಂದರ್ಥವಲ್ಲ. 5 ಜನ ಸೇರಿ ಪ್ರತಿಭಟನೆ ನಡೆಸಿದರೂ ಅದು ಪ್ರತಿಭಟನೆಯೇ ಎಂದು ಶಿವರಾಜ್ ಕುಮಾರ್ ಹೇಳಿದರು.
ಇದೇ ವೇಳೆ ಸಮಾವೇಶದಲ್ಲಿ ಭಾಷಣ ಮಾಡಿದ ನಟ ಪುನೀತ್ ರಾಜ್ ಕುಮಾರ್ ನಾವು ಯಾವುದೇ ರಾಜ್ಯದ ಅಥವಾ ಯಾವುದೇ ಭಾಷೆಯ ವಿರೋಧಿಗಳಲ್ಲ. ಕನ್ನಡ ಭಾಷೆಯ ಅಸ್ಥಿತ್ವದ ಪ್ರಶ್ನೆ ಬಂದಾಗ ನಾವೆಲ್ಲರೂ ಒಂದಾಗಬೇಕು ಎಂದು ಹೇಳಿದರು.
ಇದೇ ವೇಳೆ ಸಮಾವೇಶದಲ್ಲಿ ಕನ್ನಡ ಚಿತ್ರರಂಗದ ಗಣ್ಯಾತಿಗಣ್ಯರು ಪಾಲ್ಗೊಂಡಿದ್ದು, ಇಂದು ಚಿತ್ರೋಧ್ಯಮ ಸಂಪೂರ್ಣ ಬಂದ್ ಆಗಿದೆ. ನಟರಾದ ಪುನೀತ್ ರಾಜ್‌ಕುಮಾರ್, ಯಶ್, ಪ್ರೇಮ್, ದುನಿಯಾ ವಿಜಿ ಸೇರಿದಂತೆ ಹಲವು ನಾಯಕ ನಟರು, ಪೋಷಕ ನಟರು, ನಿರ್ದೇಶಕರು ಮತ್ತು ತಂತ್ರಜ್ಞರು ಪಾಲ್ಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


