ಈಗಿನ ಸುದ್ದಿ

ಶಾಸಕ ಪುತ್ರನ ಸಾವು: ದೆಹಲಿಯಲ್ಲಿ ಈಶಾನ್ಯ ಭಾರತೀಯರ ಪ್ರತಿಭಟನೆ

ಶಾಸಕ ಪುತ್ರನ ಸಾವು: ದೆಹಲಿಯಲ್ಲಿ ಈಶಾನ್ಯ ಭಾರತೀಯರ ಪ್ರತಿಭಟನೆ
ಚಿತ್ರ ಕೃಪೆ: ಎನ್‌ಡಿಟಿವಿ
Published On :

ನವದೆಹಲಿ: ಅರುಣಾಚಲ ಪ್ರದೇಶದ ಶಾಸಕ ನಿಡೋ ಪಲ್ಲವಿ ಅವರ ಪುತ್ರ ನಿಡೋ ತಾನಿಯ ಸಾವನ್ನು ಖಂಡಿಸಿ ಈಶಾನ್ಯ ಭಾರತೀಯ ವಿದ್ಯಾರ್ಥಿಗಳು ದೆಹಲಿಯ ಲಜಪತ್ ನಗರದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ನಿಡೋ ತಾನಿಯನ ಮೃತ ದೇಹ ಕಳೆದ ಶುಕ್ರವಾರ ಆತನ ದೆಹಲಿ ಫ್ಲಾಟ್‌ನಲ್ಲಿ ಪತ್ತೆಯಾಗಿತ್ತು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ದೇಶಾದ್ಯಂತ ಇದು ಚರ್ಚೆಗೆ ಗ್ರಾಸವಾಗಿದೆ. ಈಶಾನ್ಯ ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ಅರುಣಾಚಲ ಪ್ರದೇಶದ ನೂರಾರು ವಿದ್ಯಾರ್ಥಿಗಳು ನಿಡೋ ತಾನಿಯ ಥಳಿತಕ್ಕೊಳಗಾಗಿದ್ದ ದೆಹಲಿಯ ಲಜಪತ್ ನಗರದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೆ ತಪ್ಪಿತಸ್ಥರನ್ನು ಈ ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಈ ನಡುವೆ ನಿಡೋ ತಾನಿಯನ್ ಸಾವನ್ನು ಖಂಡಿಸಿರುವ ಅರುಣಾಚಲ ಪ್ರದೇಶದ ಸಂಸದರು ಇಂದು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ ತಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಸೂಕ್ತ ಭದ್ರತೆ ನೀಡುವಂತೆ ಮನವಿ ಮಾಡಿದ್ದಾರೆ. ಅಲ್ಲದೆ ನಿಡೋ ತಾನಿಯ ಸಾವಿಗೆ ಕಾರಣರಾದ ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು ಎಂದು ಕೇಳಿಕೊಂಡಿದ್ದಾರೆ. ಅಂತೆಯೇ ಅರುಣಾಚಲ ಪ್ರದೇಶದ ಕೆಲ ಬಿಜೆಪಿ ಶಾಸಕ ಮತ್ತು ಸಂಸದರು ದೆಹಲಿ ಬಿಜೆಪಿ ಮುಖಂಡ ಹರ್ಷವರ್ಧನ್ ಅವರನ್ನು ಭೇಟಿಮಾಡಿದ್ದು, ನಿಡೋ ತಾನಿಯ ಸಾವು ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸಲು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆಯುವಂತೆ ಮನವಿ ಮಾಡಿದ್ದಾರೆ.

ಆಫ್ರಿಕಾ ಮತ್ತು ಈಶಾನ್ಯ ಭಾರತೀಯರೇ ಹೆಚ್ಚಾಗಿ ವಾಸಿಸುತ್ತಿರುವ ದಕ್ಷಿಣ ದೆಹಲಿಯ ಲಜಪತ್ ನಗರಕ್ಕೆ ಕಳೆದ ಜನವರಿ 29ರಂದು ತನ್ನ ಸ್ನೇಹಿತನನ್ನು ಹುಡುಕಿಕೊಂಡು ನಿಡೋ ತಾನಿಯ  ತೆರಳಿದ್ದನು. ಲಜಪತ್ ನಗರದ ಅಂಗಡಿಯೊಂದರ ಮುಂದೆ ಕುಳಿತಿದ್ದ ಕೆಲ ಯುವಕರು ನಿಡೋ ತಾನಿಯನ ಸ್ಪೈಕ್ ಹೇರ್ ಸ್ಟೈಲ್ ಅನ್ನು ಕಂಡು ಹಾಸ್ಯ ಮಾಡಿದ್ದಾರೆ. ಈ ವೇಳೆ ನಿಡೋ ತಾನಿಯ ಮತ್ತು ಆ ಯುವಕರ ಗುಂಪಿನ ನಡುವೆ ವಾಗ್ವಾದ ಉಂಟಾಗಿ ಇಬ್ಬರು ಪರಸ್ಪರ ಘರ್ಷಣೆಗೆ ಇಳಿದಿದ್ದಾರೆ. ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರು ಎರಡೂ ಗುಂಪನ್ನು ಸಮಾಧಾನಗೊಳಿಸಿ ಮನೆಗೆ ಕಳುಹಿಸಿದ್ದಾರೆ.

ನಂತರ ಮನೆಗೆ ತೆರಳಿ ಮಲಗಿದ್ದ ನಿಡೋ ತಾನಿಯಾ ಜನವರಿ 30ರಂದು ಸಾವನ್ನಪ್ಪಿದ್ದಾನೆ. ಮೇಲ್ನೋಟಕ್ಕೆ ನಿಡೋ ತಾನಿಯ ಸಾವಿಗೆ ಆತನ ಮೈ ಮೇಲೆ ಬಿದ್ದಿರುವ ಮೂಗೇಟುಗಳೇ ಕಾರಣ ಎನ್ನಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡಿರು ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.