ಟೊಕ್ಯೊ: ಕೆಲಸದ ಸ್ಥಳದಲ್ಲಿ ಅಧಿಕ ಒತ್ತಡದಿಂದಾಗಿ ಜಪಾನ್ ನಲ್ಲಿ ಸುಮಾರು ಶೇಕಡಾ 60ರಷ್ಟು ಮಹಿಳೆಯರಿಗೆ ಪ್ರೀತಿಸಲು ಮನಸ್ಸು, ಸಮಯ ಎರಡೂ ಇಲ್ಲವಂತೆ. ಹಾಗಂತ ಆನ್ ಲೈನ್ ಸಮೀಕ್ಷೆ ಹೇಳಿದೆ.
ಜಪಾನ್ ನಲ್ಲಿ ಪುರುಷರಂತೆಯೇ ಮಹಿಳೆಯರು ಕೂಡ ಕೆಲಸದ ಒತ್ತಡವನ್ನು ಎದುರಿಸುವುದರಿಂದ ಪ್ರೀತಿ, ಪ್ರೇಮ, ಪ್ರಣಯ ಎಂದು ಸುತ್ತಾಡದೆ ಮನೆಗೆ ಬಂದು ದಣಿದಿರುವ ದೇಹಕ್ಕೆ ವಿಶ್ರಾಂತಿ ಪಡೆಯಲು ಬಯಸುತ್ತಾರೆ ಎಂದು ಕೊಕೊಲೊನಿ.ಜೆಪಿ.ಎಂಬ ಆನ್ ಲೈನ್ ಡೇಟಿಂಗ್ ಸೇವೆಯ ಸಮೀಕ್ಷೆ ಹೇಳಿದೆ.
ಕಚೇರಿ ಕೆಲಸಗಳು ತೀವ್ರ ಒತ್ತಡವನ್ನು ಉಂಟುಮಾಡುವುದಲ್ಲದೆ ಡೇಟಿಂಗ್ ಗಳು ಮತ್ತಷ್ಟು ಮನಸ್ಸಿಗೆ ಬೇಸರವನ್ನುಂಟುಮಾಡುತ್ತದೆ ಎಂದು ಕ್ಸಿನ್ಹುಯಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕೆಲಸದ ಒತ್ತಡದಿಂದ ದೇಹಕ್ಕೆ ಸುಸ್ತಾಗಿ ಪ್ರತಿ ನಾಲ್ವರಲ್ಲಿ ಒಬ್ಬರು ಮಹಿಳೆಯರು ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ಬಯಸುತ್ತಾರೆ ಎಂದು ಸಮೀಕ್ಷೆ ಹೇಳಿದೆ.
ಪುರುಷರೊಂದಿಗೆ ಡೇಟಿಂಗ್ ಹೋಗುವುದು ಸಮಯವನ್ನು ಹಾಳುಮಾಡಿದಂತೆ ಎಂದು ಅನೇಕ ಮಹಿಳೆಯರು ಭಾವಿಸುತ್ತಾರೆ. ಅದರ ಬದಲಾಗಿ ಗರ್ಭ ಧರಿಸುವುದು ಮಹಿಳೆಯರ ಗುರಿಯಾಗಿದ್ದು ಜೀವನದಲ್ಲಿ ಉತ್ತಮ ಪತಿಯನ್ನು ಪಡೆಯುವುದು ಮುಖ್ಯವಾಗುತ್ತಿದೆ
ಎಂದು ಆನ್ ಲೈ ನ್ ಡೇಟಿಂಗ್ ಸೈಟ್ ಲವ್ಲೀ ಮೀಡಿಯಾ ಹೇಳಿದೆ.
1980ರ ದಶಕದಲ್ಲಿ ಶೇಕಡಾ 60ಕ್ಕಿಂತ ಅಧಿಕ ಯುವ ಜನಾಂಗದವರು ಇಲ್ಲಿ ತಮ್ಮ 20ರ ವಯಸ್ಸಿನ ಆಸುಪಾಸಿನಲ್ಲಿ ಪ್ರೀತಿ, ಪ್ರೇಮ, ಪ್ರಣಯ, ಸಂಬಂಧಗಳನ್ನು ಹೊಂದಿದ್ದರು. ಆದರೆ ಇಂದು ಅದು ಕಡಿಮೆಯಾಗುತ್ತಿದೆ.
ಕಡಿಮೆ ಕೆಲಸದ ಸಮಯ, ಕಚೇರಿಯಲ್ಲಿ ಖಾತರಿಯ ಮಾತೃತ್ವ ಮತ್ತು ಪಿತೃತ್ವ ರಜೆಗಳು, ಕೆಲಸದ ಸ್ಥಳಗಳಲ್ಲಿ ಉತ್ತಮ ವಾತಾವರಣ ಮಹಿಳೆಯರು ಪುರುಷರೊಂದಿಗೆ ಸಂಬಂಧ ಹೊಂದಲು ಕಾರಣವಾಗುತ್ತವೆ ಎಂದು ಸಮೀಕ್ಷೆ ಹೇಳಿದೆ.