ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಗಾದೆ ಮಾತು ಎಲ್ಲರಿಗೂ ಗೊತ್ತಿರುವಂತದ್ದೇ. ಏನು ತಿನ್ನಬೇಕು? ಯಾವಾಗ ತಿನ್ನಬೇಕು? ತಿನ್ನುವ ಆಹಾರ ಹೇಗಿರಬೇಕು? ಎಂಬುದನ್ನು ನಾವು ಚೆನ್ನಾಗಿ ಅರಿತಿದ್ದರೆ ರೋಗಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಬಹುದು ಎಂಬುದೇ ಈ ಮಾತಿನ ಅರ್ಥ. ಆರೋಗ್ಯಕರವಾದ ಡಯಟ್ ಎಂದ ತಕ್ಷಣ ಕಡಿಮೆ ತಿನ್ನುವುದು ಎಂದಲ್ಲ. ಒಳ್ಳೆಯ ಆಹಾರವನ್ನು, ದೇಹಕ್ಕೆ ಶಕ್ತಿ ನೀಡುವ ವಿವಿಧ ಪೋಷಕಾಂಶಗಳಿರುವ ಆರೋಗ್ಯಕರವಾದ ಆಹಾರವನ್ನು ತಿನ್ನಬೇಕು ಎಂದು.
ಕುಟುಂಬದ ವ್ಯವಸ್ಥೆಗೆ ಆಧಾರಸ್ತಂಭವಾಗಿರುವ ಮಹಿಳೆಯರು ತಮ್ಮ ಜೀವನದ ಎಲ್ಲಾ ಹಂತಗಳಲ್ಲೂ ಉತ್ತಮ ಆಹಾರವನ್ನು ಸೇವಿಸಬೇಕು. ಮಹಿಳೆಯರು ತಮ್ಮ ದೇಹದ ರಚನೆಗೆ ಅನುಗುಣವಾಗಿ ಕೆಲವೊಂದು ವಿಟಮಿನ್ ಗಳನ್ನು ಪುರುಷರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕಾಗುತ್ತದೆ.
ಹೆಣ್ಣಿಗೆ ತನ್ನ ಬಾಲ್ಯದಲ್ಲಿ, ಯೌವನದಲ್ಲಿ, ಹೆರಿಗೆಯ ನಂತರ, ಹಾಗೆಯೇ ವೃದ್ಧಾಪ್ಯದಲ್ಲಿ ಬೇರೆ ಬೇರೆ ರೀತಿಯ ಬೇರೆ ಬೇರೆ ಪ್ರಮಾಣದ ಪೋಷಕಾಂಶಗಳು ಬೇಕಾಗುತ್ತದೆ. ಈಗಿನ ಹೆಚ್ಚಿನ ಮಹಿಳೆಯರು ಮನೆಯ ಕೆಲಸದ ಜೊತೆ ಆಫೀಸ್ ಕೆಲಸವನ್ನು ನಿಭಾಯಿಸುತ್ತಿದ್ದಾರೆ. ಹೀಗಿರುವಾಗ ಅವರ ದೇಹಕ್ಕೆ ಹೆಚ್ಚಿನ ಪೋಷಕಾಂಶಗಳ ಅಗತ್ಯವಿರುತ್ತದೆ. ಹೀಗಾಗಿ ಆರೋಗ್ಯಕರ ಜೀವನ ನಡೆಸಲು ಮಹಿಳೆಯರು ಪೌಷ್ಟಿಕಾಂಶದ ಬಗ್ಗೆ ಹೆಚ್ಚಿನ ಜ್ಞಾನ ಹೊಂದಿರಬೇಕಾಗುತ್ತದೆ.
ಹಾಗಾದರೆ ಮಹಿಳೆಯರು ಉತ್ತಮ ಆರೋಗ್ಯಕರ ಜೀವನ ನಡೆಸುವುದು ಹೇಗೆ? ಪೋಷಕಾಂಶವುಳ್ಳ ಆಹಾರ ಸೇವನೆ ಹೇಗೆ? ಈ ಕುರಿತ ಮಾಹಿತಿ ಇಲ್ಲಿದೆ...
ಜೀವನದ ಹಂತಗಳಿಗೆ ಅನುಗುಣವಾಗಿ ಪೋಷಣೆ
ವಿಭಿನ್ನ ಜೀವನ ಹಂತಗಳಲ್ಲಿ ಮಹಿಳೆಯರಿಗೆ ವಿಭಿನ್ನ ಪೌಷ್ಟಿಕಾಂಶದ ಅವಶ್ಯಕತೆಗಳಿವೆ. ಕಬ್ಬಿಣದ ಕೊರತೆಯ ರಕ್ತಹೀನತೆಯನ್ನು ತಡೆಗಟ್ಟಲು ಹದಿಹರೆಯದ ಹೆಣ್ಣು ಮಕ್ಕಳಿಗೆ, ಕಬ್ಬಿಣ ಮತ್ತು ಫೋಲಿಕ್ ಆಮ್ಲದಂತಹ ಹೆಚ್ಚಿನ ಪೋಷಕಾಂಶಗಳು ಅಗತ್ಯವಿರುತ್ತದೆ.
ಗರ್ಭಿಣಿಯರಿಗೆ ಗರ್ಭಾವಸ್ಥೆಯ ಸಮಯದಲ್ಲಿ ಹೆಚ್ಚುವರಿ ಪ್ರಮಾಣದ ಕ್ಯಾಲೊರಿಗಳ ಅಗತ್ಯವಿರುತ್ತದೆ ಮತ್ತು ಗರ್ಭಧಾರಣೆಯ ಮೊದಲು ಮತ್ತು ಗರ್ಭಾವಸ್ಥೆಯಲ್ಲಿ ಫೋಲಿಕ್ ಆಮ್ಲದ ಪೂರೈಕೆಯ ಅಗತ್ಯವಿರುತ್ತದೆ.
ಹಾಲುಣಿಸುವ ತಾಯಂದಿರಿಗೆ ಆರೋಗ್ಯಕರ ಎದೆ ಹಾಲಿನ ಉತ್ಪಾದನೆಯನ್ನು ಖಚಿತಪಡಿಸಿಕೊಳ್ಳಲು ಗ್ಯಾಲಕ್ಟಾಗೋಗ್ಸ್ ಎಂದು ಕರೆಯಲ್ಪಡುವ ಕೆಲವು ಆಹಾರಗಳ ಅಗತ್ಯವಿರುತ್ತದೆ. ಜೀವನದ ನಂತರದ ಅಥವಾ ಋತುಬಂಧದ ಹಂತಗಳಲ್ಲಿ ಆಸ್ಟಿಯೊಪೊರೋಸಿಸ್ನಂತಹ ಪರಿಸ್ಥಿತಿಗಳನ್ನು ತಡೆಗಟ್ಟಲು ಮಹಿಳೆಯರು ಕ್ಯಾಲ್ಸಿಯಂ-ಭರಿತ ಆಹಾರಗಳ ಸೇವನೆಯ ಮೇಲೆ ಹೆಚ್ಚು ಗಮನಹರಿಸಬೇಕಾಗುತ್ತದೆ.
ಊಟದ ಪ್ರಮಾಣ ಮತ್ತು ಗುಣಮಟ್ಟ
ಮನೆಕೆಲಸ ಹಾಗೂ ವೃತ್ತಿಜೀವನದ ಕೆಲಸಗಳಲ್ಲಿ ತೊಡಗುವ ಮಹಿಳೆಯರಿಗೆ ತಮ್ಮ ಆಹಾರದ ಕ್ರಮ ಹಾಗೂ ಆರೋಗ್ಯದ ಮೇಲೆ ಗಮನಹರಿಸುವುದನ್ನು ಮರೆಯುತ್ತಾರೆ. ವ್ಯರ್ಥ ಮಾಡಬಾರದೆಂಬ ಕಾರಣಕ್ಕೆ ಮನೆಯವರು ಬಿಟ್ಟ ಊಟವನ್ನು ಸೇವಿಸಿ, ಸಾಕೆಂದು ಸುಮ್ಮನಾಗುವವರೂ ಇರುತ್ತದೆ. ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿವಹಿಸುವ ಮಹಿಳೆಯರಿಗೆ ತಮ್ಮ ಆರೋಗ್ಯದ ಮೇಲೆ ಗಮನಹರಿಸುವುದನ್ನೇ ಮರೆತುಬಿಡುತ್ತಾರೆ. ಸಾಮಾನ್ಯವಾದಿ ಪ್ರತಿದಿನ ಒಬ್ಬ ಮಹಿಳೆ ದಿನಕ್ಕೆ ಕನಿಷ್ಠ 1,600 ಕ್ಯಾಲೊರಿಗಳು ಮತ್ತು 50 ಗ್ರಾಂ ಪ್ರೋಟೀನ್ ಅನ್ನು ಸೇವಿಸಬೇಕಾಗುತ್ತದೆ. ಸೇವಿಸುವ ಆಹಾರವು ಪೌಷ್ಟಿಕಾಂಶಗಳಿಂದ ಕೂಡಿರಬೇಕು ಮತ್ತು ಗುಣಮಟ್ಟವುಳ್ಳದ್ದಾಗಿರಬೇಕಾಗುತ್ತದೆ.
ದೈಹಿಕ ಚಟುವಟಿಕೆ
ನಿಯಮಿತ ದೈಹಿಕ ಚಟುವಟಿಕೆಯು ಅಭ್ಯಾಸವು ಹೃದಯ ಕಾಯಿಲೆ, ಅಧಿಕ ರಕ್ತದೊತ್ತಡ, ಟೈಪ್ 2 ಡಯಾಬಿಟಿಸ್, ಬೊಜ್ಜು, ಕರುಳಿನ ಕ್ಯಾನ್ಸರ್ ಮತ್ತು ಅಕಾಲಿಕ ಮರಣದ ಅಪಾಯಗಳನ್ನು ಕಡಿಮೆ ಮಾಡುವುದು ಸೇರಿದಂತೆ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಈ ಬಗ್ಗೆ ತಿಳುವಳಿಕೆಯಿದ್ದರೂ ಸಾಕಷ್ಟು ಮಹಿಳೆಯರು ತಮಗಾಗಿ ಸಮಯವನ್ನು ಕೊಡುವುದಿಲ್ಲ.
ಮಹಿಳೆಯರು ವ್ಯಾಯಾಮ ಮಾಡುವುದರಿದ ಆರೋಗ್ಯದ ಜೊತೆಗೆ ಮಾನಸಿಕ ಸ್ಥಿತಿ ಕೂಡ ಸುಧಾರಿಸುತ್ತದೆ, ಕಿರಿಕಿರಿಯನ್ನೂ ಕೂಡ ಕಡಿಮೆ ಮಾಡುತ್ತದೆ. ಶಕ್ತಿಯ ಮಟ್ಟವನ್ನು ಸುಧಾರಿಸುತ್ತದೆ. ವಾರದಲ್ಲಿ ಐದು ದಿನಗಳವರೆಗೆ ದಿನಕ್ಕೆ ಕನಿಷ್ಠ 30-45 ನಿಮಿಷಗಳ ಕಾಲ ವ್ಯಾಯಾಮ ಮಾಡುವುದು ಉತ್ತಮ..
ಸೂಕ್ಷ್ಮ ಪೋಷಕಾಂಶ, ಕಬ್ಬಿಣಾಂಶವುಳ್ಳ ಆಹಾರ ಸೇವಿಸಿ:
ಸೂಕ್ಷ್ಮ ಪೋಷಕಾಂಶವುಳ್ಳ ಆಹಾರ ಎಂದರೆ ಜೀವಸತ್ವಗಳುಳ್ಳ ಕಬ್ಬಿಣಾಂಶವುಳ್ಳ ಆಹಾರಗಳಾಗಿವೆ. ಉತ್ತಮ ಆರೋಗ್ಯಕ್ಕೆ ಎಲ್ಲಾ ಜೀವಸತ್ವಗಳು ಮತ್ತು ಕಬ್ಬಿಣಾಂಶಗಳು ಪ್ರಮುಖವಾಗಿವೆ. ಕಬ್ಬಿಣವನ್ನು ಹಿಮೋಗ್ಲೋಬಿನ್ನ ಪ್ರಮುಖ ಅಂಶವೆಂದು ಪರಿಗಣಿಸಲಾಗುತ್ತದೆ.
ಕಬ್ಬಿಣದ ಕೊರತೆ ಉಂಟಾದಾಗ, ದೇಹದಲ್ಲಿನ ಕೆಂಪು ರಕ್ತ ಕಣಗಳು ಸರಿಯಾಗಿ ಬೆಳವಣಿಗೆಯಾಗಲು ಸಾಧ್ಯವಾಗುವುದಿಲ್ಲ, ಇದರಿಂದಾಗಿ ಮಹಿಳೆಯರು ರಕ್ತಹೀನತೆ ಅಂದರೆ ರಕ್ತದ ಕೊರತೆಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.
ಫೋಲೇಟ್: ಜೀವಕೋಶದ ಆರೋಗ್ಯವನ್ನು ಕಾಪಾಡಿಕೊಳ್ಳಲು ಫೋಲೇಟ್ ಅಥವಾ ವಿಟಮಿನ್ ಬಿ 9 ಬಹಳ ಮುಖ್ಯ. ಆದ್ದರಿಂದ, ನಿಮ್ಮ ಆಹಾರದಲ್ಲಿ ಫೋಲೇಟ್ ಭರಿತ ಆಹಾರವನ್ನು ನೀವು ಸೇರಿಸಬೇಕುತ್ತದೆ. ಈ ಪೋಷಕಾಂಶವು ದೇಹವು ರಕ್ತ ಕಣಗಳನ್ನು ಮತ್ತು ಹೊಸ ಕೋಶಗಳಿಗೆ ಡಿಎನ್ಎ ಮಾಡಲು ಸಹಾಯ ಮಾಡುತ್ತದೆ.
ಗರ್ಭಾವಸ್ಥೆಯ ಮೊದಲ ಮೂರು ತಿಂಗಳಲ್ಲಿ ಸಂಭವಿಸುವ ನ್ಯೂರಲ್ ಟ್ಯೂಬ್ ದೋಷಗಳು ಎಂದು ಕರೆಯಲ್ಪಡುವ ಕೆಲವು ಜನ್ಮ ದೋಷಗಳನ್ನು ತಡೆಗಟ್ಟುವಲ್ಲಿ ಇದು ಸಹಾಯ ಮಾಡುತ್ತದೆ ಮತ್ತು ಮಗುವಿನ ಅಕಾಲಿಕ ಜನನಗಳು ಮತ್ತು ಕಡಿಮೆ ಜನನ ತೂಕವನ್ನು ತಡೆಯಲು ಇದು ಸಹಾಯ ಮಾಡುತ್ತದೆ. ಸೂಕ್ಷ್ಮ ಪೋಷಕಾಂಶ, ಕಬ್ಬಿಣಾಂಶವುಳ್ಳ ಆಹಾರಗಳನ್ನು ಹಸಿರು ಎಲೆಗಳ ತರಕಾರಿಗಳು, ಕಿತ್ತಳೆ ರಸ, ಚಿಕನ್'ನ್ ಸೇವನೆಯಿಂದ ಪಡೆದುಕೊಳ್ಳಬಹುದಾಗಿದೆ.
ವಿಟಮಿನ್ ಡಿ:
ಕ್ಯಾಲ್ಸಿಯಂನೊಂದಿಗೆ ವಿಟಮಿನ್ ಡಿ ಸೇವನೆ ಮಾಡಿದರೆ, ಮೂಳೆಗಳು ಬಲಗೊಳ್ಳುತ್ತವೆ. ಇದು ಆಸ್ಟಿಯೊಪೊರೋಸಿಸ್ ಅನ್ನು ತಡೆಯುತ್ತದೆ. ಇದು ಜೀವಕೋಶಗಳಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ. ಮೀನು, ಅಣಬೆ, ಧಾನ್ಯಗಳ ಸೇವನೆಯಿಂದ ವಿಟಮಿನ್ ಡಿಯನ್ನು ವೃದ್ಧಿಸಿಕೊಳ್ಳಬಹುದು.
ವಿಟಮಿನ್ ಬಿ 12:
ವಿಟಮಿನ್ ಬಿ 12 ಇದು ದೇಹದ ನರ ಕೋಶಗಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ದೇಹದ ಕೆಂಪು ರಕ್ತ ಕಣಗಳು ಮತ್ತು ಡಿಎನ್‌ಎಗಳನ್ನು ತಯಾರಿಸಲು ವಿಟಮಿನ್ ಬಿ 12 ಇದು ಸಹಾಯ ಮಾಡುತ್ತದೆ. ದೇಹವು ಸ್ವತಃ ವಿಟಮಿನ್ ಬಿ 12 ಅನ್ನು ತಯಾರು ಮಾಡುವುದಿಲ್ಲ. ಆದ್ದರಿಂದ ನೀವು ವಿಟಮಿನ್ ಬಿ 12 ಪಡೆಯಲು ವಿಟಮಿನ್ ಬಿ 12 ಸಮೃದ್ಧವಾಗಿರುವ ಆಹಾರ ಸೇವಿಸಬೇಕು. ಈ ಪೌಷ್ಠಿಕಾಂಶವು ಮುಖ್ಯವಾಗಿ ಪ್ರಾಣಿ ಮೂಲಗಳಲ್ಲಿ ಇರುತ್ತದೆ.
ಕ್ಯಾಲ್ಸಿಯಂ:
ಇದು ಬಲವಾದ ಮೂಳೆಗಳ ಹೊಂದಲು ಸಹಾಯ ಮಾಡುತ್ತದೆ. ದೇಹದ ಮೂಳೆಗಳ ರಚನೆಯಲ್ಲಿ ಬಹಳ ಅವಶ್ಯವಿರುವ ಪೋಷಕಾಂಶ ವೆಂದರೆ ಕ್ಯಾಲ್ಸಿಯಂ. ಕ್ಯಾಲ್ಸಿಯಂಯುಕ್ತ ಆಹಾರವನ್ನು ಸೇವಿಸುವುದರಿಂದ ಜೀವನಪರ್ಯಂತ ಮೂಳೆಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಕ್ಯಾಲ್ಸಿಯಂ ಮೂಳೆಗಳ ರಚನೆ ಹಾಗೂ ನಿರ್ವಹಣೆಯನ್ನು ಮಾಡಿದರೆ. ವಿಟಮಿನ್-ಡಿ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಸಹಕಾರಿ. ಆದ್ದರಿಂದ ಹೆಣ್ಣುಮಕ್ಕಳಿಗೆ ಅವರ ಆಹಾರದಲ್ಲಿ ಕ್ಯಾಲ್ಸಿಯಂ ಹಾಗು ವಿಟಮಿನ್ ಡಿ ಒಳಗೊಂಡಿರುವುದು ಅತ್ಯಗತ್ಯ. ಹಸಿರು ಎಲೆಗಳ ತರಕಾರಿಗಳು, ಹಾಲು ಮತ್ತು ಹಾಲಿನ ಉತ್ಪನ್ನಗಳು, ಸೋಯಾ ಬೀನ್ ಸೇವನೆಯಿಂದ ಕ್ಯಾಲ್ಸಿಯಂನ್ನು ಪಡೆದುಕೊಳ್ಳಬಹುದು.
Advertisement