ಹಿನ್ನೋಟ 2021: ವಿವಾದ ಸೃಷ್ಟಿಸಿ, ಸುದ್ದಿಗೆ ಗ್ರಾಸವಾದ ನಾಯಕರ ಹೇಳಿಕೆಗಳು

2021ರಲ್ಲಿ ಅನೇಕ ನಾಯಕ-ನಾಯಕಿಯರು ವಿವಾದ ಮಾಡಿಕೊಂಡಿದ್ದಾರೆ ಅಥವಾ ಅವರನ್ನೇ ಹುಡುಕಿಕೊಂಡು ವಿವಾದಗಳು ಬಂದಿವೆ ಎಂದೇ ಹೇಳಬಹುದು. ಯಾವ ಯಾವ ಪ್ರಮುಖ ನಾಯಕರು-ನಾಯಕಿಯರು ಕಾಂಟ್ರವರ್ಸಿಯಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

2021ರಲ್ಲಿ ಅನೇಕ ನಾಯಕ-ನಾಯಕಿಯರು ವಿವಾದ ಮಾಡಿಕೊಂಡಿದ್ದಾರೆ ಅಥವಾ ಅವರನ್ನೇ ಹುಡುಕಿಕೊಂಡು ವಿವಾದಗಳು ಬಂದಿವೆ ಎಂದೇ ಹೇಳಬಹುದು. ಯಾವ ಯಾವ ಪ್ರಮುಖ ನಾಯಕರು-ನಾಯಕಿಯರು ಕಾಂಟ್ರವರ್ಸಿಯಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ...

2021 ಯಾವಾಗ ಮುಗಿಯುತ್ತದೆ ಎಂದು ಕೆಲವರು ಕಾಯುತ್ತಿದ್ದಾರೆ. ಸಾಂಕ್ರಾಮಿಕ ರೋಗ ಕೊರೊನಾ ವೈರಸ್ ದಾಳಿ ಮಾಡಿ ಸೃಷ್ಟಿಸಿದ ಅವಾಂತರ ಮಾತ್ರ ಒಂದೆಡರಲ್ಲ. ಸಾವು-ನೋವು, ಆಸ್ತಿ-ಪಾಸ್ತಿ ಹಾನಿ, ಕೆಲಸ ಕಳೆದುಕೊಂಡು ಬೀದಿಗೆ ಬಂದವರ ಗೋಳು ಹೇಳತೀರದು. ಈ ನಡುವೆ ಕೆಲ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕೆಲ ನಾಯಕ ಹಾಗೂ ನಾಯಕಿಯರು ವಿವಾದ ಮಾಡಿಕೊಂಡರೋ ಅಥವಾ ವಿವಾದವನ್ನು ಮೈಮೇಲೆ ಎಳೆದುಕೊಂಡರೋ ಗೊತ್ತಿಲ್ಲ. ಅವರ ಹೆಸರಿಗೆ ಕಾಂಟ್ರವರ್ಸಿ ಪದ ಅಂಟಿಕೊಂಡಿತು. ಆ ಬಗ್ಗೆ ವಿವರ ಇಲ್ಲಿದೆ.

ರಮೇಶ್ ಕುಮಾರ್
ವಿಧಾನ ಸಭೆಯ ಕಲಾಪದ ಸಂದರ್ಭದಲ್ಲಿ ಸಭಾಪತಿಗಳ ಪರಿಸ್ಥಿತಿಯ ಕುರಿತಾಗಿ ಹೇಳಿಕೆ ನೀಡುವ ಭರದಲ್ಲಿ ಮಾಜಿ ಸ್ಪೀಕರ್ ಕೆಆರ್ ರಮೇಶ್ ಕುಮಾರ್ ಅತ್ಯಾಚಾರ ನಡೆಯುವ ಸಂದರ್ಭದ ವಿವಾದಿತ ಉದಾಹರಣೆಯೊಂದನ್ನು ನೀಡುವ ಮೂಲಕ ಅಸೂಕ್ಷ್ಮತೆಯಿಂದ ವರ್ತಿಸಿದ್ದರು. ಅತಿವೃಷ್ಠಿ ಹಾಗೂ ಪ್ರವಾಹ ಹಾನಿ ವಿಚಾರವಾಗಿ ನಿಯಮ 69ರ ಅಡಿಯಲ್ಲಿ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರು ನಮಗೂ ಮಾತನಾಡಲು ಅವಕಾಶ ಕೊಡಿ ಎಂದು ಸ್ಪೀಕರ್ ವಿಶ್ವೇಶ್ವರ ಕಾಗೇರಿ ಅವರಲ್ಲಿ ಮನವಿ ಮಾಡಿದ್ದರು. 

ಇದಕ್ಕೆ ಉತ್ತರಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಎಷ್ಟು ಬೇಕಾದರೂ ಮಾತನಾಡಲು ಅವಕಾಶ ಕೊಡುತ್ತೇನೆ, ಗಮನ‌ ಸೆಳೆಯುವ ಸೂಚನೆ ಕೈಬಿಟ್ಟುಬಿಡುತ್ತೇನೆ. ಉಳಿದಿದ್ದನ್ನು ಮುಂದುವರಿಸಿಕೊಂಡು ಹೊಗುತ್ತೇನೆ ಎಂದು ಹೇಳಿದರು. ಈ ಮಾತುಕತೆಯ ವೇಳೆ ಎದ್ದು ನಿಂತು ಮಾತನಾಡಿದ ರಮೇಶ್ ಕುಮಾರ್ ಇಂಗ್ಲಿಷ್ ನುಡಿಗಟ್ಟನ್ನು ಉಲ್ಲೇಖಿಸಿ ನೀಡಿದ ಹೇಳಿಕೆ ವಿವಾದ ಸೃಷ್ಟಿಸಿತ್ತು. 

‘ದೆರ್‌ ಈಸ್‌ ಎ ಸೇಯಿಂಗ್‌, ವೆನ್‌ ರೇಪ್‌ ಈಸ್‌ ಇನೆವಿಟೆಬಲ್‌ ಲೆಟ್‌ ಲೇಡೌನ್‌ ಅಂಡ್‌ ಎಂಜಾಯ್‌ (ಅಂದರೆ, ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಮಲಗಿ ಆನಂದಿಸಿ) ಎಂದು ಹೇಳಿದ್ದರು. ಈ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. ರಾಷ್ಟ್ರಮಟ್ಟದಲ್ಲಿ ರಮೇಶ್ ಕುಮಾರ್ ಅವರ ಹೇಳಿಕೆಗೆ ಖಂಡನೆಗಳು ವ್ಯಕ್ತವಾಗಿದ್ದವು.

ಹಂಸಲೇಖ
ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಹಂಸಲೇಖ ಅವರು, ದಲಿತರ ಮನೆಗೆ ಪೇಜಾವರ ಶ್ರೀಗಳಯು ಹೋಗಬಹುದು. ಆದರೆ, ಅವರ ಮನೆಯಲ್ಲಿ ಕೋಳಿ ಕೊಟ್ಟರೆ ತಿನ್ನಲು ಸಾಧ್ಯವಾ ಎಂದಿದ್ದರು. ಅವರ ಈ ಹೇಳಿಕೆ ಕುರಿತು ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು.

ಇದಾದ ಬಳಿಕ ಹಂಸಲೇಖ ಅವರು ತಾವು ಆಡಿದ ಮಾತಿಗೆ ಕ್ಷಮೆ ಕೋರಿದ್ದರು. ಈ ಸಂಬಂಧ ಬಸವನಗುಡಿ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ ಮುರಳೀಧರ್ ರಾವ್


ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ ಮುರಳೀಧರ್ ರಾವ್ ಅವರು ನೀಡಿದ್ದ ಹೇಳಿಕೆಯೊಂದು ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ಬ್ರಾಹ್ಮಣರು, ಬನಿಯಾಗಳು ನನ್ನ ಜೇಬಿನಲ್ಲಿದ್ದಾರೆ ಎಂದು ಹೇಳಿದ್ದರು. 

ತೇಜಸ್ವಿ ಸೂರ್ಯ


ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದರು. ಮುಸ್ಲಿಂ, ಕ್ರೈಸ್ತರನ್ನು ವಾಪಸ್ ಹಿಂದೂ ಧರ್ಮಕ್ಕೆ ಕರೆತರದೆ ಬೇರೆ ದಾರಿಯೇ ಇಲ್ಲ ಎಂದು ಹೇಳಿದ್ದರು. ಹೇಳಿಕೆ ವಿವಾದದ ಹಾದಿ ಹಿಡಿಯುತ್ತಿದ್ದಂತೆಯೇ ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತ ಅವರು ಹೇಳಿಕೆಯನ್ನು ಹಿಂಪಡೆದುಕೊಂಡಿದ್ದರು.

ನಾಸಿರುದ್ದೀನ್ ಶಾ
ಬಾಲಿವುಡ್‌ನ ಹಿರಿಯ ನಟ ನಾಸಿರುದ್ದೀನ್ ಶಾ ಆಗಾಗ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ವಿವಾದಗಳಲ್ಲಿ ಸಿಲುಕುತ್ತಲೇ ಇರುತ್ತಾರೆ. ನಟ ಅನುಪಮ್ ಖೇರ್ ಜೊತೆಗಿನ ಜಗಳ ಹಾಗೂ ದಿವಂಗತ ನಟ ರಾಜೇಶ್ ಖನ್ನಾ ಕುರಿತಾಗಿ ಹೇಳಿಕೆ ಸೇರಿದಂತೆ ಈ ಹಿಂದೆ ಅನೇಕ ಬಾರಿ ವಿವಾದದ ಸುಳಿಯಲ್ಲಿ ನಾಸಿರುದ್ದೀನ್ ಶಾ ಸಿಲುಕಿದ್ದರು. ಇದರಂತೆ ಮತ್ತೆ ಹೇಳಿಕೆಯೊಂದನ್ನು ನೀಡುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಮೊಘಲರನ್ನು ‘ನಿರಾಶ್ರಿತರು’ ಎಂದು ನಾಸಿರುದ್ದೀನ್ ಶಾ ಕರೆದಿದ್ದಾರೆ.ನಾಸಿರುದ್ದೀನ್ ಶಾ ಅವರ ಈ ಹೇಳಿಕೆ ವಿವಾದದ ಬಿರುಗಾಳಿಯನ್ನೇ ಎಬ್ಬಿಸಿದೆ. ನಾಸಿರುದ್ದೀನ್ ಶಾ ಅವರ ಕೊಟ್ಟಿರುವ ಈ ಹೇಳಿಕೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

ಕಂಗನಾ ರಣಾವತ್

ಬಾಲಿವುಡ್ ನಟಿ ಕಂಗನಾ ರಣಾವತ್ ಅವರು 2021ರಲ್ಲಿ ಸಾಕಷ್ಟು ವಿವಾದಾತ್ಮಕ ಹೇಳಿಕೆ ನೀಡಿದ್ದು, ಆಗಾಗ ಸುದ್ದಿಗೆ ಗ್ರಾಸವಾಗುತ್ತಲೇ ಇದ್ದಾರೆ. ಈ ಪೈಕಿ 1947ರಲ್ಲಿ ದೇಶಕ್ಕೆ ಸಿಕ್ಕಿದ್ದು ಸ್ವಾತಂತ್ರ್ಯ ಅಲ್ಲ, ಅದು ಭಿಕ್ಷೆ. ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು 2014ರಲ್ಲಿ ಎಂದು ಹೇಳಿದ್ದರು. ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಆಕ್ಷೇಪಗಳು ವ್ಯಕ್ತವಾಗಿದ್ದವು.

ಬಸನಗೌಡಪಾಟೀಲ ಯತ್ನಾಳ


ಬೆಳಗಾವಿ ಅಧಿವೇಶನದಲ್ಲಿ ಮಾತನಾಡಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಹಿಂದಿ ಹೇರಿಕೆಯನ್ನು ವಿರೋಧಿಸುತ್ತೀರಿ. ಆದರೆ, ಉರ್ದು ಹೇರಿಕೆಯನ್ನು ಏಕೆ ವಿರೋಧಿಸುವುದಿಲ್ಲ ಎಂದು ಪ್ರಶ್ನಿಸಿದ್ದರು. ಭಾರತದಲ್ಲಿ ಕನ್ನಡ, ಮರಾಠಿಯಂತಹ ಭಾಷೆಗಳು ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೆ ಭಾರತ ಇರುತ್ತದೆ. ಈ ಭಾಷೆಗಳು ಹೋದರೆ ಎಲ್ಲ ಕಡೆ ಬರೀ ಉರ್ದು ಬೋರ್ಡ್‌ಗಳನ್ನು ಮಾತ್ರ ನೋಡಬೇಕಾಗುತ್ತದೆ ಎಂದು ಹೇಳಿದ್ದರು. ಈ ಹೇಳಿಕೆ ವಿವಾದ ಸೃಷ್ಟಿಸಿತ್ತು.

ಆರಗ ಜ್ಞಾನೇಂದ್ರ
ಪೊಲಿಸರ ಭ್ರಷ್ಟಾಚಾರದ ಬಗ್ಗೆ ಗೃಹ ಸಚಿವರು ನೀಡಿದ್ದ "ನೀವು ಪೊಲೀಸರು ನಾಯಿಗಳಿದ್ದಂತೆ" ಹೇಳಿಕೆ ಭಾರಿ ವಿವಾದ ಸೃಷ್ಟಿಸಿತ್ತು. ಪೊಲೀಸರು ಕೆಟ್ಟು ಹಾಳಾಗಿ ಹೋಗಿದ್ದಾರೆ. 

ಅಕ್ರಮ ಗೋಸಾಣೆ ತಡೆಯದ ಚಿಕ್ಕಮಗಳೂರು ಪೊಲೀಸರ ವಿರುದ್ಧ ಕಿಡಿಕಾರಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಪೊಲೀಸರು ಲಂಚ ತಗೊಂಡು ಬಿದ್ದಿರುತ್ತಾರೆ ನಾಯಿ ಹಾಗೆ! ನಿಮ್ಮ ಪೊಲೀಸರಿಗೆ ಆತ್ಮ ಗೌರವ ಬೇಕು ಅಲ್ಲ ರೀ? ಒಬ್ಬ ಗೃಹ ಸಚಿವರಾಗಿ ನಾನು ಇರಬೇಕು ಬೇಡವಾ? ಎಂಜಿಲು ಕಾಸು ಪಡೆದು ಅವಕಾಶ ಕೊಡ್ತಾರೆ. ನಿಮ್ಮ ಪೊಲೀಸರಿಗೆ ಆತ್ಮ ಗೌರವ ಬೇಕು ಅಲ್ಲರೀ? ಕೊಡುವ ಸಂಬಳ ಕಡಿಮೆ ಇದೆಯಾ? ಕೈ ತುಂಬಾ ಬರುವ ಸಂಬಳ ಇಲಾಖೆ ಕೊಡ್ತಿದೆಯಲ್ಲಾ ಎಂದು ಹೇಳಿದ್ದರು. ಪೊಲೀಸ್ ಇಲಾಖೆಯ ಭ್ರಷ್ಟಾಚಾರ ಬಗ್ಗೆ ಗೃಹ ಸಚಿವರು ಆಡಿದ್ದ ಮಾತು ಪೊಲೀಸ್ ವಲಯದಲ್ಲಿ ಭಾರೀ ಸಂಚಲನ ಮೂಡಿಸಿತ್ತು. 

ಉಮಾ ಭಾರತಿ


ಸರ್ಕಾರಿ ಅಧಿಕಾರಿಗಳು ಇರುವುದೇ ನಮ್ಮ ಚಪ್ಪಲಿ ಎತ್ತಿಡಲು' ಎಂದು ಬಿಜೆಪಿ ನಾಯಕಿ ಹಾಗೂ ಮಾಜಿ ಕೇಂದ್ರ ಸಚಿವೆ ಉಮಾ ಭಾರತಿ ಅವರು ನೀಡಿದ್ದ ಹೇಳಿಕೆ ವಿವಾದ ಸೃಷ್ಟಿಸಿತ್ತು.  ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿ, ಭಾರೀ ಟೀಕೆ ವ್ಯಕ್ತವಾಗಿತ್ತು. ವಿವಾದ ತಾರಕಕ್ಕೇರುತ್ತಿದ್ದಂತೆಯೇ ತಾನು ಬಳಸಿದ ಭಾಷೆಗೆ ಉಮಾ ಭಾರತಿ ವಿಷಾದ ವ್ಯಕ್ತಪಡಿಸಿದ್ದರು.

ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು
ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಹಾಗೂ ವಿವಾದಕ್ಕೂ ಅವಿನಾಭಾವ ಸಂಬಂಧವಿದೆ. ಪಂಜಾಬ್ ಕಾಂಗ್ರೆಸ್‌ನಲ್ಲಿ ಕೋಲಾಹಲ ಎಬ್ಬಿಸಿದ ಸಿಧು ಸೈಲೆಂಟ್ ಆಗಿದ್ದಾರೆ ಅನ್ನುವಷ್ಟರಲ್ಲೇ ಮತ್ತೆ ಬಹುದೊಡ್ಡ ವಿವಾದ ಮೈಮೇಲೆ ಎಳೆದುಕೊಂಡಿದ್ದರು.

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನನ್ನ ಅಣ್ಣ, ಕ್ರಿಕೆಟ್ ಆಡುತ್ತಿದ್ದ ದಿನಗಳಿಂದಲೂ ಇಮ್ರಾನ್ ಖಾನ್ ನನ್ನ ಗೆಳೆಯ ಹಾಗೂ ಅಣ್ಣನಂತಿದ್ದರು ಎಂದು ಹೇಳಿದ್ದರು. ಸಿಧು ಅವರ ಈ ಹೇಳಿಕೆ ಭಾರೀ ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ಆದರೆ, ಕಾಂಗ್ರೆಸ್ ಪಕ್ಷ ಮುಜುಗರಕ್ಕೊಳಗಾಗುವಂತೆ ಮಾಡಿತ್ತು.

ಪ್ರಿಯಾಂಕ್ ಖರ್ಗೆ 
ಜವಹರಲಾಲ್ ನೆಹರೂ ಅವರ ಹೆಸರನ್ನು ಹುಕ್ಕಾ ಬಾರ್‌ಗೆ ಇಡಬೇಕು, ಕಾಂಗ್ರೆಸ್ಸಿಗರು ಇಂದಿರಾ ಗಾಂಧಿ ಹೆಸರಲ್ಲಿ ಬಾರ್ ತೆರೆಯಲಿ ಎಂದು ಹೇಳಿಕೆ ನೀಡಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವಿರುದ್ಧ ಕಿಡಿಕಾರುವ ಬರದಲ್ಲಿ ಪ್ರಿಯಾಂಕ್ ಖರ್ಗೆಯವರು ವಿವಾದಾತ್ಮಕ ಹೇಳಿಕೆ ನೀಡಿದ್ದರು. ನೆಹರೂ ಅವರು ಸಿಗರೇಟ್ ಸೇದುತ್ತಿದ್ದರು ಎಂದು ಹುಕ್ಕಾ ಬಾರ್‌ಗೆ ಅವರ ಹೆಸರಿಡಲು ಹೇಳಿದ್ದಾರೆ.

ಸಿಗರೇಟ್ ಸೇದುವುದು ಅಪರಾಧವೇ? ವಾಜಪೇಯಿ ಅವರು ಹೆವಿ ಡ್ರಿಂಕರ್ ಆಗಿದ್ದರು. ಸಂಜೆ ಎರಡು ಗ್ಲಾಸ್ ವಿಸ್ಕಿ ಬೇಕಾಗಿತ್ತು ಎಂದು ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವಾಗ ಪತ್ರಿಕೆಯೊಂದಕ್ಕೆ ಅವರೇ ಹೇಳಿದ್ದರು. ಕುಡಿಯವುದು ಅಪರಾಧವೇ. ಎಲ್ಲ ಬಾರ್‌ಗಳಿಗೂ ವಾಜಪೇಯಿ ಬಾರ್ ಅಂತ ಹಾಕ್ತೀರಾ? ಎಂದು ಪ್ರಶ್ನಿಸಿದ್ದರು.

ಮೊಹಮ್ಮದ್ ನಲಪಾಡ್


ಕಾಂಗ್ರೆಸ್‌ ಮುಖಂಡ ಮೊಹಮ್ಮದ್ ನಲಪಾಡ್ ಈ ದೇಶಕ್ಕೋಸ್ಕರ ನಮ್ಮ ತಲೆಯನ್ನು ಕಡಿಸಿಕೊಳ್ಳುತೇವೆ. ಜೊತೆಗೆ ತಲೆಯನ್ನು ಕಟ್ ಮಾಡೋಕು ರೆಡಿ ಇದ್ದೀವಿ. ನಾವು ತಪ್ಪಲ್ಲಿ ಭಯಪಟ್ಟು ತಲೆಯನ್ನು ಬಗ್ಗಿಸಲು ತಯಾರಿಲ್ಲ. ನಾವು ತಲೆಯನ್ನು‌ ಕಟ್ ಮಾಡಿಸೋರು' ಎಂದು ಹೇಳಿದ್ದರು. ಈ ಹೇಳಿಕೆ ವಿವಾದ ಸೃಷ್ಟಿಸಿತ್ತು.

ಕಾಲಿವುಡ್​ ನಟಿ ಮೀರಾ ಮಿಥುನ್


ಸಂದರ್ಶನವೊಂದಲ್ಲಿ ಮಾತನಾಡುವ ಭರದಲ್ಲಿ ಅವರು ಬೇಕಾಬಿಟ್ಟಿ ಹೇಳಿಕೆಗಳನ್ನು ನೀಡಿದ್ದ ನಟಿ ಮೀರಾ ಮಿಥುನ್, ಚಿತ್ರರಂಗದಲ್ಲಿ ಆಗುತ್ತಿರುವ ಅನೇಕ ಅನಾಹುತಗಳಿಗೆ ಪರಿಶಿಷ್ಟ ಜಾತಿಯ (Scheduled Caste) ಜನರೇ ಕಾರಣ. ಅಂಥವರನ್ನು ಚಿತ್ರರಂಗದಿಂದ ತೊಲಗಿಸಬೇಕು’ ಎಂದು ಹೇಳಿದ್ದರು. ಅವರ ಈ ಹೇಳಿಕೆ ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. 

ನಟ ಚೇತನ್
ಕನ್ನಡದ ನಟ ಚೇತನ್​​ ಸಿನಿಮಾಯೇತರ ಸಾಮಾಜಿಕ ವಿಷಯಗಳ ಕುರಿತು ನೇರ, ನಿಷ್ಠುರವಾಗಿ ಅಭಿಪ್ರಾಯಗಳನ್ನು ತಿಳಿಸುವ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಇದೇ ರೀತಿ ಬ್ರಾಹ್ಮಣರ ವಿಚಾರವಾಗಿ ಮಾತನಾಡಿ ನಟ ಚೇತನ್ ಅವರು ಮಾಡಿದ್ದ ಟ್ವೀಟ್ ವೊಂದು ವಿವಾದ ಸೃಷ್ಟಿಸಿತ್ತು. 

ಬ್ರಾಹ್ಮಣ್ಯವು ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಮನೋಭಾವನ್ನು ನಿರಾಕರಿಸುತ್ತದೆ. ನಾವು ಬ್ರಾಹ್ಮಣ್ಯವನ್ನು ಬೇರಿಸಹಿತ ಕಿತ್ತುಹಾಕಬೇಕು. ಎಲ್ಲರೂ ಸರಿಸಮಾನರಾಗಿ ಜನಿಸಿದರೆ, ಬ್ರಾಹ್ಮಣರು ಮಾತ್ರ ಅತ್ಯುನ್ನತರು ಮತ್ತು ಉಳಿದವರೆಲ್ಲರೂ ಕೆಳಹಂತದವರು ಮತ್ತು ಅಸ್ಪೃಶ್ಯರು ಎಂದು ಹೇಳುವುದು ಸಂಪೂರ್ಣ ಅಸಂಬದ್ಧ. ಇದೊಂದು ದೊಡ್ಡ ವಂಚನೆ ಎಂದು ಹೇಳಿದ್ದರು. ಈ ಹೇಳಿಕೆ ವಿವಾದ ಸೃಷ್ಟಿಸಿತ್ತು.

ಸಲ್ಮಾನ್ ಖುರ್ಷಿದ್


ಆಯೋಧ್ಯೆ ವರ್ಡಿಕ್ಟ್ ಪುಸ್ತಕದ ಮೂಲಕ ವಿವಾದ ಸೃಷ್ಟಿಸಿದ್ದ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರು, 1984ರಲ್ಲಿ ಸಿಖ್‌ರು ಹಾಗೂ ಹಿಂದೂಗಳು ಅನುಭವಿಸಿದ ನೋವು ಅವರು ಮಾಡಿದ ಪಾಪದ ಫಲ. 1947ರಲ್ಲಿ ಭಾರತ ವಿಭಜನೆಯಾಗುವ ಸಂದರ್ಭ ಅನುಭವಿಸಿದ ನೋವನ್ನು ಮುಸ್ಲಿಮರು ಮರೆತಿಲ್ಲ. ಇದರ ಈ ನೋವಿನ ಪಾಪದ ಫಲವನ್ನು ಸಿಖ್‌ರು ಹಾಗೂ ಹಿಂದೂಗಳು 1984ರ ಸಿಖ್ ದಂಗೆಯಲ್ಲಿ ಅನುಭವಿಸಿದ್ದಾರೆ ಎಂದು ಹೇಳಿದ್ದರು. ಈ ಹೇಳಿಕೆ ವಿವಾದಕ್ಕೆ ದಾರಿ ಮಾಡಿಕೊಟ್ಟಿತ್ತು.

ಉಮೇಶ್ ಕತ್ತಿ
ಲಾಕ್ ಡೌನ್ ನಂತಹ ಸಂಕಷ್ಟದ ಸಂದರ್ಭದಲ್ಲಿಯೂ ಅಕ್ಕಿ ಕಡಿಮೆ ಕೊಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದಕ್ಕೆ ವ್ಯಕ್ತಿಯೊಬ್ಬರಿಗೆ  ಸತ್ತು ಹೋಗು ಎಂದು ಸಚಿವ ಉಮೇಶ್ ಕತ್ತಿ ನೀಡಿದ್ದ ಹೇಳಿಕೆ ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ಅಲ್ಲದೆ, ಹೇಳಿಕೆಗೆ ರಾಜ್ಯದಲ್ಲಿ ಭಾರೀ ವಿರೋಧಗಳು ವ್ಯಕ್ತವಾಗಿದ್ದವು.

ಗದಗ ಜಿಲ್ಲೆಯ ಕುರ್ತಕೋಟಿ ಗ್ರಾಮದ ರೈತ ಸಂಘದ ಕಾರ್ಯಕರ್ತ ಈಶ್ವರ್ ಪಡಿತರ ಅಕ್ಕಿ ಕಡಿತಗೊಳಿಸಿರೋದನ್ನು ಪ್ರಶ್ನಿಸಿದ್ದರು. ಈ ವೇಳೆ ಉತ್ತರ ಕರ್ನಾಟಕದಲ್ಲಿ ಅಕ್ಕಿ ಜತೆಗೆ ಜೋಳ ಕೊಡ್ತಿವಿ. ಲಾಕ್​ಡೌನ್ ಸಂದರ್ಭದಲ್ಲಿ 5 ಕೆಜಿ ಅಕ್ಕಿ ಕೇಂದ್ರ ಸರ್ಕಾರ ಕೊಡುತ್ತೆ. ಮುಂದಿನ ತಿಂಗಳಿನಿಂದ ಅಕ್ಕಿ ಕೊಡಲಾಗುವುದು ಎಂದು ಉಮೇಶ್ ಕತ್ತಿ ಹೇಳಿದ್ದರು. ಈ ವೇಳೆ ಲಾಕ್​ಡೌನ್ ಇದೆ ಅಲ್ಲಿಯವರೆಗೆ ಉಪವಾಸ ಸಾಯೋದಾ ? ಎಂದು ಈಶ್ವರ್ ಪ್ರಶ್ನಿಸಿದಕ್ಕೆ ಸಾಯೋದು ಒಳ್ಳೆಯದು, ಅದಕ್ಕಿಂತ ಮೊದಲು ಅಕ್ಕಿ ಮಾರಾಟ ಮಾಡೋ ದಂಧೆ ನಿಲ್ಲಿಸಿ ಎಂದು ಅಹಂಕಾರದ ಮಾತುಗಳನ್ನಾಡಿದ್ದರು. ಈ ಹೇಳಿಕೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಸಿಎಂ ಬೊಮ್ಮಾಯಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ನೈತಿಕ ಪೊಲೀಸ್‌ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನೀಡಿದ್ದ ಹೇಳಿಕೆಯೊಂದು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು.

ಪ್ರತಿಕ್ರಿಯೆ ವೇಳೆ ಹಿಂದೂ ಸಂಘಟನೆಗಳ ದಾಳಿಯನ್ನು ಸಮರ್ಥಿಸಿಕೊಂಡಿದ್ದ ಅವರು, ನೈತಿಕತೆಗೆ ಧಕ್ಕೆಯಾದಾಗ ಆಕ್ಷನ್, ರಿಯಾಕ್ಷನ್ ಆಗುತ್ತದೆ ಎಂದು ಹೇಳಿದ್ದರು.

ನೈತಿಕ ಪೊಲೀಸ್‌ಗಿರಿ, ಇದು ಬಹಳ ಸೂಕ್ಷ್ಮವಾಗಿರುವ ವಿಚಾರ. ಸಮಾಜದಲ್ಲಿ ನಾವೆಲ್ಲರೂ ಜವಾಬ್ದಾರಿ ಹೊಂದಬೇಕಾಗುತ್ತದೆ. ಸಮಾಜದಲ್ಲಿ ಹಲವಾರು ಭಾವನೆಗಳ ಜನರಿದ್ದಾರೆ. ಈ ಭಾವನೆಗಳಿಗೆ ಧಕ್ಕೆ ಆಗದ ಹಾಗೆ ನಾವು ನಡೆದುಕೊಳ್ಳಬೇಕಾಗುತ್ತದೆ. ಆ ಭಾವನೆಗಳಿಗೆ ಧಕ್ಕೆ ಬಂದಾಗ ಸಹಜವಾಗಿ ಆಕ್ಷನ್ ಮತ್ತು ರಿಯಾಕ್ಷನ್ ಆಗುತ್ತದೆ ಎಂದಿದ್ದರು. ಈ ಹೇಳಿಕೆ ವಿವಾದ ಸೃಷ್ಟಿಸಿತ್ತಲ್ಲದೇ, ಸಾಕಷ್ಟು ಟೀಕೆಗಳ ವ್ಯಕ್ತವಾಗಿದ್ದವು.

ಡಾ.ಕೆ.ಸುಧಾಕರ್


ನಿಮ್ಹಾನ್ಸ್‌ನಲ್ಲಿ ಭಾಷಣ ಮಾಡಿದ್ದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದರು. ಆಧುನಿಕ ಭಾರತೀಯ ಮಹಿಳೆಯರು ಈಗ ಸಾಮಾನ್ಯವಾಗಿ ಒಬ್ಬಂಟಿಯಾಗಿರಲು ಇಷ್ಟ ಪಡುತ್ತಾರೆ. ಒಂದು ವೇಳೆ ಮದುವೆಯಾದರೂ ಕೂಡಾ ಮಗುವಿಗೆ ಜನ್ಮ ನೀಡಲು ಇಚ್ಛಿಸಲ್ಲ. ಬಾಡಿಗೆ ತಾಯಿಯ ಮೂಲಕ ಮಗುವನ್ನು ಪಡೆಯುತ್ತಾರೆಂದು ಹೇಳಿದ್ದರು. ಈ ಹೇಳಕೆ ವಿವಾದ ಸೃಷ್ಟಿಸಿತ್ತು.

ನಳಿನ್ ಕುಮಾರ್ ಕಟೀಲ್


ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಕಟೀಲ್ ಅವರು, ರಾಹುಲ್ ಗಾಂಧಿ ಒಬ್ಬ ಮಾದಕ ವ್ಯಸನಿ ಹಾಗೂ ಡ್ರಗ್ ಪೆಡಾಲರ್ ಆಗಿದ್ದಾರೆ. ಅವರು ಹೇಗೆ ದೇಶವನ್ನು ಮುನ್ನಡೆಸುತ್ತಾರೆ? ಎಂದು ವಾಗ್ದಾಳಿ ನಡೆಸಿದ್ದರು. ಈ ಹೇಳಿಗೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಹಾಗೂ ಟೀಕೆಗಳಿಗೆ ಎಡೆಮಾಡಿಕೊಟ್ಟಿತ್ತು.

ಈಶ್ವರಪ್ಪ


ಬೆಳಗಾವಿಯಲ್ಲಿ ಮಾತನಾಡಿದ್ದ ಈಶ್ವರಪ್ಪ ಅವರು, ಈ ಹಿಂದೆ ಭಾರತೀಯ ಜನಸಂಘ ಅಧ್ಯಕ್ಷ ದೀನದಯಾಳ ಉಪಾಧ್ಯಯ ಕಗ್ಗೊಲೆ ಆಯ್ತು. ಆಗ ನಮ್ಮ ಹತ್ತಿರ ಶಕ್ತಿ ಇರಲಿಲ್ಲ. ಆಗ ಇಡೀ ರಾಷ್ಟ್ರೀಯ ನಾಯಕರು ಶಾಂತಿಯಿಂದ ಇರಬೇಕು ಎಂದಿದ್ದರು. ಕೇರಳದಲ್ಲಿ ಆರ್‌ಎಸ್‌ಎಸ್ ಕಚೇರಿ ಮೇಲೆ ಅದೇ ರೀತಿ ದಾಳಿ ಮುಂದುವರಿಯಿತು. ಆಗ ನಮ್ಮ ಹಿರಿಯರು ಯಾವುದೇ ಕಾರಣಕ್ಕೂ ಸುಮ್ಮನಿರಬೇಡಿ ಎಂದರು. ನೀವಾಗೆ ನೀವು ಯಾರನ್ನೂ ಹೊಡಿಬೇಡಿ, ನಿಮ್ಮ ಹೊಡೆದವರನ್ನು ಬಿಡಬೇಡಿ, ಫೇಸ್ ವಿತ್ ಸೇಮ್ ಸ್ಟಿಕ್ ಎಂದು ಹೇಳಿದ್ದರು. ಈ ಹೇಳಿಕೆ ವಿವಾದಕ್ಕೆ ದಾರಿ ಮಾಡಿಕೊಟ್ಟಿತ್ತು.

ಸಿಟಿ ರವಿ


ರಾಜೀವ್​ ಗಾಂಧಿ ಖೇಲ್​ರತ್ನ ಪ್ರಶಸ್ತಿಯ ಹೆಸರನ್ನು ಕೇಂದ್ರ ಸರ್ಕಾರ ಧಾನ್ಯಚಂದ್​​ ಖೇಲ್​​ರತ್ನ ಎಂದು ಬದಲಿಸಿದ ಬೆನ್ನಲ್ಲೇ ರಾಜ್ಯದಲ್ಲಿನ ಇಂದಿರಾ ಕ್ಯಾಂಟೀನ್​ ಹೆಸರನ್ನು ಬದಲಿಸುವಂತೆ ಒತ್ತಾಯಿಸಿದ್ದ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿಯವರು, ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಬಾರ್​, ನೆಹರು ಹುಕ್ಕಾ ಬಾರ್ ಎಂಬ ಹೆಸರಲ್ಲಿ ಕ್ಯಾಂಟೀನ್ ತೆರೆಯಲಿ ಎಂದು ಹೇಳಿದ್ದರು. ಈ ಹೇಳಿಕೆ ವಿವಾದ ಸೃಷ್ಟಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com