2022ರಲ್ಲಿ ಸರಣಿ ಸೋಲುಗಳಿಂದ ಕಂಗೆಟ್ಟಿದ್ದ ಬಾಲಿವುಡ್‌ನಲ್ಲಿ 100 ಕೋಟಿ ಕ್ಲಬ್ ಸೇರಿದ ಕೆಲವು ಸಿನಿಮಾಗಳಿವು!

ಬ್ಯಾಕ್-ಟು-ಬ್ಯಾಕ್ ಫ್ಲಾಪ್‌ ಸಿನಿಮಾಗಳ ನಡುವೆ, ಕೆಲವು ಚಿತ್ರಗಳು ಹಿಟ್ ಆಗಿ ಹೊರಹೊಮ್ಮಲು ಮತ್ತು 100 ಕೋಟಿ ರೂ. ಕ್ಲಬ್‌ ಸೇರುವಲ್ಲಿ ಯಶಸ್ವಿಯಾದವು. ಇನ್ನೇನು ಈ ವರ್ಷ ಮುಗಿಯುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಅಸಾಧಾರಣ ಪ್ರದರ್ಶನ ನೀಡಿದ ಮತ್ತು 100 ಕೋಟಿ ಕ್ಲಬ್‌ನ ಭಾಗವಾದ ಚಲನಚಿತ್ರಗಳು ಯಾವೆಂದು ನೋಡೋಣ...
ದಿ ಕಾಶ್ಮೀರ್ ಫೈಲ್ಸ್ ಸ್ಟಿಲ್
ದಿ ಕಾಶ್ಮೀರ್ ಫೈಲ್ಸ್ ಸ್ಟಿಲ್

ಕೋವಿಡ್-19 ನಿಂದಾಗಿ ತತ್ತರಿಸಿದ್ದ ಚಿತ್ರೋದ್ಯಮವು 2022ರಲ್ಲಿ ಕೊಂಡ ಸುಧಾರಿಸಿಕೊಂಡು ಸಾಗಿತು. ಅದಾದ ಬಳಿಕ ಬಾಯ್ಕಾಟ್ ಬಾಲಿವುಡ್ ಟ್ರೆಂಡ್ ಮತ್ತೆ ಬಾಲಿವುಡ್ ಚಿತ್ರೋದ್ಯಮಕ್ಕೆ ಪೆಟ್ಟು ನೀಡಿತು. ಬಾಲಿವುಡ್ ಮಂದಿಗಂತೂ ಇದು ನಿಜಕ್ಕೂ ಕಷ್ಟದ ಪ್ರಯಾಣವಾಗಿತ್ತು. ಬ್ಯಾಕ್-ಟು-ಬ್ಯಾಕ್ ಫ್ಲಾಪ್‌ ಸಿನಿಮಾಗಳ ನಡುವೆ, 150ಕ್ಕೂ ಅಧಿಕ ಸಿನಿಮಾಗಳು ಬಿಡುಗಡೆಯಾದರೂ ಕೆಲವು ಚಿತ್ರಗಳು ಹಿಟ್ ಆಗಿ ಹೊರಹೊಮ್ಮಲು ಮತ್ತು 100 ಕೋಟಿ ರೂ. ಕ್ಲಬ್‌ ಸೇರುವಲ್ಲಿ ಯಶಸ್ವಿಯಾದವು. ಇನ್ನೇನು ಈ ವರ್ಷ ಮುಗಿಯುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಅಸಾಧಾರಣ ಪ್ರದರ್ಶನ ನೀಡಿದ ಮತ್ತು 100 ಕೋಟಿ ಕ್ಲಬ್‌ನ ಭಾಗವಾದ ಚಲನಚಿತ್ರಗಳು ಯಾವೆಂದು ನೋಡೋಣ...

ದಿ ಕಾಶ್ಮೀರ್ ಫೈಲ್ಸ್

1990ರಲ್ಲಿ ಕಾಶ್ಮೀರ ದಂಗೆಯ ಸಮಯದಲ್ಲಿ ಕಾಶ್ಮೀರಿ ಪಂಡಿತರು ಅನುಭವಿಸಿದ ಕ್ರೂರ ನೋವುಗಳ ನಿಜವಾದ ಕಥೆಯನ್ನು ದಿ ಕಾಶ್ಮೀರ ಫೈಲ್ಸ್ ಸಿನಿಮಾದಲ್ಲಿ ತೋರಿಸಲಾಗಿತ್ತು. 1990ರ ಜನವರಿಯಲ್ಲಿ 'ಪಂಡಿತರು ಮತಾಂತರವಾಗಿ, ಕಾಶ್ಮೀರ ಬಿಟ್ಟು ತೆರಳಿ, ಇಲ್ಲವೇ ಸಾಯಿರಿ..' ಎಂದು ಭಯೋತ್ಪಾದಕರು ಎಚ್ಚರಿಕೆ ನೀಡಿದ್ದರು. ಅನಿವಾರ್ಯವಾಗಿ ಪಂಡಿತರು ರಾತ್ರೋರಾತ್ರಿ ಅವರ ಮನೆಗಳಿಂದ ಹೊರಬಿದ್ದು ಜಮ್ಮು ಕಡೆಗೆ ತೆರಳಿದರು. ಆ ಸಂದರ್ಭದಲ್ಲಿ ಅನೇಕ ಪಂಡಿತರ ಹತ್ಯೆಯಾಯಿತು. ಇಂತಹ ಅಂಶಗಳನ್ನೇ ಇಟ್ಟುಕೊಂಡು ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ. ಚಿತ್ರದಲ್ಲಿ ಮಿಥುನ್ ಚಕ್ರವರ್ತಿ, ಅನುಪಮ್ ಖೇರ್, ಪಲ್ಲವಿ ಜೋಷಿ, ದರ್ಶನ್ ಕುಮಾರ್ ಮುಂತಾದವರು ನಟಿಸಿದ್ದಾರೆ. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿ ರೂ. ಗಿಂತ ಹೆಚ್ಚು ಗಳಿಕೆ ಕಂಡಿತು.

ಬ್ರಹ್ಮಾಸ್ತ್ರ ಭಾಗ 1

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ನಟನೆಯ ಬ್ರಹ್ಮಾಸ್ತ್ರ ಸಿನಿಮಾ ಬಾಲಿವುಡ್‌ನಲ್ಲಿ ಯಶಸ್ಸು ಕಂಡ ಮತ್ತೊಂದು ಸಿನಿಮಾ. ಬೆಂಕಿಯೊಂದಿಗೆ ವಿಶೇಷ ಬಂಧವನ್ನು ಹಂಚಿಕೊಳ್ಳುವ ಸಾಮಾನ್ಯ ವ್ಯಕ್ತಿಯ ಸುತ್ತ ಸುತ್ತುವ ಕಥೆಯನ್ನು ಹೊಂದಿದೆ. ಚಿತ್ರದಲ್ಲಿ ತೆಲುಗು ನಟ ನಾಗಾರ್ಜುನ, ಮೌನಿ ರಾಯ್ ಮತ್ತು ಅಮಿತಾಬ್ ಬಚ್ಚನ್ ಸಹ ಇದ್ದಾರೆ. ಸಿನಿಮಾವನ್ನು ಅಯನ್ ಮುಖರ್ಜಿ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೆಪ್ಟೆಂಬರ್ 9 ರಂದು ಬ್ರಹ್ಮಾಸ್ತ್ರ ಬಿಡುಗಡೆಯಾಯಿತು. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 431 ಕೋಟಿ ರೂ. ಗಳಿಸಿತು.

ದೃಶ್ಯಂ 2

ಅಜಯ್ ದೇವಗನ್ ಅವರ ದೃಶ್ಯಂ 2 ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡಿದೆ. ಅಜಯ್ ದೇವಗನ್, ತಬು ಮತ್ತು ಅಕ್ಷಯ್ ಖನ್ನಾ ಅಭಿನಯದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 300 ಕೋಟಿ ರೂ. ಗಿಂತ ಹೆಚ್ಚು ಗಳಿಸಿದೆ. ಇಂದಿಗೂ ಇನ್ನೂ ಕೆಲವು ಚಿತ್ರಮಂದಿರಗಳಲ್ಲಿ ಓಡುತ್ತಿದೆ! ಅಭಿಷೇಕ್ ಪಾಠಕ್ ನಿರ್ದೇಶನದ ಸಿನಿಮಾ ನವೆಂಬರ್ 18 ರಂದು 15.38 ಕೋಟಿ ರೂ. ಮುಂಗಡ ಟಿಕೆಟ್ ಬುಕ್ಕಿಂಗ್‌ನೊಂದಿಗೆ ಬಿಡುಗಡೆಯಾಯಿತು. ಕ್ರಮೇಣ, ಚಿತ್ರವು ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ದಾಖಲೆಗಳನ್ನು ಮುರಿಯುತ್ತಲೇ ಇತ್ತು.

ಭೂಲ್ ಭುಲೈಯಾ 2

ಭೂಲ್ ಭುಲೈಯಾ 2 ಸಿನಿಮಾ ಆರಂಭದಲ್ಲಿಯೇ ಬಾಕ್ಸ್ ಆಫೀಸ್‌ನಲ್ಲಿ ಮೋಡಿ ಮಾಡಲು ಶುರುಮಾಡಿತು. ಚಿತ್ರವು ಉತ್ತಮ ವಿಮರ್ಶೆಗಳನ್ನು ಪಡೆಯಿತು ಮತ್ತು ಇದು ಚಿತ್ರಮಂದಿರಗಳಿಗೆ ಜನರನ್ನು ಆಕರ್ಷಿಸಿತು. ಅನೀಜ್ ಬಾಜ್ಮೀ ನಿರ್ದೇಶಿಸಿದ ಭೂಲ್ ಭುಲೈಯಾ 2 ಸಿನಿಮಾ ಮೇ 20 ರಂದು ತೆರೆಕಂಡಿತು. ಇದು ಬಾಕ್ಸ್ ಆಫೀಸ್‌ನಲ್ಲಿ ಒಟ್ಟು 266 ಕೋಟಿ ರೂ.ಗಳನ್ನು ಗಳಿಸಿತು. ಚಿತ್ರದಲ್ಲಿ ಕಾರ್ತಿಕ್ ಆರ್ಯನ್, ತಬು, ಕಿಯಾರಾ ಅಡ್ವಾಣಿ ಮತ್ತು ರಾಜ್‌ಪಾಲ್ ಯಾದವ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರವನ್ನು ಭೂಷಣ್ ಕುಮಾರ್, ಕ್ರಿಶನ್ ಕುಮಾರ್, ಮುರಾದ್ ಖೇತಾನಿ ಮತ್ತು ಅಂಜುಮ್ ಖೇತಾನಿ ಸಹ-ನಿರ್ಮಾಣ ಮಾಡಿದ್ದಾರೆ.

ಗಂಗೂಬಾಯಿ ಕಥಿಯಾವಾಡಿ

ಆಲಿಯಾ ಭಟ್ ಅವರ ಗಂಗೂಬಾಯಿ ಕಥಿಯಾವಾಡಿ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿಯಾಗೇ ಲಗ್ಗೆ ಇಟ್ಟಿತು. ಒಟ್ಟು 209.77 ಕೋಟಿ ರೂ. ಗಳನ್ನು ಗಳಿಸುವಲ್ಲಿ ಸಿನಿಮಾ ಯಶಸ್ವಿಯಾಯಿತು. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಿದ, ಗಂಗೂಬಾಯಿ ಕಥಿಯಾವಾಡಿ ಬಯೋಪಿಕ್ ಆಗಿದ್ದು, ಹುಸೇನ್ ಜೈದಿ ಅವರ ಪುಸ್ತಕ ಮಾಫಿಯಾ ಕ್ವೀನ್ಸ್ ಆಫ್ ಮುಂಬೈ ಅನ್ನು ಆಧರಿಸಿದೆ. ಅಜಯ್ ದೇವಗನ್, ಪಾರ್ಥ್ ಸಮತಾನ್, ಸೀಮಾ ಪಹ್ವಾ ಮತ್ತು ಶಂತನು ಮಹೇಶ್ವರಿ ಚಿತ್ರದಲ್ಲಿ ನಿರ್ಣಾಯಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಜಯಂತಿಲಾಲ್ ಗಡ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com