ಮುಂಬೈನಲ್ಲಿ ಕನ್ನಡಕ್ಕೆ ಭಯವಿಲ್ಲ: ಉಪಾಧ್ಯ
ಕನ್ನಡಪ್ರಭ ವಾರ್ತೆ, ಮುಂಬೈ (ಡೊಂಬಿವಲಿ) ಫೆ. 10
ಇಲ್ಲಿನ ಸಾವಿತ್ರಿಬಾಯಿ ಫುಲೆ ಕಲಾಮಂದಿರದಲ್ಲಿ ನಡೆಯುತ್ತಿರುವ ಅಖಿಲ ಭಾರತ ಹೊರನಾಡ ಕನ್ನಡ ಸಂಘಗಳ 3ನೇ ಮಹಾಮೇಳದಲ್ಲಿ ಭಾನುವಾರ ನಡೆದ ವಿವಿಧ ವಿಷಯಗಳ ಮಂಡನೆ ಗೋಷ್ಠಿ ಎಲ್ಲರನ್ನೂ ಚಿಂತನಗೆ ಹಚ್ಚಿತು. ಮುಂಬೈ ವಿವಿಯ ಕನ್ನಡ ಉಪನ್ಯಾಸಕ ಡಾ. ಜಿ.ಎನ್. ಉಪಾಧ್ಯೆ ಕನ್ನಡ ಸಾಹಿತ್ಯಕ್ಕೆ ಮಹಾರಾಷ್ಟ್ರದ ಕೊಡುಗೆ ಕುರಿತು ಮಾತನಾಡಿ, ಮುಂಬೈ ಸುತ್ತಮುತ್ತ 16ರಿಂದ 20 ಲಕ್ಷ ಕನ್ನಡಿಗರಿದ್ದಾರೆ. ಮಹಾರಾಷ್ಟ್ರ ಕನ್ನಡ ಸಾಹಿತ್ಯಕ್ಕೆ ಸಾಕಷ್ಟು ಕೊಡುಗೆ ನೀಡಿದ್ದು ಶಾಸನ ಸಾಹಿತ್ಯ, ಅನುಭಾವ-ವಚನ ಸಾಹಿತ್ಯ ಹಾಗೂ ಆಧುನಿಕ ಸಾಹಿತ್ಯವೆಂದು ಈ ಕೊಡುಗೆಯನ್ನು ಸ್ಮರಿಸಬಹುದು. ಮಹಾರಾಷ್ಟ್ರದಲ್ಲಿ ದೊರೆತ ಒಟ್ಟೂ 1000 ಶಾಸನಗಳಲ್ಲಿ 300ಕ್ಕೂ ಹೆಚ್ಚು ಶಾಸನಗಳು ಕನ್ನಡಕ್ಕೆ ಸಂಬಂಧಿಸಿವೆ. ಶ್ಯಾಮರಾವ ವಿಠ್ಠಲ ಕಾಯ್ಕಿಣಿ, ಜಯದೇವಿತಾಯಿ ಲಿಗಾಡೆ, ಯಶವಂತ ಚಿತ್ತಾಲ, ತುರುಮರಿ ಶೇಷಗಿರಿರಾವ್, ಕೆ.ಜಿ. ಕುಂದಣಗಾರ ಸೇರಿದಂತೆ 400ಕ್ಕೂ ಹೆಚ್ಚು ಲೇಖಕರು ಮಹಾರಾಷ್ಟ್ರದ ಭಾಗದಲ್ಲಿದ್ದುಕೊಂಡು ಕನ್ನಡ ಸಾಹಿತ್ಯ ಪರಂಪರೆಯನ್ನು ಉಳಿಸಿ ಬೆಳೆಸಿದ್ದಾರೆ. ಬೆಂಗಳೂರಿನಲ್ಲಿ ಕನ್ನಡಕ್ಕೆ ಭಯವಿದೆಯೇ ಹೊರತು ಮುಂಬೈನಲ್ಲಿ ಇಲ್ಲ ಎಂದರು. ಪಾಶ್ಚಿಮಾತ್ಯ ರಾಷ್ಟಗಳಲ್ಲಿ ಕನ್ನಡ-ಕನ್ನಡಿಗ ಕುರಿತು ಗೋವಾದ ಡಾ. ಅರವಿಂದ ಯಾಳಗಿ ಅವರು ಪತ್ರಿಕೆಗಳು ಮತ್ತು ಪ್ರಜಾಪ್ರಭುತ್ವ ವಿಷಯ ಕುರಿತು ಮಾತನಾಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿ ವೆಂಕಟೇಶ ಮಾಚಕನೂರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಸವಪ್ರಭು ಹೊಸಕೇರಿ ನಿರೂಪಿಸಿದರು.
ಮಹಾಮೇಳದ ಗೊತ್ತುವಳಿಗಳು
ಕನ್ನಡಪ್ರಭ ವಾರ್ತೆ, ಮುಂಬೈ (ಡೊಂಬಿವಲಿ), ಫೆ. 10: ಅಖಿಲ ಭಾರತ ಹೊರನಾಡ ಕನ್ನಡಿಗರ 3ನೇ ಮಹಾಮೇಳದ ಗೊತ್ತುವಳಿಗಳು.
1) ನಾಲ್ಕನೇ ಮಹಾಮೇಳ ಗುಜರಾತ್ನ ವಡೋದರಾ (ಬರೋಡಾ)ದಲ್ಲಿ ಜರುಗಿಸುವುದು.
2) ಹೊರನಾಡ ಕನ್ನಡಿಗರ ಇಚ್ಛಾಶಕ್ತಿ ಕಾಪಾಡಲು ಒಂದು ಸ್ವಯಂ ಸೇವಾ ಸಂಸ್ಥೆ ಸ್ಥಾಪಿಸಬೇಕು. ಅದಕ್ಕಾಗಿ ಕರ್ನಾಟಕ ಸರ್ಕಾರ ರು. 100 ಕೋಟಿ ತೆಗೆದಿರಿಸಬೇಕು.
3) ಭಾರತೀಯ ಭಾಷೆಗಳ ಉಳಿವಿಗಾಗಿ ಚರ್ಚಿಸಲು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಸಭೆಯೊಂದನ್ನು ಧಾರವಾಡದಲ್ಲಿ ಆಯೋಜಿಸುವುದು.
4) ಭಾಷಾ ಅಲ್ಪಸಂಖ್ಯಾತರ ಅಂದರೆ, ಗಡಿ ರಾಜ್ಯಗಳಾದ ಆಂಧ್ರ, ತಮಿಳುನಾಡು, ಕೇರಳ, ಮಹಾರಾಷ್ಟ್ರ ಆಯುಕ್ತರನ್ನು ಭೇಟಿಯಾಗಿ ಗಡಿರಾಜ್ಯಗಳಲ್ಲಿ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸುವುದು.
5) ಗೋವಾದಲ್ಲಿ ಕನ್ನಡ ಭವನ ನಿರ್ಮಾಣವಾಗಬೇಕು. ಇದಕ್ಕಾಗಿ ಕರ್ನಾಟಕ ಸರ್ಕಾರ ರು. 10 ಕೋಟಿ ನೀಡಬೇಕು. ಈ ಕನ್ನಡ ಭವನ ಸಾಂಸ್ಕೃತಿಕ ಭವನವಾಗಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

