ದೇಶ

9000 ಕೋಟಿ ಹೂಡಿಕೆ

Published On :

ಇಂಧನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೇಲ್ವೆ ಇಲಾಖೆ ಆದ್ಯತೆ ನೀಡಲು ಒಲವು ವ್ಯಕ್ತಪಡಿಸಿದ್ದು 9000 ಕೋಟಿ ಹೂಡಿಕೆ ಮಾಡಲು ಸಜ್ಜಾಗಿದೆ. ಇಂಧನ ಉತ್ಪಾದನೆಗೆ ಅಗತ್ಯವಾದ ಕಲ್ಲಿದ್ದಲು ಗಣಿಗಾರಿಕೆ ನಡೆಯುವ ಸ್ಥಳಕ್ಕೆ ರೈಲು ಸಂಪರ್ಕ ಕಲ್ಪಿಸಲು 4000 ಕೋಟಿ, ಬಂದರು ಸಂಪರ್ಕಕ್ಕೆ 3200 ಕೋಟಿ ಹಾಗೂ ಕಬ್ಬಿಣದ ಅದಿರು ಗಣಿಗಾರಿಕೆಗೆ ನಡೆಯುವ ಸ್ಥಳಕ್ಕೆ ರೈಲು ಸಂಪರ್ಕ ಕಲ್ಪಿಸಲು 800 ಕೋಟಿ ಹೂಡಿಕೆ ಮಾಡುವ ಕುರಿತಂತೆ ಪ್ರಸಕ್ತ ಬಜೆಟ್‌ನಲ್ಲಿ ಪ್ರಸ್ತಾಪಿಸಿದೆ. ಇಂಧನ ಸಮಸ್ಯೆ ಹೆಚ್ಚುತ್ತಲೇ ಸಾಗಿದೆ. ಇದು ಗಂಭೀರವಾದ ವಿಷಯವಾಗಿದ್ದರಿಂದ ರೇಲ್ವೆ ಇಲಾಖೆ ಬಂದರು, ಕಲ್ಲಿದ್ದಲು ಹಾಗೂ ಕಬ್ಬಿಣ ಅದಿರು ಗಣಿಗಾರಿಕೆ ನಡೆಯುವ ಸ್ಥಳಗಳಿಗೆ ರೈಲು ಸಂಪರ್ಕ ಕಲ್ಪಿಸಲು ಬೃಹತ್ ಮೊತ್ತ ಹೂಡಿಕೆಗೆ ನಿರ್ಧರಿಸಿದೆ. ಸಮರ್ಪಕ ಸಾಗಣೆ ವ್ಯವಸ್ಥೆ ಇದ್ದರೆ ಎಲ್ಲವೂ ಅನುಕೂಲವಾಗಲಿದೆ ಎಂದು ರೇಲ್ವೆ ಸಚಿವ ಪವನಕುಮಾರ್ ಬನ್ಸಲ್ ವಿವರಿಸಿದರು.

ರೈಲಲ್ಲಿ ಸಿಗಲಿದೆ 'ಅನುಭೂತಿ'
ಶತಾಬ್ದಿ ಹಾಗೂ ರಾಜಧಾನಿ ರೈಲುಗಳಿಗೆ ಜನಪ್ರಿಯತೆ ಹೆಚ್ಚಿದ್ದರಿಂದ ಇನ್ನೂ ಹೆಚ್ಚಿನ ಸೌಲಭ್ಯವುಳ್ಳ ರೈಲು ಸೇವೆಗೆ ಬೇಡಿಕೆ ಬಂದಿದೆ ಎಂದು ರೇಲ್ವೆ ಸಚಿವ ಪವನಕುಮಾರ್ ಬನ್ಸಲ್ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಭಾರತೀಯ ರೇಲ್ವೆ ವಿಭಾಗವು ಉತ್ತಮ ಪರಿಸರ ಹಾಗೂ ಅತ್ಯುನ್ನತ ಸೌಲಭ್ಯ, ಸೇವೆಯನ್ನು ಬಯಸುವವರಿಗೆ ಈ ಬಾರಿಯ ಬಜೆಟ್‌ವ್ಯವಸ್ಥೆ ಕಲ್ಪಿಸಿದೆ. ಈ ಎಲ್ಲ ಸೌಲಭ್ಯ ಹೊಂದಿರುವ ರೈಲಿಗೆ 'ಅನುಭೂತಿ' ಎಂದು ಹೆಸರಿಸಲಾಗಿದೆ ಎಂದು ಬನ್ಸಲ್  ತಿಳಿಸಿದ್ದಾರೆ. 'ಅನುಭೂತಿ' ಬೋಗಿಗಳನ್ನು ಪ್ರಾಯೋಗಿಕವಾಗಿ ಕೆಲವು ರೈಲುಗಳಲ್ಲಿ ಅಳವಡಿಸಲಾಗುವುದು. ಈ ಸಂದರ್ಭದಲ್ಲಿ ಬೋಗಿಯು ಸ್ವಚ್ಛವಿಲ್ಲದೆ ಇದ್ದರೆ ಅಥವಾ ಸೌಲಭ್ಯಗಳು ಸಮರ್ಪಕವಾಗಿಲ್ಲದಿದ್ದರೆ, ಪ್ರಯಾಣಿಕರು ರೇಲ್ವೆ ಸಿಬ್ಬಂದಿಗೆ ದೂರವಾಣಿ ಮೂಲಕ ಇಲ್ಲವೇ ಎಸ್‌ಎಂಎಸ್ ಮೂಲಕ ದೂರನ್ನು ಕೊಡಬಹುದು. ಇದರಿಂದ ಉತ್ತಮ ನಿರ್ವಹಣೆಗೆ ಅನುಕೂಲವಾಗಲಿದೆ.

ಕ್ರೀಡಾಪಟುಗಳಿಗೆ ಉಚಿತ ಪಾಸ್
ರಾಜೀವ್ ಗಾಂಧಿ ಖೇಲ್ ರತ್ನ ಹಾಗೂ ಧ್ಯಾನ್‌ಚಂದ್ ಪ್ರಶಸ್ತಿ ಪಡೆದಿರುವ ಕ್ರೀಡಾಳುಗಳಿಗೆ ಫಸ್ಟ್ ಕ್ಲಾಸ್/ಸೆಕೆಂಡ್ ಎಸಿ ರೈಲಿನಲ್ಲಿ ಪ್ರಯಾಣಿಸಲು ಉಚಿತ ಪಾಸ್ ನೀಡಲಾಗುವುದು. ಒಲಿಂಪಿಕ್ ಪದಕ ವಿಜೇತರಿಗೂ ಉಚಿತ ಪಾಸ್ ವ್ಯವಸ್ಥೆ ಮತ್ತು ದ್ರೋಣಾಚಾರ್ಯ ಪ್ರಶಸ್ತಿ ಪಡೆದವರಿಗೆ ರಾಜಧಾನಿ/ಶತಾಬ್ದಿ ರೈಲಿನಲ್ಲಿ ಪ್ರಯಾಣಿಸುವ ಅವಕಾಶ ಕಲ್ಪಿಸಲಾಗಿದೆ. ರಾಜಧಾನಿ/ಶತಾಬ್ದಿಯಲ್ಲಿ ಪ್ರಯಾಣಿಸುವ ಸೌಲಭ್ಯ ಹೊಂದಿರುವ ಪಾಸ್ ಇರುವ ಎಲ್ಲ ಕ್ರೀಡಾಳುಗಳಿಗೆ ಇನ್ನು ತುರಂತ್ ರೈಲಿನಲ್ಲೂ ಪ್ರಯಾಣಿಸುವ ಅವಕಾಶ ಕಲ್ಪಿಸಲಾಗಿದೆ.

ಅಂಗವಿಕಲರಿಗೆ ವಿಶೇಷ ಕೊಡುಗೆ
ಅಂಗವಿಕಲರಿಗೆ ಪ್ರಾಶಸ್ತ್ಯ ಕೊಡಬೇಕೆನ್ನುವ ವಿಶ್ವ ಸಂಸ್ಥೆ ಜತೆಗಿನ ಒಪ್ಪಂದದಂತೆ ಎಂಡಿಜಿ ಅಡಿಯಲ್ಲಿ ಜವಾಬ್ದಾರಿ ಪೂರೈಸಿರುವುದಾಗಿ ರೇಲ್ವೆ ಸಚಿವ ಪವನ್ ಕುಮಾರ್ ಬನ್ಸಾಲ್ ಹೇಳಿದ್ದಾರೆ. ರೇಲ್ವೆ ನಿಲ್ದಾಣದಲ್ಲಿ ಅಂಗವಿಕಲರಿಗೆ ಹಾಗೂ ಹಿರಿಯ ನಾಗರಿಕರಿಗಾಗಿ ಹಲವಾರು ಸೌಲಭ್ಯ ಒದಗಿಸಲಾಗಿದ್ದು, ಆ- 1 ಮತ್ತು ಉಳಿದ ಪ್ರಮುಖ ರೇಲ್ವೆ ನಿಲ್ದಾಣಗಳಲ್ಲಿ 179 ಎಸ್ಕಲೇಟರ್‌ಗಳು ಮತ್ತು 400 ಲಿಫ್ಟ್‌ಗಳನ್ನು ಅಳವಡಿಕೆ. ಅಂಧರಿಗೋಸ್ಕರ ಕೋಚ್‌ಗಳ ಗುರುತಿಸುವಿಕೆಗೆ, ಜತೆಗೆ ಟಾಯ್ಲೆಟ್, ವೀಲ್‌ಚೇರ್‌ಗಳ ಸರಬರಾಜುಗಳ ಬಗ್ಗೆ ಮಾಹಿತಿ ಹಾಗೂ ಬ್ಯಾಟರಿ ಚಾಲಿತ ವಾಹನಗಳ ಬಳಕೆಗಳನ್ನು ಹೆಚ್ಚಿನ ನಿಲ್ದಾಣಗಳಲ್ಲಿ ಮಾಡಲು ಉದ್ದೇಶಿಸಲಾಗಿದೆ.

ಸರಕು ಸಾಮರ್ಥ್ಯ ಹೆಚ್ಚಳ
ಪ್ರಸಕ್ತ ವರ್ಷ ರೈಲುಗಳ ಸರಕು ಸಾಗಣೆ ಸಾಮರ್ಥ್ಯ 100.70 ಕೋಟಿ ಟನ್ ಆಗಬಹುದೆಂದು ಅಂದಾಜಿಸಲಾಗಿದೆ. ಅಂದರೆ 2011-12ಕ್ಕೆ ಹೋಲಿಸಿದರೆ ಇದು 3.80 ಕೋಟಿ ಟನ್‌ನಷ್ಟು ಹೆಚ್ಚಳವಾಗಲಿದೆ. ಈ ಮೂಲಕ ಚೀನಾ, ರಷ್ಯಾ ಹಾಗೂ ಅಮೆರಿಕ ರೇಲ್ವೆಗಳಂತೆಯೇ ಭಾರತೀಯ ರೇಲ್ವೆಯೂ ಒಂದು ಶತಕೋಟಿ ಟನ್ ಸೆಲೆಕ್ಟ್ ಕ್ಲಬ್‌ಗೆ ಪ್ರವೇಶ ಪಡೆಯುವ ನಿರೀಕ್ಷೆ ಹೊಂದಿದೆ. ಜತೆಗೆ, 1.5 ಕಿ.ಮೀ.ನಷ್ಟು ಉದ್ದದ ರೈಲುಗಳನ್ನು ಎಳೆಯುವ ಸಾಮರ್ಥ್ಯವಿರುವ 49 ಲಾಂಗ್ ಲೂಪ್‌ಗಳನ್ನು ಘೋಷಿಸಲಾಗಿದೆ.

ಪ್ಲಾಸ್ಟಿಕ್ ಈಗ ಮುಕ್ತ ಮುಕ್ತ
ಪ್ಲಾಸ್ಟಿಕ್ ಮುಕ್ತ ರೇಲ್ವೆ ಸೇವೆ ನೀಡಲು ಈ ಬಾರಿಯ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದ್ದು, ಕೃಷಿ ಆಧಾರಿತ ಹಾಗೂ ಪುನರ್‌ಬಳಕೆಯ ಉಪಕರಣಗಳನ್ನು ಆಹಾರ ಪೂರೈಕೆಯಲ್ಲಿ ಬಳಸಲು ತೀರ್ಮಾನಿಸಲಾಗಿದೆ. ಈ ಮೂಲಕ ರೇಲ್ವೆ ಇಲಾಖೆ ಪರಿಸರವನ್ನು ಉಳಿಸುವ ಯತ್ನಕ್ಕೆ ಕೈ ಹಾಕಿದೆ. ಜತೆಗೆ ಪವನ ಹಾಗೂ ಸೌರ ಶಕ್ತಿಗಳನ್ನು ರೇಲ್ವೆ ವಿಭಾಗಗಲ್ಲಿ ಸಮರ್ಪಕವಾಗಿ ಬಳಸಲು ತೀರ್ಮಾನಿಸಲಾಗಿದೆ. 

ಯೋಧರ ಪೋಷಕರಿಗೆ ಪ್ರಯಾಣ ಫ್ರೀ
ಸೈನಿಕರತ್ತಲೂ ಚಿತ್ತ ಹರಿಸಿರುವ ಬನ್ಸಲ್ ಅವರು ವಿಶೇಷ ಕೊಡುಗೆಯನ್ನು ಮುಂದುವರಿಸಿದ್ದಾರೆ. ಈ ಹಿಂದೆ ನೀಡಿದ ಸೌಲಭ್ಯದ ಜತೆಗೆ ಮತ್ತೆ ಕೆಲವನ್ನು ವಿಸ್ತರಣೆ ಮಾಡಿದ್ದಾರೆ. ಮದುವೆ ಆಗದೆ ವೀರಮರಣ ಹೊಂದಿ, ಮಹಾವೀರ ಚಕ್ರ, ವೀರ ಚಕ್ರ, ಕೀರ್ತಿ ಚಕ್ರ, ಶೌರ್ಯ ಚಕ್ರ, ರಾಷ್ಟ್ರಪತಿ ಶೌರ್ಯ ಪೊಲೀಸ್ ಪದಕ ಮತ್ತು ಪೊಲೀಸ್ ಪದಕ ಪಡೆದ ವೀರರ ಪೋಷಕರಿಗೆ ಪ್ರಥಮ ದರ್ಜೆ/2ಎಸಿ ಬೋಗಿಯಲ್ಲಿ ಉಚಿತ ಪ್ರಯಾಣಿಸುವ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ ಬನ್ಸಲ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.