ಗುರಿ ಎರಡು, ಸೂತ್ರ ಒಂದೇ!

ನವದೆಹಲಿ: ಆರ್ಥಿಕ ಅಭಿವೃದ್ಧಿ ಕುಸಿತ ಮತ್ತು ವಿತ್ತೀಯ ಕೊರತೆ ಹೆಚ್ಚಳದ ಸವಾಲನ್ನು ಮುಂದಿಟ್ಟುಕೊಂಡು 2013-14ರ ಸಾಲಿನ ಬಜೆಟ್ ಮಂಡಿಸುತ್ತಿರುವ ಸಚಿವ ಚಿದಂಬರಂ, ಸುಧಾರಣಾ ಸೂತ್ರಕ್ಕೆ ಶರಣಾಗಿ, ಚುನಾವಣಾ ಸೂತ್ರಕ್ಕೂ ಬದ್ಧರಾಗಬೇಕಾದ ಅನಿವಾರ್ಯತೆ ಇದೆ.
ಸುಧಾರಣಾ ಸೂತ್ರಕ್ಕನುಗುಣವಾಗಿ ಜನಪರ ಬಜೆಟ್ ಹಾಗೂ ಚುನಾವಣಾ ಸೂತ್ರಕ್ಕನುಗುಣವಾಗಿ ಜನಪ್ರಿಯ ಬಜೆಟ್ ಎರಡನ್ನೂ ಮೇಳೈಸಿ ಸಮತೋಲನ ಕಾಯ್ದುಕೊಳ್ಳಬೇಕಾಗಿದೆ.
ಹೀಗಾಗಿ ಚಿದಂಬರಂ ಬಜೆಟ್ನಲ್ಲಿ ತೆರಿಗೆ ಸುಧಾರಣಾ ಕ್ರಮಗಳ ಜತೆಗೆ ತೆರಿಗೆ ಸಂಗ್ರಹಣಾ ಕ್ರಮಗಳನ್ನು ನಿರೀಕ್ಷಿಸಬಹುದು. ಇದು ಯುಪಿಎ ಸರ್ಕಾರದ ಸತತ 10ನೇ ಬಜೆಟ್. ಚುನಾವಣೆಗೆ ಮುನ್ನ ಪೂರ್ಣ ಪ್ರಮಾಣದ ಕೊನೆಯ ಬಜೆಟ್ ಎಂಬುದು ವಿಶೇಷ.
ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿದೆ: ರಾಷ್ಟ್ರದ ಆರ್ಥಿಕ ಸ್ಥಿತಿ ಹಾದಿ ತಪ್ಪಿದೆ. ಒಟ್ಟು ರಾಷ್ಟ್ರೀಯ ಉತ್ಪನ್ನದ (ಜಿಡಿಪಿ) ಅಭಿವೃದ್ಧಿ ದರ ಶೇ.5ಕ್ಕೆ ಕುಸಿದಿದೆ. ಇದು ಈ ದಶಕದಲ್ಲೇ ಅತ್ಯಂತ ಕನಿಷ್ಠ ಅಭಿವೃದ್ಧಿ ದರ. ಜಿಡಿಪಿ ಅಭಿವೃದ್ಧಿ ದರವನ್ನು ಶೇ.1.5ರಷ್ಟು ಹೆಚ್ಚಿಸುವ ತುರ್ತು ಇದೆ. ಹೀಗಾಗಿ 2013-14ನೇ ಸಾಲಿಗೆ ಜಿಡಿಪಿ ದರ ಶೇ.6.5ಕ್ಕೆ ಏರಿಸುವ ಕಸರತ್ತು ಮಾಡಬೇಕಿದೆ.
ವಿತ್ತೀಯ ಕೊರತೆ ಪ್ರಮಾಣ (ಸರ್ಕಾರದ ಗಳಿಸುವ ಆದಾಯ ಮತ್ತು ಮಾಡುವ ವೆಚ್ಚದ ನಡುವಿನ ಅಂತರ) ಜಿಡಿಪಿಯ ಶೇ.5.3ಕ್ಕೆ ಏರಿದೆ. 2012-13ರ ಬಜೆಟ್ ಮಂಡನೆ ವೇಳೆ ಈ ಪ್ರಮಾಣ ಶೇ.5.1 ಎಂದು ಅಂದಾಜಿಸಲಾಗಿತ್ತು. ಆದರೆ ಅಂದಾಜು ಮೀರಿ ವಿತ್ತೀಯ ಪ್ರಮಾಣ ಶೇ.5.3ಕ್ಕೆ ಏರಿದೆ. ಇದು ಆರ್ಥಿಕ ಸ್ಥಿತಿ ಹದಗೆಟ್ಟಿರುವ ಸೂಚನೆ. 2013-14ನೇ ಸಾಲಿನಲ್ಲಿ ವಿತ್ತೀಯ ಕೊರತೆ ಪ್ರಮಾಣವನ್ನು ಶೇ.4.8ಕ್ಕೆ ತಗ್ಗಿಸುವ ಗುರಿ ಚಿದಂಬರಂ ಮುಂದಿದೆ. ಮುಂಬರುವ ವರ್ಷಗಳಲ್ಲಿ ಸರ್ಕಾರ ಯಾವುದೇ ಇರಲಿ, ಈ ಪ್ರಮಾಣ ತಗ್ಗುತ್ತಾ ಹೋಗಬೇಕು. ಇಲ್ಲದಿದ್ದರೆ ಆರ್ಥಿಕ ಸ್ಥಿತಿ ಹದಗೆಡುತ್ತದೆ.
ವಿತ್ತೀಯ ಕೊರತೆ ನಿರ್ವಹಣೆ: ವಿತ್ತೀಯ ಕೊರತೆ ನಿರ್ವಹಿಸಲು ಸುಮಾರು 4.67 ಲಕ್ಷ ಕೋಟಿ ಸಾಲ ಪಡೆಯುವ ಗುರಿ ಹೊಂದಲಾಗಿದೆ. 50000 ಕೋಟಿ ಸಬ್ಸಿಡಿ ಕಡಿತ ಮಾಡುವ, ಜತೆಗೆ ಆಹಾರಧಾನ್ಯಗಳಿಗೆ ನೀಡುವ ಸಬ್ಸಿಡಿ ಪ್ರಮಾಣವನ್ನು ಈಗಿರುವ 75000 ಕೋಟಿಯಿಂದ 1 ಲಕ್ಷ ಕೋಟಿಗೆ ಏರಿಸುವ ಪ್ರಸ್ತಾಪ ಇದೆ. ರಸಗೊಬ್ಬರಗಳಿಗೆ ನೀಡುವ ಸಬ್ಸಿಡಿ ಪ್ರಮಾಣ ಶೇ.15ರಷ್ಟು ತಗ್ಗುವ ನಿರೀಕ್ಷೆ ಇದೆ.
ಯೋಜನೇತರ ವೆಚ್ಚಗಳ ಮೇಲೆ ನಿಯಂತ್ರಣ ಸಾಧಿಸುವುದು, ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವುದು ಮತ್ತಿತರ ಕ್ರಮಗಳು ಚಿದಂಬರಂ ಮುಂದಿವೆ.
ವಿತ್ತೀಯ ಕೊರತೆ ಪ್ರಮಾಣ ಕೊಂಚ ತಗ್ಗಿಸುವ ಪ್ರಯತ್ನವಾಗಿ ಸಾರ್ವಜನಿಕ ವಲಯದ ಕಂಪನಿಗಳಿಂದ ಬಂಡವಾಳ ಹಿಂತೆಗೆತ ಗುರಿಯನ್ನು 40000 ಕೋಟಿಗೆ ಏರಿಸಬಹುದು. ಸರಕು ಮತ್ತು ಸೇವಾ ತೆರಿಗೆ ಜಾರಿಗೆ ಮಾರ್ಗಸೂಚಿ ಸಿದ್ಧವಾಗುವ ಮುನ್ಸೂಚನೆ ಇದೆ. ಆರ್ಥಿಕ ಅಭಿವೃದ್ಧಿ ದರ ಹೆಚ್ಚಿಸಲು ಮೂಲಭೂತ ಸೌಲಭ್ಯ ಕ್ಷೇತ್ರಕ್ಕೆ ಆದ್ಯತೆ ನೀರೀಕ್ಷಿಸಲಾಗಿದೆ. ಈ ವಲಯಕ್ಕೆ ಬಂಡವಾಳ ಆಕರ್ಷಿಸಲು ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಗೆ ಹಲವು ರಿಯಾಯ್ತಿಗಳನ್ನು ನೀಡಲಾಗುತ್ತದೆ. ವಿದೇಶಿ ಹೂಡಿಕೆ ಪ್ರಕ್ರಿಯೆ ಸರಳಗೊಳಿಸುವುದು, ವಿದೇಶಿ ಹೂಡಿಕೆ ಪ್ರಮಾಣದ ಮೇಲಿನ ಮಿತಿಯನ್ನು ತೆಗೆದು ಹಾಕಲೂಬಹುದು. ಮೂಲಭೂತ ಸೌಲಭ್ಯ ವ್ಯಾಪ್ತಿಗೆ ಕಡಿಮೆ ದರದಲ್ಲಿ ಮನೆ ನಿರ್ಮಿಸಿ ಕೊಡುವ ಗೃಹ ನಿರ್ಮಾಣ ಸಂಸ್ಥೆಗಳನ್ನು ತರುವ ಸಾಧ್ಯತೆ ಇದೆ. ಅಲ್ಲದೆ, ಷೇರು ಮಾರಾಟದ ಮೇಲಿನ ತೆರಿಗೆಯನ್ನು ತಗ್ಗಿಸುವ ಸಾಧ್ಯತೆ ಇದೆ.
ದೇಶೀಯ ಉಕ್ಕು ಉದ್ಯಮಕ್ಕೆ ಪ್ರೋತ್ಸಾಹ ನೀಡಲು ಸಿದ್ಧ ಕಬ್ಬಿಣ ಆಮದಿನ ಮೇಲೆ ಸುಂಕ ವಿಧಿಸುವ ಅಥವಾ ಅದಿರು ಆಮದಿನ ಮೇಲಿನ ಸುಂಕ ರದ್ದು ಮಾಡುವ ಸಾಧ್ಯತೆ ಇದೆ. ವಿದೇಶಿ ವಿನಿಮಯವನ್ನು ಸ್ವಾಹ ಮಾಡುತ್ತಿರುವ ಚಿನ್ನದ ಆಮದಿನ ಮೇಲೂ ಮಿತಿ ಹೇರಿಕೆ ನಿಚ್ಚಳ.
ಬಜೆಟ್ನಲ್ಲಿ ನಮಗೇನಿರುತ್ತದೆ?
ಆದಾಯ ತೆರಿಗೆ ಮಿತಿಯನ್ನು 2.25ರಿಂದ 2.50 ಲಕ್ಷಕ್ಕೆ ಹೆಚ್ಚಿಸಬಹುದು. ಆ ಮೂಲಕ ಕಡಿಮೆ ಆದಾಯ ವರ್ಗದ ಜನರ ಮನಗೆಲ್ಲಬಹುದು. ಶೈಕ್ಷಣಿಕ ಸಾಲ, ಗೃಹ ಸಾಲ, ವಿಮೆ, ಆರೋಗ್ಯ ವಿಮೆಗೆ ನೀಡುತ್ತಿರುವ ತೆರಿಗೆ ವಿನಾಯ್ತಿ ಮತ್ತಷ್ಟು ವಿಸ್ತರಿಸಬಹುದು. ಶೈಕ್ಷಣಿಕ ಸಾಲದ ಮೇಲಿನ ಬಡ್ಡಿ ತಗ್ಗಿಸಬಹುದು. ಕಡಿಮೆ ದರದ ಮನೆ ನಿರ್ಮಾಣ ಮಾಡುವ ಗೃಹ ನಿರ್ಮಾಣ ಸಂಸ್ಥೆಗಳಿಗೆ ತೆರಿಗೆ ವಿನಾಯ್ತಿ ನೀಡಬಹುದು. ಆಹಾರ ಧಾನ್ಯಗಳ ಬೆಲೆ ನಿಯಂತ್ರಣಕ್ಕೆ ಪೂರಕ ಕ್ರಮ ಕೈಗೊಳ್ಳಬಹುದು. ಸಾರ್ವಜನಿಕ ವಿತರಣಾ ವ್ಯವಸ್ಥೆ ಸುಧಾರಣೆಗೆ ಹೆಚ್ಚಿನ ಒತ್ತು ನೀಡಬಹುದು.
ಕರ್ನಾಟಕಕ್ಕೆ ಕೊಡುಗೆ ನಿರೀಕ್ಷೆ
ಮೇನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಕರ್ನಾಟಕಕ್ಕೆ ಕೇಂದ್ರ ಪ್ರಾಯೋಜಿತ ಯೋಜನೆಗಳ ಮಹಾಪೂರ ಹರಿಯುವ ಸಾಧ್ಯತೆ ಇದೆ. ಈ ಯೋಜನೆಗಳಲ್ಲಿ ಐಐಟಿ ಸೇರಿದರೂ ಅಚ್ಚರಿ ಪಡಬೇಕಿಲ್ಲ! ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನ ಮಾನ ನೀಡಿ ಆ ಭಾಗದಲ್ಲಿ ಮತಯಾಚನೆಗೆ ದಾರಿ ಮಾಡಿಕೊಂಡಿರುವ ಕಾಂಗ್ರೆಸ್, ಉಳಿದ ಭಾಗದಲ್ಲಿ ಮತಯಾಚನೆಗೆ ಮಾಡಿಕೊಳ್ಳುವ ಈ ಬಜೆಟ್ನಲ್ಲಿ ದಾರಿ ಮಾಡಿಕೊಡುವ ಸಾಧ್ಯತೆ ಇದೆ. ಕೇಂದ್ರ ಪ್ರಾಯೋಜಿತ ಯೋಜನೆಗಳ ಫಲಾನುಭವಿಗಳಿಗೆ ನೇರ ನಗದು ಪಾವತಿ ಯೋಜನೆಯೂ ಈ ಪಟ್ಟಿಗೆ ಸೇರಲಿದೆ.
ಬ್ಯಾಂಕುಗಳಿಗೆ ಬಂಡವಾಳ
ಸಾರ್ವಜನಿಕ ವಲಯದ ಬ್ಯಾಂಕ್ಗಳಿಗೆ ಬಂಡವಾಳ ಒದಗಿಸುವ, ಸಿಮೆಂಟ್ ಉತ್ಪಾದನೆ ಮೇಲಿನ ಅಬಕಾರಿ ಸುಂಕ ಹೆಚ್ಚಿಸುವ, ಉಷ್ಣ ವಿದ್ಯುತ್ಗೆ ಬಳಸುವ ಕಲ್ಲಿದ್ದಲು ಆಮದು ಸುಂಕ ರದ್ದು ಮಾಡುವ, ತೆರಿಗೆ ವಿನಾಯ್ತಿ ಬಾಂಡ್ಗಳ ಮೂಲಕ ವಿದ್ಯುತ್ ಕ್ಷೇತ್ರ ಬಂಡವಾಳ ಸಂಗ್ರಹಿಸುವ ಆಯ್ಕೆಯೂ ಚಿದು ಮುಂದಿದೆ.
-ರೇಣುಕಾಪ್ರಸಾದ್ ಹಾಡ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


