70 ವರ್ಷಗಳಾದ್ರೂ ಬಂದಿಲ್ಲ ಗಿರಾಕಿ!
ವಿಶ್ವದ ಅತಿ ದೊಡ್ಡ ಹೊಟೇಲ್ ಹಿಟ್ಲರ್ನ ಕನಸಿನ ಕೂಸು ಟಿ ಇಲ್ಲಿದೆ 10 ಸಾವಿರ ಕೋಣೆ

ಬರ್ಲಿನ್: 10 ಸಾವಿರ ಬೆಡ್ರೂಂ... 20 ಸಾವಿರ ಬೆಡ್ಗಳು... ಸಮುದ್ರಕ್ಕೆ ಮುಖಮಾಡಿರುವ ಕೋಣೆಗಳು... ಆದರೆ, ಒಬ್ಬನೇ ಒಬ್ಬ ಗ್ರಾಹಕನೂ ಇಲ್ಲ! ವಿಶ್ವದ ಅತಿ ದೊಡ್ಡ ಹೊಟೇಲ್ ಎಂಬ ಖ್ಯಾತಿ ಗಳಿಸಿರುವ ಜರ್ಮನಿಯ ಪ್ರೋರಾ ಹೊಟೇಲ್ನ ಸ್ಥಿತಿಯಿದು. ಹೌದು. ನಾಜಿಗಳು ಈ ಪ್ರೋರಾವನ್ನು ನಿರ್ಮಿಸಿ ಒಂದೆರಡಲ್ಲ, ಬರೋಬ್ಬರಿ 70 ವರ್ಷಗಳಾದವು. ಆದರೆ, ಒಂದೇ ಒಂದು ಬಾರಿಯೂ ಇದನ್ನು ಹೊಟೇಲ್ ಆಗಿ ಬಳಸಿಯೇ ಇಲ್ಲ ಎನ್ನುವುದು ಸತ್ಯ.
ನಿರ್ಮಾಣವಾಗಿದ್ದು ಯಾವಾಗ?
ಜರ್ಮನಿಯ ಸ್ಯಾಂಡಿ ಬೀಚ್ನ 4.5 ಕಿ.ಮೀ.ನುದ್ದಕ್ಕೂ ಈ ಹೊಟೇಲ್ ಚಾಚಿದೆ. 'ಸ್ಟ್ರೆಂತ್ ಥ್ರೂ ಜಾಯ್' ಎಂಬ ಯೋಜನೆಯಡಿ 1936ರಿಂದ 39ರವರೆಗೆ ಇದನ್ನು ನಾಜಿಗಳು ನಿರ್ಮಿಸಿದ್ದರು. ಜರ್ಮನ್ನ ಕೆಲಸಗಾರರಿಗೆ ದಣಿವಾರಿಸಲು ಹಾಗೂ ನಾಜಿ ಧರ್ಮವನ್ನು ಪ್ರಚಾರ ಮಾಡುವ ಉದ್ದೇಶದಿಂದ ಈ ಹೊಟೇಲ್ ಅನ್ನು ನಿರ್ಮಿಸಲಾಗಿತ್ತು. ಸ್ಥಳೀಯರು ಇದನ್ನು 'ಕೊಲೋಸ್ಸಸ್' ಎನ್ನುತ್ತಾರೆ.
ಹಿಟ್ಲರ್ ಕನಸಿನ ಕೂಸು
ಪ್ರೋರಾ ಹೊಟೇಲ್ ಸಂಕೀರ್ಣದಲ್ಲಿ ಒಟ್ಟು 8 ಕಟ್ಟಡಗಳಿವೆ. ಪ್ರತಿ ಕೋಣೆಯಲ್ಲೂ 2 ಬೆಡ್, ಒಂದು ಕಪಾಟು, ಒಂದು ಸಿಂಕ್ಗಳಿವೆ. ಇವು ಬೀಚ್ನಿಂದ ಸುಮಾರು 150 ಮೀ. ಅಂತರದಲ್ಲಿವೆ. ಸುಮಾರು 9 ಸಾವಿರ ಕೆಲಸಗಾರರು 3 ವರ್ಷಗಳಲ್ಲಿ ಹೊಟೇಲ್ನ ನಿರ್ಮಾಣಕಾರ್ಯ ಪೂರ್ಣಗೊಳಿಸಿದ್ದರು. ಪ್ರೋರಾ ನಿಜವಾಗಿ ಹಿಟ್ಲರ್ನ ಕನಸಿನ ಕೂಸಾಗಿತ್ತು. ಇದರೊಳಗೆ ಸಿನಿಮಾ, ಉತ್ಸವ ಹಾಲ್ಗಳು, ಈಜುಕೊಳ, ಹಡಗುಗಳು ನಿಲ್ಲಲು ಜೆಟ್ಟಿ ನಿರ್ಮಾಣ ಮುಂತಾದ ಕನಸನ್ನು ಕಂಡಿದ್ದ ಹಿಟ್ಲರ್.
ಕನಸೇಕೆ ನನಸಾಗಲಿಲ್ಲ?
ಯುದ್ಧದ ಸಮಯದಲ್ಲಿ ಬಳಸಲೆಂದು ಈ ಹೊಟೇಲ್ನ ಮಧ್ಯಭಾಗದಲ್ಲೊಂದು ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿತ್ತು. ಇದೇ ಸಂದರ್ಭದಲ್ಲಿ ಯುದ್ಧ ಆರಂಭವಾಗಿತ್ತು. ಹಾಗಾಗಿ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಕಾರ್ಮಿಕರನ್ನು ಹಿಟ್ಲರ್ ವಿ-ವೆಪನ್ ಸ್ಥಾವರ ನಿರ್ಮಾಣಕ್ಕೆ ನಿಯೋಜಿಸಿದ. ಹಾಗಾಗಿ ಹಿಟ್ಲರ್ನ ಎಲ್ಲ ಯೋಜನೆಗಳೂ ಭಗ್ನಗೊಂಡವು. ಕಟ್ಟಡವನ್ನು ನಿರಾಶ್ರಿತರು ಆಶ್ರಯ ಪಡೆಯಲು, ಸೇನಾ ಉದ್ದೇಶಕ್ಕೆ ಬಳಸಲಾಯಿತು.
ಆಧುನಿಕ ರೆಸಾರ್ಟ್ ನಿರ್ಮಾಣಕ್ಕೆ ಚಿಂತನೆ
2011ರಲ್ಲಿ ಕಟ್ಟಡದ ಒಂದು ಬ್ಲಾಕನ್ನು 400 ಬೆಡ್ಗಳ ಯೂತ್ ಹಾಸ್ಟೆಲ್ಗೆಂದು ಮೀಸಲಿಡಲಾಯಿತು. ಈಗ ಪ್ರೋರಾವನ್ನು ಆಧುನಿಕ ರೆಸಾರ್ಟ್ ಆಗಿ ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಗಿದೆ. 300 ಬೆಡ್ಗಳನ್ನು ಹೊಂದಿರುವ ರೆಸಾರ್ಟ್ನಲ್ಲಿ ಟೆನ್ನಿಸ್ ಕೋರ್ಟ್, ಸ್ವಿಮ್ಮಿಂಗ್ ಪೂಲ್, ಶಾಪಿಂಗ್ ಕೇಂದ್ರವೂ ಇರಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


