ದೇಶ

ಕಾರ್ಗಿಲ್: ಪಾಕ್ ಯೋಧರ ಕೃತ್ಯ!

ಉಗ್ರರು ಆ ಯುದ್ಧದಲ್ಲಿ ಪಾಲ್ಗೊಂಡೇ ಇಲ್ಲ: ಪಾಕ್ ಮಾಜಿ ಲೆ.ಜನರಲ್

ಕಾರ್ಗಿಲ್: ಪಾಕ್ ಯೋಧರ ಕೃತ್ಯ!
Published On :

ನವದೆಹಲಿ: ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡವರು ಉಗ್ರರಲ್ಲ, ಪಾಕಿಸ್ತಾನದ ಯೋಧರು!
- ಹೀಗೆಂದು ಸ್ವತಃ ಪಾಕಿಸ್ತಾನದ ನಿವೃತ್ತ ಲೆಫ್ಟಿನೆಂಟ್ ಜನರಲ್‌ವೊಬ್ಬರು ಹೇಳಿಕೊಂಡಿದ್ದಾರೆ. ಈ ಮೂಲಕ ಅವರು ಕಾರ್ಗಿಲ್ ಯುದ್ಧ ಉಗ್ರರ ಕೃತ್ಯ ಎನ್ನುವ ಹೇಳಿಕೆಗಳನ್ನು ತಳ್ಳಿಹಾಕಿದ್ದಾರೆ. ಇದು ಪಾಕ್ ಸೇನೆಯದೇ ಕೃತ್ಯ ಎಂದು ಒಪ್ಪಿಕೊಂಡಿದ್ದಾರೆ.
ಕಾರ್ಗಿಲ್ ಯುದ್ಧದ ವೇಳೆ ಐಎಸ್‌ಐನ ವಿಶ್ಲೇಷಣಾ ವಿಭಾಗದ ಮುಖ್ಯಸ್ಥರೂ ಆಗಿದ್ದ ಲೆ. ಜನರಲ್ ಶಾಹಿದ್ ಅಜೀಜ್, ಭಾರತದ ಕಡೆಯಿಂದ ದಾಳಿ ನಡೆಸುವ ಯಾವುದೇ ಸೂಚನೆಗಳು ಇರಲಿಲ್ಲ. ಆದರೂ ಈ ಯುದ್ಧ ನಡೆಸಲಾಯಿತು. ಇದೊಂದು ಊಹೆಯ ಆಧಾರದ ಮೇಲೆ ನಡೆಸಿದ ವಿಫಲ ಕಾರ್ಯಾಚರಣೆ ಎಂದು ಅವರು ಆರೋಪಿಸಿದ್ದಾರೆ. ಯಾರದ್ದೋ ತಪ್ಪು ನಿರ್ಧಾರಗಳಿಗೆ ದೇಶದ ಯುವ ಸೈನಿಕರು ಬಲಿಯಾಗಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮುಷರ್ರಫ್ ವಿರುದ್ಧ ಆಕ್ರೋಶ: ಕಾರ್ಗಿಲ್ ಯುದ್ಧಕ್ಕೆ ಸಂಬಂಧಿಸಿ ಪಾಕ್‌ನ ಅಂದಿನ ಅಧ್ಯಕ್ಷ ಪರ್ವೆಜ್ ಮುಷರ್ರಫ್ ಕುರಿತೂ ಶಾಹಿದ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಕಾರ್ಗಿಲ್ ಪ್ರಹಸನ'ದಲ್ಲಿ ಮುಷರ್ರಪ್ ಅವರು ಪಾಕ್‌ನ ಯುವ, ದೇಶಭಕ್ತ ಸೈನಿಕರನ್ನು ಯುದ್ಧದ ದಾಳವನ್ನಾಗಿ ಮಾಡಿಕೊಂಡರು ಎಂದು ಶಾಹಿದ್ ದೂರಿದ್ದಾರೆ.
ಗಡಿ ನಿಯಂತ್ರಣ ರೇಖೆಯಲ್ಲಿರುವ ಖಾಲಿ ಗುಡ್ಡಗಳನ್ನು ಯುದ್ಧ ಸಾಮಗ್ರಿಗಳು ಹಾಗೂ ಬಂದೂಕುಗಳೊಂದಿಗೆ ಆಕ್ರಮಿಸಿಕೊಳ್ಳಲು ಸೈನಿಕರಿಗೆ ಸೂಚಿಸಲಾಗಿತ್ತು. ಪಾಕ್ ಸೈನಿಕರು ಖಾಲಿ ಬಂದೂಕುಗಳೊಂದಿಗೆ ಕೊನೆಯ ಜೀವ ಇರುವವರೆಗೂ ಹೋರಾಟ ನಡೆಸಿದರು ಎಂದು ಮಾಜಿ ಜನರಲ್ ಹೇಳಿಕೊಂಡಿದ್ದಾರೆ.
ಕಾರ್ಗಿಲ್ ಯುದ್ಧದ ಮುಖ್ಯ ಉದ್ದೇಶ ಸಿಯಾಚಿನ್ ಸಂಪರ್ಕ ಮಾರ್ಗವನ್ನು ಕಡಿತಗೊಳಿಸುವುದೇ ಆಗಿತ್ತು. ಆದರೆ, ಭಾರತೀಯ ಕಡೆಯಿಂದ ಬಂದ ಪ್ರತಿಕ್ರಿಯೆ ಅನಿರೀಕ್ಷಿತವಾಗಿತ್ತು. ಪಾಕ್‌ನ ಇಡೀ ಯೋಜನೆಯನ್ನೇ ಅದು ತಲೆಕೆಳಗು ಮಾಡಿತು ಎಂದು ಶಾಹಿದ್ ತಮ್ಮ ಲೇಖನದಲ್ಲಿ ತಿಳಿಸಿದ್ದಾರೆ.

ಭಾರತದ ಕಡೆಯಿಂದ ದಾಳಿ ನಡೆಸುವ ಯಾವುದೇ ಸೂಚನೆಗಳು ಇರಲಿಲ್ಲ. ಆದರೂ ಈ ಯುದ್ಧ ನಡೆಸಲಾಯಿತು. ಇದೊಂದು ಊಹೆಯ ಆಧಾರದ ಮೇಲೆ ನಡೆಸಿದ ವಿಫಲ ಕಾರ್ಯಾಚರಣೆ. ಯಾರದ್ದೋ ತಪ್ಪು ನಿರ್ಧಾರಗಳಿಗೆ ದೇಶದ ಯುವ ಸೈನಿಕರು ಬಲಿಯಾಗಬೇಕಾಯಿತು.
- ಲೆ. ಜನರಲ್ ಶಾಹಿದ್ ಅಜೀಜ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.