ಜೀಪ್ ಕದಿಯಲು ಮಾಲೀಕರ ನೆರವನ್ನೇ ಕೇಳಿದ ಭೂಪ!
ಅರಸೀಕೆರೆ: ಜೀಪ್ ಕಳವು ಮಾಡಲು ಮಾಲೀಕನನ್ನೇ ಸಹಾಯ ಕೇಳಿದ ಕಳ್ಳನ ಕಥೆಯಿದು! ನಂತರ ಆ ಕಳ್ಳನನ್ನು ಮಾಲೀಕರು ಪಕ್ಕದ ಮನೆಯವರ ಸಹಾಯದೊಂದಿಗೆ ಮಾವನ (ಪೊಲೀಸ್ ಠಾಣೆಗೆ) ಮನೆಗೆ ಕಳುಹಿಸಿದ್ದಾರೆ!
ಇಂತಹ ವಿಚಿತ್ರ ಘಟನೆ ನಡೆದಿದ್ದು ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ. ಹೌದು. ಪಟ್ಟಣದ ಶ್ಯಾನುಭೋಗರ ಬೀದಿಯಲ್ಲಿ ತಡರಾತ್ರಿ ಜೀಪ್‌ವೊಂದನ್ನು ಅಪಹರಿಸಲು ಡೆಕೊರೇಟರ್ ಆಗಿದ್ದ ಮಂಜುನಾಥ್ ಎಂಬ ವ್ಯಕ್ತಿ ಆಚೆ ಈಚೆ ಸುಳಿದಾಡಿದ್ದಾನೆ. ನಂತರ ಕಳ್ಳ ಜೀಪಿನ ಬಾನಟ್ ಅನ್ನು ತೆರೆದು ನೋಡುತ್ತಿದ್ದ. ಇದರಿಂದ ಅನುಮಾನಗೊಂಡ ಸಮೀಪದ ಮನೆಯವರು ಕಳ್ಳನನ್ನು ಏನು ಮಾಡುತ್ತಿರುವೆ ಎಂದು ವಿಚಾರಿಸಿದ್ದಾರೆ. ಆಗ ಕಳ್ಳ 'ಗಾಡಿ ಟ್ರಬಲ್ ಇದೆ. ತಗೊಂಡು ಹೋಗಿ ನೋಡು ಎಂದು ಜೀಪ್‌ನ ಮಾಲೀಕರು ತಿಳಿಸಿದ್ದಾರೆ. ಇದಕ್ಕೆ ಸ್ಪಾನರ್ ಬೇಕು. ಸ್ವಲ್ಪ ಕೊಡಿ' ಎಂದು ವಿಚಾರಿಸಿದ ಸಮೀಪದ ಮನೆಯವರಿಗೆ ತಿಳಿಸಿದ್ದಾನೆ. ಆಗ ಸ್ಪಾನರ್ ಕೊಡುವ ನೆಪದಲ್ಲಿ ಒಳಗೆ ಹೋದ ಸಮೀಪದ ಮನೆಯವರು, ಜೀಪ್ ಮಾಲೀಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ನಂತರ ತಕ್ಷಣ ಸ್ಥಳಕ್ಕೆ ಆಗಮಿಸಿದ ಜೀಪ್ ಮಾಲೀಕರು, ಕಳ್ಳನನ್ನು ಮೂರನೇ ವ್ಯಕ್ತಿಯಂತೆ ಮಾತನಾಡಿಸಿ, 'ಏನಣ್ಣಾ ಗಾಡಿ ಏನಾಗಿದೆ? ಯಾಕೆ ಸ್ಟಾರ್ಟ್ ಆಗ್ತಿಲ್ವಾ' ಎಂದು ಕೇಳಿದ್ದಾರೆ. 'ಸ್ಟಾರ್ಟ್ ಆಗುತ್ತೆ. ಇಬ್ಬರೂ (ಮಾಲೀಕರು, ಸಮೀಪದ ಮನೆಯವರಿಗೆ) ಗಾಡಿ ತಳ್ಳಿ' ಎಂದು ಹೇಳಿದ್ದಾನೆ ಕಳ್ಳ. ಕೂಡಲೇ ಆತನಿಗೆ ಸರಿಯಾಗಿ ಶಾಸ್ತಿ ಮಾಡಿ ಮಂಜುನಾಥನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

