ದೇಶ

ವಿಶ್ವರೂಪಂ ವಿವಾದ: ಸೌಹಾರ್ದ ಪರಿಹಾರಕ್ಕೆ ಹೈಕೋರ್ಟ್ ಸಲಹೆ

ವಿಶ್ವರೂಪಂ ವಿವಾದ: ಸೌಹಾರ್ದ ಪರಿಹಾರಕ್ಕೆ ಹೈಕೋರ್ಟ್ ಸಲಹೆ
Published On :

ಚೆನ್ನೈ: ವಿವಾದಿತ ಚಿತ್ರ 'ವಿಶ್ವರೂಪಂ' ಬಿಡುಗಡೆ ಕುರಿತ ಕುತೂಹಲ ಮತ್ತೊಂದು ದಿನ ಮುಂದಕ್ಕೆ ಹೋಗಿದೆ.
 ವಿವಾದವನ್ನು ಸೌಹಾರ್ದವಾಗಿ ಪರಿಹರಿಸುವ ನಿಟ್ಟಿನಲ್ಲಿ ಎಲ್ಲಾ ಆಯ್ಕೆಗಳನ್ನು ಪರಿಶೀಲಿಸುವಂತೆ ನಿರ್ಮಾಪಕ ಕಮಲ್ ಹಾಸನ್ ಅವರಿಗೆ ಮದ್ರಾಸ್ ಹೈಕೋರ್ಟ್ ಸೋಮವಾರ ಸಲಹೆ ನೀಡಿದೆ.
 ಅಲ್ಲದೆ, ಚಿತ್ರದ ಮೇಲೆ ತಮಿಳುನಾಡು ಸರ್ಕಾರ ಹೇರಿದ್ದ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದ ತೀರ್ಪನ್ನು ಮಂಗಳವಾರಕ್ಕೆ ಮುಂದೂಡಿದೆ.
ವಿಶ್ವರೂಪಂನಲ್ಲಿ ಮುಸ್ಲಿಂ ಸಮುದಾಯವನ್ನು ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರವು ಚಿತ್ರ ಪ್ರದರ್ಶನ ಮೇಲೆ ನಿಷೇಧ ಹೇರಿತ್ತು. ಸರ್ಕಾರದ ಈ ನಿಲುವನ್ನು ಪ್ರಶ್ನಿಸಿ ಕಮಲಹಾಸನ್ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
 ಈ ಕುರಿತು ಸೋಮವಾರ ವಿಚಾರಣೆ ನಡೆಸಿದ ನ್ಯಾ. ಕೆ.ವೆಂಕಟರಮಣನ್, ಸಮುದಾಯಗಳ ನಡುವೆ ಸಾಮರಸ್ಯ ಹಾಳಾಗದಿರಲು ದೇಶದ ಕಾನೂನು ಮತ್ತು ಪರಿಪಾಲನೆ ಸ್ಥಿತಿ, ಏಕತೆಯನ್ನು ಅರ್ಜಿದಾರರು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ.
ಶನಿವಾರವಷ್ಟೇ ವಿವಾದಿತ'ವಿಶ್ವರೂಪಂ' ಚಿತ್ರವನ್ನು ವೀಕ್ಷಿಸಿದ್ದ ನ್ಯಾಯಮೂರ್ತಿ ವೆಂಕಟರಮಣನ್ ಅವರು, ವಿವಾದಕ್ಕೆ ಸಂಬಂಧಿಸಿ ಸರ್ಕಾರದ ಜತೆ ಸೌಹಾರ್ದ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಆಯ್ಕೆಗಳನ್ನು ಪರಿಶೀಲಿಸುವಂತೆ ಸಲಹೆ ನೀಡಿದ್ದಾರೆ.

57.13 ಲಕ್ಷ ಗಳಿಕೆ
ಪ್ರತಿಭಟನೆಗಳಿಂದಾಗಿ ಭಾರದಲ್ಲಿ ನಷ್ಟದ ಹಾದಿ ತುಳಿದಿರುವ ವಿಶ್ವರೂಪಂ ಇಂಗ್ಲೆಂಡ್‌ನಲ್ಲಿ ಮಾತ್ರ ಮೊದಲ ಮೂರು ದಿನಗಳಲ್ಲೇ 57.13 ಲಕ್ಷ ಗಳಿಸಿದೆ. ಆದರೆ, ಮಲೇಷ್ಯಾದಲ್ಲೂ ಚಿತ್ರಕ್ಕೆ ನಿಷೇಧ ಹೇರಿರುವುದು ಸಮಸ್ಯೆಯಾಗಿ ಪರಿಣಮಿಸಿದೆ.

ಚಿತ್ರವು ಯಾವುದೇ ರೀತಿಯಲ್ಲೂ ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವಂತಿಲ್ಲ. ಚಿತ್ರ ನಿರ್ಮಾಣದ ವೇಳೆಯೂ ನಾವು ವಿಶ್ವರೂಪಂ ಯಾವುದೇ ಸಮುದಾಯದ ಭಾವನೆಗಳಿಗೆ ನೋವು ಮಾಡುವುದಿಲ್ಲ ಎಂದು ನಂಬಿದ್ದೆವು.
- ಚಂದ್ರಹಾಸನ್, ಕಮಲ್‌ಹಾಸನ್ ಸಹೋದರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.