ತಾಳ್ಮೆ ಕಳೆದುಕೊಳ್ಳಬೇಡಿ, ಹೋರಾಟಕ್ಕೆ ಬೆಂಬಲ ನೀಡಿ
ಚೆನ್ನೈ: ವಿಶ್ವರೂಪಂ ಚಿತ್ರ ವಿವಾದ ಈಗ ಹೊಸ ತಿರುವು ಪಡೆದುಕೊಂಡಿದೆ. ವಿಶ್ವರೂಪಂಗೆ ಎದುರಾಗುತ್ತಿದ್ದ ಅಡ್ಡಿ ಆತಂಕದಿಂದ ಬೇಸತ್ತು ಒಂದು ಹಂತದಲ್ಲಿ ತಮಿಳುನಾಡಿನಿಂದಲೇ ಹೊರಹೋಗುವ ಭಾವುಕ ನಿರ್ಧಾರ ಪ್ರಕಟಿಸಿದ್ದ ನಟ ಕಮಲ್ಹಾಸನ್ ರಾತ್ರಿ ವೇಳೆಗೆ ನ್ಯಾಯಾಂಗ ಹೋರಾಟ ಮುಂದುವರಿಸುವುದಾಗಿ ನಿರ್ಧರಿಸಿದ್ದಾರೆ. ತಮಿಳುನಾಡು ತೊರೆಯುವ ನಿರ್ಧಾರದಿಂದ ಅಭಿಮಾನಿಗಳು ಬೀದಿಗಿಳಿಯುವ ಲಕ್ಷಣ ಕಾಣಿಸುತ್ತಿದ್ದಂತೆ ಅವರಿಗೆ ಕಮಲ್ ತಾಳ್ಮೆ ಕಾಯ್ದುಕೊಳ್ಳುವಂತೆ ಮನವಿ ಮಾಡಿದ್ದಾರೆ.
ತಮಿಳುನಾಡು ತ್ಯಜಿಸುವುದಾಗಿ ಹೇಳಿದ್ದು ಆಕ್ರೋಶದಿಂದಲ್ಲ. ಬೇಸರದಿಂದ. ಯಾವುದೇ ಕಾರಣಕ್ಕೂ ಅಭಿಮಾನಿಗಳು ತಾಳ್ಮೆ ಕಳೆದುಕೊಳ್ಳಬಾರದು. ಶಿಸ್ತು, ಸಂಯಮ ಕಾಯ್ದುಕೊಳ್ಳಬೇಕು. ನನಗೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಅದರಲ್ಲಿ ಮುಸ್ಲಿಮರೂ ಇದ್ದಾರೆ. ನಾನು ವಿವಾದವನ್ನು ಸೌಹಾರ್ದವಾಗಿ ಪರಿಹರಿಸಲು ಪ್ರಯತ್ನಿಸುತ್ತಿದ್ದೇನೆ. ಚಿತ್ರದ ವಿಚಾರವಾಗಿ ನ್ಯಾಯಾಲಯ ಇನ್ನಷ್ಟೇ ತೀರ್ಪು ನೀಡಬೇಕಿದೆ. ಯಾವುದೇ ಕಾರಣಕ್ಕೂ ಪ್ರತಿಭಟಿಸಬೇಡಿ ಎಂದು ಅವರು ಬುಧವಾರ ರಾತ್ರಿ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಇದಕ್ಕೂ ಮುನ್ನ ಬೆಳಗ್ಗೆ ಒಂದು ಹಂತದಲ್ಲಿ ಭಾವುಕರಾಗಿದ್ದ ಅವರು, ತಾವು ತಮಿಳುನಾಡಿನಿಂದಲೇ ಹೊರಹೋಗುವ ನಿರ್ಧಾರ ಪ್ರಕಟಿಸಿದ್ದರು.ಸರ್ಕಾರಕ್ಕೆ ನಾನು ಇಲ್ಲಿರುವುದು ಇಷ್ಟ ಇಲ್ಲ. ನಾನು ಬೇರೆ ಜಾತ್ಯತೀತ ರಾಜ್ಯ ಅಥವಾ ದೇಶವನ್ನು ಹುಡುಕಿಕೊಳ್ಳಬೇಕಾಗಿದೆ. ತಮಿಳುನಾಡು ಹೊರತುಪಡಿಸಿ ಕೇರಳದಿಂದ ಕಾಶ್ಮೀರದವರೆಗೆ ಯಾವುದಾದರೂ ಜಾತ್ಯತೀತ ರಾಜ್ಯದಲ್ಲಿ ನೆಲೆಸುತ್ತೇನೆ. ಅಂಥ ಸ್ಥಳ ದೇಶದಲ್ಲಿ ಸಿಗದೇ ಹೋದರೆ ಹೊರದೇಶದಲ್ಲಿ ನೆಲೆಸುತ್ತೇನೆ. ಕಲಾವಿದ ಎಂ.ಎಫ್. ಹುಸೇನ್ ಅವರು ಈ ರೀತಿ ಮಾಡಿದ್ದರು. ಈಗ ನಾನೂ ಅದೇ ಮಾರ್ಗ ಅನುಸರಿಸುತ್ತೇನೆ ಎಂದು ಕಮಲ್ ತಿಳಿಸಿದ್ದರು.
ನಾವೆಲ್ಲ ಇಂಥ ಪರಿಸ್ಥಿತಿ ಎದುರಿಸಿದ್ದೇವೆ. ಕಮಲ್ ಬಗ್ಗೆ ನನಗೆ ಗೌರವ ಇದೆ. ವಿಶ್ವರೂಪಂನ ವಿಷುವಲ್ ಎಫೆಕ್ಟ್ ಕೆಲಸವನ್ನು ಮಾಡಿದ್ದು ನನ್ನ ಸಂಸ್ಥೆ ರೆಡ್ ಚಿಲ್ಲೀಸ್. ಚಿತ್ರ ಪ್ರದರ್ಶನದ ಮೇಲೆ ನಿಷೇಧ ಹೇರಿರುವುದು ಸರಿಯಲ್ಲ. ಸೆನ್ಸಾರ್ ಮಂಡಳಿಯ ಪ್ರಮಾಣ ಪತ್ರ ಸಿಕ್ಕರೆ ಚಿತ್ರ ದೇಶದೆಲ್ಲೆಡೆ ಪ್ರದರ್ಶನಕ್ಕೆ ಯೋಗ್ಯವಾಗಿದೆ ಎಂದೇ ಅರ್ಥ.
- ಶಾರುಖ್ಖಾನ್, ಬಾಲಿವುಡ್ ನಟ
ಬೆದರಿಕೆ ರಾಷ್ಟ್ರೀಯ ಕಾಯಿಲೆಯಾಗಿ ಬಿಟ್ಟಿದೆ. ಇದೇ ಕಾರಣಕ್ಕೆ ಅವರು ತಮ್ಮ ಚಿತ್ರಕ್ಕೆ ಕತ್ತರಿ ಪ್ರಯೋಗಿಸಬೇಕಾಗಿ ಬಂದಿರುವುದು ದುರದೃಷ್ಟಕರ. ನಾವೆಲ್ಲಾ ಅವರ ಜತೆಗಿದ್ದೇವೆ. ಅವರೊಬ್ಬ ಜಾತ್ಯತೀತ ವ್ಯಕ್ತಿ.
- ಪ್ರಕಾಶ್ ರಾಜ್, ನಟ
ನಾವು ಮುಕ್ತ ಸಮಾಜದಲ್ಲಿದ್ದೇವೆ. ಇಲ್ಲಿ ಸಂವಿಧಾನ ಇದೆ, ಕಲಾವಿದರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ವಿಶ್ವರೂಪಂ ವಿಚಾರದಲ್ಲಿ ಏನಾಗಿದೆ ಎಂಬ ಕುರಿತು ವಿಚಾರಣೆ ನಡೆಸುತ್ತೇವೆ.
- ಸುಶೀಲ್ ಕುಮಾರ್ ಶಿಂಧೆ, ಕೇಂದ್ರ ಗೃಹ ಸಚಿವ
ಕಾನೂನು ಸುವ್ಯವಸ್ಥೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು ಹಾಗೂ ಮುಕ್ತವಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡುವುದು ರಾಜ್ಯ ಸರ್ಕಾರದ ಕೆಲಸ. ರಾಜ್ಯ ಸರ್ಕಾರ ಭಯೋತ್ಪಾದಕನಾಗಿ ಬದಲಾಗುತ್ತಿದೆಯೇ? ನಾವೀಗ ರಾಜ್ಯದ ಭಯೋತ್ಪಾದನೆ ಜತೆ ವ್ಯವಹರಿಸಬೇಕಾದ ಪರಿಸ್ಥಿತಿ ಬಂದಿದೆಯೇ?
- ಮಹೇಶ್ಭಟ್, ಚಿತ್ರ ನಿರ್ದೇಶಕ
ಇದು ತಮಿಳುನಾಡಿನ ಐಕಾನ್ ಆಗಿರುವ ಕಲಾವಿದನಿಗೆ ಕೊಡುವ ಕಿರುಕುಳ. ನಾವು ಕೆಲವು ವಿಚಾರಗಳಿಗೆ ಸೂಕ್ಷ್ಮವಾಗಿದ್ದೇವೆ. ಚಿತ್ರ ವಿರೋಧಿಸುವವರಿಗೆ ಆ ಚಿತ್ರವನ್ನು ನೋಡದೇ ಇರುವ ಸ್ವಾತಂತ್ರ್ಯ ಇದೆ. ಸರ್ಕಾರದ ವಕೀಲರು ಸೆನ್ಸಾರ್ ಮಂಡಳಿ ವಿರುದ್ಧ ಬಳಸಿದ ಪದ ಆಕ್ಷೇಪಾರ್ಹ.
- ಲೀಲಾ ಸ್ಯಾಮ್ಸನ್, ರಾಷ್ಟ್ರೀಯ ಸೆನ್ಸಾರ್ ಮಂಡಳಿ ಅಧ್ಯಕ್ಷೆ
ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಗಳು ವಿಶ್ವರೂಪಂ ವಿವಾದವನ್ನು ಸೌಹಾರ್ದವಾಗಿ ಪರಿಹರಿಸುವ ಸಲಹೆ ನೀಡಿದ್ದರೂ ತಮಿಳುನಾಡು ಸರ್ಕಾರ ಯಾಕೆ ಈ ಕುರಿತು ಆಸಕ್ತಿ ತೋರುತ್ತಿಲ್ಲ? ಚಿತ್ರ ಪ್ರದರ್ಶನವನ್ನೇ ನಿಷೇಧಿಸುವಂಥ ಕಠಿಣ ನಿರ್ಧಾರ ಯಾಕೆ ತೆಗೆದುಕೊಂಡಿತು?
- ಎಂ. ಕರುಣಾನಿಧಿ, ತಮಿಳುನಾಡು ಮಾಜಿ ಸಿಎಂ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

