ಕೀಟನಾಶಕಕ್ಕೆ ಸರ್ಕಾರಿ ಪ್ರೋತ್ಸಾಹ

ನವದೆಹಲಿ: ಕೀಟನಾಶಕಗಳ ಉಪಯೋಗ ಮಾಡುವಲ್ಲಿ ರೈತರಿಗೆ ಸರ್ಕಾರಿ ಸಂಸ್ಥೆಗಳೇ ವಂಚಿಸುತ್ತಿವೆಯೇ? ಜತೆಗೆ ತಾವೇ ರೂಪಿಸಿರುವ ನಿಯಮಗಳನ್ನು ಉಲ್ಲಂಘಿಸುತ್ತಿವೆಯೇ?
ಹೌದು. ನವದೆಹಲಿಯ ಸೆಂಟರ್ ಫಾರ್ ಸೈನ್ಸ್ ಆ್ಯಂಡ್ ಎನ್ವಿರಾನ್ಮೆಂಟ್ (ಸಿಎಸ್ಇ)ನಡೆಸಿದ ಅಧ್ಯಯನದಲ್ಲಿ ಈ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ.
ಯಾವೆಲ್ಲ ಸಂಸ್ಥೆಗಳು?: ಅಧ್ಯಯನದ ಪ್ರಕಾರ ರಾಷ್ಟ್ರೀಯ ತೋಟಗಾರಿಕಾ ಮಂಡಳಿ (ಎನ್ಎಚ್ಬಿ) ರಾಜ್ಯ ಸರ್ಕಾರಗಳ ಕೃಷಿ ಇಲಾಖೆಗಳು, ಕೃಷಿ ವಿವಿಗಳು ಸೇರಿದಂತೆ ಪ್ರಮುಖ ಸಂಸ್ಥೆಗಳು ನಿಯಮ ಉಲ್ಲಂಘಿಸುತ್ತಿವೆ.
ಹೇಗೆ ಉಲ್ಲಂಘನೆ?: ಕೀಟನಾಶಗಳ ಉಪಯೋಗವನ್ನು ಕೇಂದ್ರ ಸರ್ಕಾರದ ಕೃಷಿ ಸಚಿವಾಲಯದ ವ್ಯಾಪ್ತಿಯಲ್ಲಿರುವ ಕೇಂದ್ರೀಯ ಕೀಟನಾಶಕ ಮಂಡಳಿ ಮತ್ತು ನೋಂದಣಿ ಸಮಿತಿ (ಸಿಐಬಿಆರ್ಸಿ) ನಿಯಂತ್ರಿಸುತ್ತದೆ. ಅವುಗಳ ಉಪಯೋಗಕ್ಕೆ ಮುನ್ನ ಈ ಸಂಸ್ಥೆಯಿಂದ ಅನುಮತಿ ಪಡೆದಿರಬೇಕು. ಅಲ್ಲದೆ ಯಾವ ಬೆಳೆಗೆ ಯಾವ ಕೀಟನಾಶಕ ಎನ್ನುವುದು ಈ ಸಮಿತಿ ಶಿಫಾರಸು ಮಾಡುತ್ತದೆ.
ದುರಂತವೆಂದರೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳೇ ಬಹಿರಂಗವಾಗಿ ಈ ನಿಯಮ ಉಲ್ಲಂಘಿಸಿ ಹಾನಿಕಾರಕವಾಗಿರುವ ಕೀಟನಾಶಕಗಳನ್ನು ಬಳಸಲು ರೈತರಿಗೆ ಪ್ರೋತ್ಸಾಹ ನೀಡುತ್ತಿವೆ ಎಂದು ಆಂಗ್ಲ ದೈನಿಕ 'ಮೈಲ್ ಟುಡೇ' ವರದಿ ಮಾಡಿದೆ.
ಯಾವ ಬೆಳೆಗಳಿಗೆ ಬಳಕೆ?: ಗೋಧಿ, ಬತ್ತ, ಮಾವು, ಆ್ಯಪಲ್, ಹೂಕೋಸು, ಕರಿಮೆಣಸು, ಚಹಾ, ಕಬ್ಬು, ಹತ್ತಿ ಮತ್ತು ಏಲಕ್ಕಿ ಬೆಳೆಗಳಿಗೆ ಹಾನಿಕಾರವಾಗಿರುವ ಕೀಟನಾಶಕಗಳನ್ನು ಬಳಸಲಾಗುತ್ತಿದೆ. ಹೆಚ್ಚಿನ ರಾಜ್ಯಗಳಲ್ಲಿ ಈ ನೀತಿ ಅನುಸರಿಸಲಾಗುತ್ತಿದೆ ಎಂದು ಸಿಎಸ್ಇ ನಡೆಸಿದ ಅಧ್ಯಯನದಲ್ಲಿ ಗೊತ್ತಾಗಿದೆ.
ವಿವಿಧ ರಾಜ್ಯಗಳಲ್ಲಿರುವ ಕೃಷಿ ಇಲಾಖೆಗಳು ಮತ್ತು ಕೃಷಿ ವಿವಿಗಳು ಶಿಫಾರಸು ಮಾಡಿರುವ ಕೀಟನಾಶಕಗಳಿಗೂ ಸಿಐಬಿಆರ್ಸಿಯಲ್ಲಿ ನೋಂದಾವಣೆಯಾದ ಕೀಟನಾಶಕಗಳಿಗೂ ಬಹಳ ವ್ಯತ್ಯಾಸವಿದೆ ಎಂದು ಅಧ್ಯಯನ ವರದಿ ತಿಳಿಸಿದೆ.
ಗರಿಷ್ಠ ಮಾಪನ ನಿಗದಿಪಡಿಸಿಲ್ಲ
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್ಎಸ್ಎಸ್ಎಐ) ಕೀಟನಾಶಕಗಳ ಉಪಯೋಗದ ಗರಿಷ್ಠ ಮಾಪನ (ಎಂಆರ್ಎಲ್)ಗಳನ್ನು ನಿಗದಪಡಿಸುತ್ತದೆ. ಆದರೆ, ನೋಂದಣಿಗೊಂಡಿರುವ 234 ಕೀಟನಾಶಕಗಳ ಪೈಕಿ 59ಕ್ಕೆ ಉಪಯೋಗದ ಗರಿಷ್ಠ ಮಾಪನ ನಿಗದಿಪಡಿಸಲಾಗಿಲ್ಲ. ದೇಶದಲ್ಲಿ ಸಾಮಾನ್ಯವಾಗಿ ಬಳಕೆಯಾಗುತ್ತಿರುವ 20 ಕೀಟನಾಶಕಗಳ ಪೈಕಿ 18ಕ್ಕೆ ಎಂಆರ್ಎಲ್ ಪರೀಕ್ಷೆ ಪೂರ್ತಿಯಾಗಿ ನಡೆದೇ ಇಲ್ಲ. ತರಕಾರಿಗಳು, ಹಣ್ಣುಗಳು ಮತ್ತು ಆಹಾರ ಧಾನ್ಯಗಳಿಗೆ ಎಂಆರ್ಎಲ್ ನಿಗದಿಪಡಿಸಲಾಗುತ್ತದೆ.
ಒಂದಷ್ಟು ಸತ್ಯಗಳು
ಪಂಜಾಬ್ ಕೃಷಿ ವಿವಿ ಗೋದಿ ಬೆಳೆಗೆ 40 ಕೀಟನಾಶಕಗಳನ್ನು ಶಿಫಾರಸು ಮಾಡಿದೆ. ಈ ಪೈಕಿ 11 ಕೀಟನಾಶಕಗಳು ಸಿಐಬಿಆರ್ಸಿಯಲ್ಲಿ ನೋಂದಣಿಯಾಗಿಲ್ಲ.
ಮಧ್ಯಪ್ರದೇಶದ ಕೃಷಿ ಇಲಾಖೆ ಶಿಫಾರಸು ಮಾಡಿದ 29 ಕೀಟನಾಶಕಗಳ ಪೈಕಿ 9 ನೋಂದಣಿಯಾಗಿಲ್ಲ.
ರಾಷ್ಟ್ರೀಯ ತೋಟಗಾರಿಕೆ ಮಂಡಳಿ ಆ್ಯಪಲ್ಗೆ ಅನುಮೋದನೆ ನೀಡಿದ 19ರ ಪೈಕಿ 8 ನೋಂದಣಿಯಾಗಿಲ್ಲ.
ಕ್ಯಾನ್ಸರ್ಗೆ ಕಾರಣ
ಸರ್ಕಾರಿ ವ್ಯಾಪ್ತಿಯ ಸಂಸ್ಥೆಗಳು ಅನುಮೋದನೆ ನೀಡಿರುವ ಕೀಟನಾಶಕಗಳು ಕ್ಯಾನ್ಸರ್ ಮತ್ತು ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಬರಲು ಕಾರಣವಾಗುತ್ತವೆ. ಇಂಥ ಕೀಟನಾಶಕಗಳು ಬೇರೆ ದೇಶಗಳಲ್ಲಿ ನಿಷೇಧಕ್ಕೆ ಒಳಗಾಗಿವೆ. ಈ ಬಗ್ಗೆ ಸೂಕ್ತವಾದ ಅಧ್ಯಯನಗಳೇ ನಡೆಯುತ್ತಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


