ಕನ್ನಡಿಗರಿಗೆ ಹೆಮ್ಮೆ ತಂದ ಸಿಎನ್ನಾರ್

Updated on: 

ನವದೆಹಲಿ: ಇದು ಅರ್ಹರಿಗೆ ಸಂದ ಗೌರವ. ದೇಶದ ಎರಡು ಅನರ್ಘ್ಯ ರತ್ನಗಳಿಗೆ ಕೇಂದ್ರ ಸರ್ಕಾರ ಶನಿವಾರ 'ಭಾರತ ರತ್ನ' ಗೌರವ ನೀಡಿದೆ.
ಖ್ಯಾತ ವಿಜ್ಞಾನಿ ಚಿಂತಾಮಣಿ ನಾಗೇಶ್ ರಾಮಚಂದ್ರ ರಾವ್ (79) (ಸಿ.ಎನ್.ಆರ್.ರಾವ್) ಮತ್ತು ಬರೋಬ್ಬರಿ 24 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಸಂಖ್ಯಾತ ಅಭಿಮಾನಿಗಳನ್ನು ರಂಜಿಸಿದ ಸಚಿನ್ ರಮೇಶ್ ತೆಂಡೂಲ್ಕರ್ (40) ಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ 'ಭಾರತ ರತ್ನ' ಪ್ರಕಟಿಸಲಾಗಿದೆ. ಮುಂದಿನ ವರ್ಷದ ಜನವರಿ 26ರಂದು ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು.
2009ರಲ್ಲಿ ಖ್ಯಾತ ಹಿಂದುಸ್ಥಾನಿ ಗಾಯಕ, ಕನ್ನಡಿಗ ದಿ.ಪಂಡಿತ್ ಭೀಮ್‌ಸೇನ್ ಜೋಶಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಇದಾದ ಬಳಿಕ ಸತತ ಎರಡನೇ ಬಾರಿಗೆ ಕನ್ನಡಿಗರೊಬ್ಬರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವ ದೊರಕಿದೆ.
ನಾಲ್ಕು ವರ್ಷಗಳ ಬಳಿಕ ಕೇಂದ್ರ ಸರ್ಕಾರ ಈ ಅತ್ಯುನ್ನತ ಪ್ರಶಸ್ತಿ ಪ್ರಕಟಿಸಿದೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ವೆಸ್ಟ್‌ಇಂಡಿಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದು, ಸಚಿನ್ ಅಧಿಕೃತವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ದಿನ ಸಂಜೆ ರಾಷ್ಟ್ರಪತಿ ಭವನದಿಂದ ಅಧಿಕೃತವಾಗಿ ಘೋಷಿಸಲಾಯಿತು.

2ನೇ ಕನ್ನಡಿಗ, 3ನೇ ವಿಜ್ಞಾನಿ:  ಸಾಲಿಡ್ ಸ್ಟೇಟ್ ಮತ್ತು ಮೆಟೀರಿಯಲ್ ಕೆಮೆಸ್ಟ್ರಿ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಧಿಕೃತವಾಗಿ ಮಾತನಾಡಬಲ್ಲ ವಿಜ್ಞಾನಿ, ಕನ್ನಡಿಗ ಪ್ರೊ.ಸಿ.ಎನ್.ಆರ್.ರಾವ್ ಅವರಿಗೆ ವಿಜ್ಞಾನ ಕ್ಷೇತ್ರದಲ್ಲಿನ ಸಾಧನೆಗಾಗಿ ಅತ್ಯುನ್ನತ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ದೇಶ ವಿದೇಶಗಳ 60 ಡಾಕ್ಟರೇಟ್ ಪಡೆದಿದ್ದಾರೆ. 1,500ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿರುವುದು ಅವರ ಹೆಗ್ಗಳಿಕೆಯಾಗಿದೆ.
ಸತತ ಎರಡನೇ ಬಾರಿಗೆ ಕರ್ನಾಟಕಕ್ಕೆ ದೇಶದ ಅತ್ಯುನ್ನತ ನಾಗರಿಕ ಗೌರವ ತಂದು ಕೊಟ್ಟ ಹೆಗ್ಗಳಿಕೆ ರಾವ್ ಅವರದ್ದು. ಅಂದ ಹಾಗೆ ಇಂಥ ಸಮ್ಮಾನಕ್ಕೆ ಪಾತ್ರರಾದ ಮೂರನೇ ವಿಜ್ಞಾನಿ ಅವರಾಗಿದ್ದಾರೆ. ಈ ಹಿಂದೆ ಮಾಜಿ ಡಾ.ಸಿ.ವಿ.ರಾಮನ್ ಮತ್ತು ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್‌ಕಲಾಂ  ಈ ಪ್ರಶಸ್ತಿಗೆ ಭಾಜನರಾಗಿದ್ದರು. ಸದ್ಯ
ಪ್ರೊ.ರಾವ್ ಪ್ರಧಾನಮಂತ್ರಿಗಳಿಗೆ ವಿಜ್ಞಾನ ವಿಚಾರದಲ್ಲಿ ಸಲಹೆ ನೀಡುವ ಅತ್ಯುನ್ನತ ಸಲಹಾ ಮಂಡಳಿಯ ಮುಖ್ಯಸ್ಥರಾಗಿದ್ದಾರೆ.
ವಿಶ್ವದ ಪ್ರಮುಖ ವಿಶ್ವವಿದ್ಯಾನಿಲಯಗಳಿಗೆ ಅವರು ಸಂದರ್ಶಕ ಪ್ರಾಧ್ಯಾಪಕರಾಗಿದ್ದಾರೆ. ಮಾತ್ರವಲ್ಲದೆ ಅವುಗಳಿಂದ ಗೌರವ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಅಮೆರಿಕದ ವಿಜ್ಞಾನ ಅಕಾಡೆಮಿ ಸೇರಿದಂತೆ ವಿಶ್ವದ ಪ್ರಮುಖ ವಿಜ್ಞಾನ ಅಕಾಡೆಮಿಗಳಲ್ಲಿ ವಿವಿಧ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡದಲ್ಲಿ ಹೆಚ್ಚು ವಿಜ್ಞಾನ ಬರಹಗಳು ಬರಬೇಕು ಎನ್ನುವುದು ಅವರ ಅಪೇಕ್ಷೆಯಾಗಿದೆ.

ಮೊದಲ ಕ್ರೀಡಾಪಟು: ಕ್ರಿಕೆಟ್ ದೇವರಿಗೆ 'ಭಾರತ ರತ್ನ' ನೀಡಬೇಕು ಎಂಬ ಅಸಂಖ್ಯಾತ ಅಭಿಮಾನಿಗಳ ಮೊರೆಗೆ ಕೇಂದ್ರ ಸರ್ಕಾರ ಕೊನೆಗೂ ಮನ್ನಣೆ ನೀಡಿದೆ.  24 ವರ್ಷಗಳ ಕಾಲ  ದಾಖಲೆಗಳ ದಾಖಲೆ ನಿರ್ಮಿಸಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಸಚಿನ್ ತೆಂಡೂಲ್ಕರ್ ವಿದಾಯ ಹೇಳಿದ ದಿನವೇ ಅವರಿಗೆ ಈ ಪ್ರಶಸ್ತಿ ಘೋಷಣೆಯಾಗಿದೆ. ವಿಶೇಷವೆಂದರೆ ದೇಶದ ಅತ್ಯುನ್ನತ ಪ್ರಶಸ್ತಿ ಪಡೆದ ಮೊದಲ ಕ್ರೀಡಾಪಟು ಹಾಗೂ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಮಾಸ್ಟರ್ ಬ್ಲಾಸ್ಟರ್ ತೆಂಡೂಲ್ಕರ್ ಭಾಜನರಾಗಿದ್ದಾರೆ. ಕಳೆದ ವರ್ಷವಷ್ಟೇ ಕ್ರಿಕೆಟ್ ಕ್ಷೇತ್ರದಲ್ಲಿ ಅವರ ಸಾಧನೆಯನ್ನು ಮನಗಂಡು ಕೇಂದ್ರ ಸರ್ಕಾರ ರಾಜ್ಯಸಭೆಗೆ ಅವರನ್ನು ನಾಮ ನಿರ್ದೇಶನಗೊಳಿಸಿತ್ತು. ಸಚಿನ್‌ಗೆ ಭಾರತ ರತ್ನ ನೀಡಲೇಬೇಕೆಂದು ಕಳೆದ ಹಲವು ವರ್ಷಗಳಿಂದ ಒತ್ತಡ ಹೆಚ್ಚುತ್ತಿತ್ತು. ಇದಕ್ಕಾಗಿಯೇ ಕಳೆದ ವರ್ಷ ಕೇಂದ್ರ ಸರ್ಕಾರ ಪ್ರಶಸ್ತಿ ನೀಡುವ ನಿಯಮದಲ್ಲಿ ಸಡಿಲಿಕೆ ಮಾಡಿತ್ತು. ಹಾಕಿಪಟು ಧ್ಯಾನ್‌ಚಂದ್ ಅವರಿಗೆ ಅತ್ಯುನ್ನತ ಪ್ರಶಸ್ತಿ ನೀಡಬೇಕೆಂಬ ಒತ್ತಡವೂ ಹೆಚ್ಚಿದ್ದರಿಂದ ತೆಂಡೂಲ್ಕರ್‌ಗೆ ಪ್ರಶಸ್ತಿ ನೀಡಬೇಕೇ ಬೇಡವೇ ಎಂಬ ಬಗ್ಗೆ ಜಿಜ್ಞಾಸೆ ಎದ್ದಿತ್ತು. 24 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನದಲ್ಲಿ ಕ್ರಿಕೆಟ್ ದೇವರು 200 ಟೆಸ್ಟ್, 463 ಏಕದಿನ, 310 ಪ್ರಥಮ ದರ್ಜೆ ಕ್ರಿಕೆಟ್, 551 ದೇಶೀಯ ಏಕದಿನ  ಕ್ರಿಕೆಟ್ ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್ ಪಂದ್ಯಗಳಲ್ಲಿ 15,921, ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ 18,426 ರನ್‌ಗಳನ್ನು ಗಳಿಸಿದ್ದಾರೆ.

ನನ್ನ ಜೀವನದ ಅತಿ ಖುಷಿಯ ಕ್ಷಣವಿದು. 'ಭಾರತ ರತ್ನ' ಪಟ್ಟಿಯಲ್ಲಿ ನನ್ನ ತಂದೆಯನ್ನು ನೋಡುತ್ತಿರುವುದು ಅತೀವ ಖುಷಿ ತಂದಿದೆ. ಭಾರತೀಯ ವಿಜ್ಞಾನ ಲೋಕ ಸಂಭ್ರಮಪಡುವ ದಿನವಿದು.
-ಪ್ರೊ.ಸಂಜಯ್ ರಾವ್, ಪ್ರೊ.ಸಿ.ಎನ್.ಆರ್.ರಾವ್ ಅವರ ಪುತ್ರ

ಈ ಪ್ರಶಸ್ತಿಯನ್ನು ಕನಸಿನಲ್ಲಿಯೂ ನೆನಸಿರಲಿಲ್ಲ. ಕನ್ನಡಿಗರು ಹಾಗೂ ದೇವರಿಗೆ ಧನ್ಯವಾದ ಹೇಳುತ್ತೇನೆ. ನನ್ನ ಜೀವನದ ಖುಷಿಯ ಕ್ಷಣವಿದು. ನೀವು 'ಭಾರತ ರತ್ನ' ಎಂದು ದೇಶ ಗುರುತಿಸಿರುವುದಕ್ಕಿಂತ ದೊಡ್ಡ ಗೌರವವಿಲ್ಲ.
-ಇಂದುಮತಿ ರಾವ್, ಪ್ರೊ.ಸಿ.ಎನ್.ಆರ್.ರಾವ್ ಅವರ ಪತ್ನಿ

ಖ್ಯಾತ ವಿಜ್ಞಾನಿ ಪ್ರೊ.ಸಿ.ಎನ್.ಆರ್.ರಾವ್ ಮತ್ತು ಖ್ಯಾತ ಕ್ರಿಕೆಟಿಗ ಸಚಿನ್ ತೆಂಡಲ್ಕೂರ್ ಅವರು ನಿಜವಾಗಿಯೂ ಭಾರತರತ್ನಗಳೇ. ಇಬ್ಬರಿಗೂ ಭಾರತರತ್ನ ಪ್ರಶಸ್ತಿ ದೊರೆತಿರುವುದು ಹರ್ಷ ಉಂಟು ಮಾಡಿದೆ. ಇಬ್ಬರಿಗೂ ಪ್ರಶಸ್ತಿ ಘೋಷಿಸುವ ಮೂಲಕ ದೇಶ ತನ್ನನ್ನು ತಾನೇ ಗೌರವಿಸಿಕೊಂಡಂತೆ ಆಗಿದೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ

ಭಾರತರತ್ನ ಗೌರವಕ್ಕೆ ಪಾತ್ರರಾಗಿರುವ ವೈಯಕ್ತಿಕವಾಗಿ ಮತ್ತು ನಾಡಿನ ಜನರ ಪರವಾಗಿ ಖ್ಯಾತ ವಿಜ್ಞಾನಿ ಪ್ರೊ.ಸಿ.ಎನ್.ಆರ್.ರಾವ್ ಮತ್ತು ಖ್ಯಾತ ಕ್ರಿಕೆಟಿಗ ಸಚಿನ್ ತೆಂಡಲ್ಕೂರ್ ಅವರನ್ನು ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ. ಇಬ್ಬರೂ ಅವರವರ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿದ್ದಾರೆ.
-ಎಸ್.ಎಂ.ಕೃಷ್ಣ, ಮಾಜಿ ಮುಖ್ಯಮಂತ್ರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com