ಸಾರ್ವಜನಿಕವಾಗಿ ಮಾತನಾಡುವಾಗ ಪ್ರಜ್ಞೆ ಇರಲಿ: ಪ್ರಧಾನಿ ಮೋದಿ

ಬಿಜೆಪಿ ಮುಖಂಡರು ಸಾರ್ವಜನಿಕವಾಗಿ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
Updated on: 

ನವದೆಹಲಿ: ಬಿಜೆಪಿ ಮುಖಂಡರು ಸಾರ್ವಜನಿಕವಾಗಿ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನವದೆಹಲಿಯಲ್ಲಿ ಸಾರ್ವಜನಿಕ ಸಮಾರಂಭವೊಂದರಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಅವರ ಪ್ರಕರಣದ ಹಿನ್ನಲೆಯಲ್ಲಿ ಎಲ್ಲ ಬಿಜೆಪಿ ಸಚಿವರು, ಸಂಸದರು ಮತ್ತು ಮುಖಂಡರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಎಚ್ಚರಿಕೆ ನೀಡಿದ್ದಾರೆ. 'ಜನಪ್ರತಿನಿಧಿಗಳು ಸಾರ್ವಜನಿಕವಾಗಿ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು, ಧರ್ಮ ಅಥವಾ ವೈಯುಕ್ತಿಕ ನಿಂದನೆಗಳನ್ನು ತಾವು ಸಹಿಸುವುದಿಲ್ಲ' ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಪರೋಕ್ಷವಾಗಿ ಎಲ್ಲ ಮುಖಂಡರಿಗೆ ಎಚ್ಚರಿಕೆ ನೀಡಿದ್ದಾರೆ.

ದೆಹಲಿ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ನವದೆಹಲಿಯಲ್ಲಿ ಇಂದು ಸಂಸತ್‌ನ ಉಭಯ ಸದನಗಳ ಬಿಜೆಪಿಯ ಎಲ್ಲ 325 ಸಂಸದರೊಂದಿಗೆ ಸಭೆ ನಡೆಸಲಾಗಿದ್ದು, ಎಚ್ಚರಿಕೆ ತಪ್ಪದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಸಂಸದರಿಗೆ ಕಿವಿಮಾತು ಹೇಳಿದ್ದಾರೆ. ಅಲ್ಲದೆ ಸಭೆಯಲ್ಲಿ ದೆಹಲಿ ವಿಧಾನಸಭೆ ಚುನಾವಣೆ ಕುರಿತು ಪಕ್ಷ ಕೈಗೊಳ್ಳಬೇಕಾದ ನಿರ್ಣಯಗಳ ಕುರಿತಾಗಿಯೂ ಚರ್ಚಿಸಲಾಗಿದ್ದು, ಪ್ರಮುಖವಾಗಿ ಆಮ್ ಆದ್ಮಿ ಪಕ್ಷವನ್ನು ಎದುರಿಸುವ ಕುರಿತು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ದೆಹಲಿ ವಿಧಾನಸಭೆಯ ಮೇಲೆ ಕಣ್ಣಿಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಹೀಗಾಗಿ ಚುನಾವಣೆ ವೇಳೆ ಬಿಜೆಪಿ ಪಕ್ಷ ಸುಮಾರು 2000 ಕ್ಕೂ ಅಧಿಕ ಬಹಿರಂಗ ಪ್ರಚಾರ ಕಾರ್ಯಕ್ರಮಗಳನ್ನು ನಡೆಸುವ ಉದ್ದೇಶ ಹೊಂದಿದೆ. ಹೀಗಾಗಿಯೇ ಸಂಸತ್‌ನ ಉಭಯ ಸದನಗಳ ಎಲ್ಲ 325 ಬಿಜೆಪಿ ಸಂಸದರೊಂದಿಗೆ ಚರ್ಚೆ ನಡೆಸಲಾಗಿದ್ದು, ಪ್ರಚಾರ ಕಾರ್ಯಕ್ರಮದ ಕುರಿತು ಯೋಜನೆ ಸಿದ್ದಪಡಿಸಲಾಗುತ್ತಿದೆ.

ಒಟ್ಟಾರೆ ದೆಹಲಿಯಲ್ಲಿ ನಡೆದ ಕಳೆದ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಗಳಿಸಿತ್ತಾದರೂ, ಸರ್ಕಾರ ರಚಿಸುವಷ್ಟು ಬಹುಮತ ಅದಕ್ಕೆ ಲಭಿಸಿರಲಿಲ್ಲ. ಹೀಗಾಗಿ ಆಮ್ ಆದ್ಮಿ ಪಕ್ಷ ಕಾಂಗ್ರೆಸ್ ಪಕ್ಷದ ಬಾಹ್ಯ ಬೆಂಬಲದೊಂದಿಗೆ ಸರ್ಕಾರ ರಚನೆ ಮಾಡಿತ್ತಲ್ಲದೇ, ಕೇವಲ 48 ದಿನದಲ್ಲೇ ಸರ್ಕಾರವನ್ನು ವಿಸರ್ಜನೆ ಮಾಡಿತ್ತು. ಬಳಿಕ ದೆಹಲಿಯಲ್ಲಿ ರಾಷ್ಟ್ರಪತಿ ಆಡಳಿತ ಹೇರಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com