

ಬಾಗ್ದಾದ್: ಇಸಿಸ್‌ನಿಂದ ಶಿರಚ್ಛೇದಕ್ಕೊಳಗಾದ ಅಮೆರಿಕದ ಪತ್ರಕರ್ತ ಜೇಮ್ಸ್ ಫಾಲೆಯನ್ನು ಎಲ್ಲಿ ಇರಿಸಲಾಗಿತ್ತೋ ಅದೇ ಹೋಟೆಲ್‌ನಲ್ಲಿ ನನಗೂ ತಂಗಲು ಅವಕಾಶ ಮಾಡಿಕೊಡಲಾಗಿತ್ತು. ಆದರೆ ಆ ಪತ್ರಕರ್ತನಿಗೆ ಬಂದ ಸಾವು ನನಗೆ ಬರದಿರಲಿ ಎಂಬುದೇ ನನ್ನ ಪ್ರಾರ್ಥನೆಯಾಗಿತ್ತು. ಇಸಿಸ್ ಸಂಘಟನೆಯು ಪಾಶ್ಚಿಮಾತ್ಯ ರಾಷ್ಟ್ರಗಳು ಯೋಚಿಸಿರುವುದಕ್ಕಿಂತ ಅತ್ಯಂತ ಬಲಿಷ್ಠ ಹಾಗೂ ಅತಿ ಹೆಚ್ಚು ಅಪಾಯಕಾರಿ. ಇದರ ವ್ಯಾಪ್ತಿಯನ್ನು ಯಾರಿಗೂ ಅಂದಾಜಿಸಲಾಗದು.
ಇದು ಮೊತ್ತಮೊದಲ ಬಾರಿಗೆ ಇಸಿಸ್‌ನೊಳಗೆ 10 ದಿನ ಇದ್ದುಕೊಂಡು ಅಲ್ಲಿನ ಸ್ಥಿತಿಗತಿಗಳನ್ನು ಅರ್ಥೈಸಿ ಕೊಂಡು ವಾಪಸಾಗಿರುವ 74 ವರ್ಷದ ಜರ್ಮನ್ ಪತ್ರಕರ್ತ ಜರ್ಗನ್ ಟೋಡೆನ್ ಹಾಫರ್‌ರ ಮಾತಿದು.
ಸಿರಿಯಾ ಮತ್ತು ಇರಾಕ್‌ನಲ್ಲಿರುವ ರಕ್ತ ಪಿಪಾಸು ಇಸಿಸ್ ಉಗ್ರರು ಇದೇ ಮೊದಲ ಬಾರಿಗೆ ಪಾಶ್ಚಿಮಾತ್ಯ ಪತ್ರರ್ಕರೊಬ್ಬರಿಗೆ ತನ್ನ ಸ್ಥಿತಿಗತಿಗಳನ್ನು ಅರಿಯಲು ಅವಕಾಶ ಕಲ್ಪಿಸಿದ್ದರು. ಅದನ್ನು ಸದುಪಯೋಗ ಪಡಿಸಿಕೊಂಡ ಜರ್ಗನ್ 10 ದಿನ ಇಸಿಸ್ ಹಿಡಿತದಲ್ಲಿರುವ ಪ್ರದೇಶದಲ್ಲಿದ್ದು ವಾಪಸಾಗಿದ್ದಾರೆ. ಅಲ್ಲಿನ ಪರಿಸ್ಥಿತಿ, ಕರಾಳತೆ, ಉಗ್ರರ ಉದ್ದೇಶಗಳ ಬಗ್ಗೆ ತಿಳಿದುಕೊಂಡು ಆ ಬಗ್ಗೆ ಪುಸ್ತಕವೊಂದನ್ನು ಬರೆಯಲು ಮುಂದಾಗಿದ್ದಾರೆ.
ಅಷ್ಟು ಸುಲಭವಲ್ಲ: ಇಸಿಸ್‌ನ ನಾಯಕರೊಂದಿಗೆ ಹಲವು ತಿಂಗಳುಗಳ ಕಾಲ ಮಾತುಕತೆ ನಡೆಸಿ, ಅಳರ ಮನವೊಲಿಸಿ ಮೆಸೂಲ್‌ಗೆ ತೆರಳುವ ಅವಕಾಶವನ್ನು ಜರ್ಗನ್ ಗಿಟ್ಟಿಸಿಕೊಂಡಿದ್ದರು. ನಂತರ ಅಲ್ಲಿಗೆ ತೆರಳಿದ ಅವರು 10 ದಿನ ಅಲ್ಲೇ ಕಳೆದರು. ಪ್ರತಿ ದಿನವೂ ವಿಶ್ವದ ಮೂಲೆ ಮೂಲೆಗಳಿಂದಲೂ ಯುವಕರು ಇಸಿಸ್ ಸೇರಲೆಂದು ಬರುತ್ತಾರೆ. ಇದನ್ನು ನನಗೆ ನಂಬಲಿಕ್ಕೇ ಸಾಧ್ಯವಾಗಲಿಲ್ಲ ಎನ್ನುತ್ತಾರೆ ಜರ್ಗನ್.
ತಾವೇ ಬಾಂಬ್ ಹಾಕಿ ಧ್ವಂಸ ಮಾಡಿದ ಮನೆಗಳೊಳಗೆ ಇಸಿಸ್ ನಾಯಕರು ಮಲಗುತ್ತಾರೆ. ಮೊಸೂಲ್‌ನಲ್ಲಿ ಅವರ ಸಂಖ್ಯೆ 5 ಸಾವಿರದಷ್ಟಿದೆ. ಆದರೆ ಅವರೆಲ್ಲರೂ ಇಡೀ ಪಟ್ಟಣದಲ್ಲಿ ಚದುರಿ ಹೋಗಿರುತ್ತಾರೆ. ಹಾಗಾಗಿ ಅಮೆರಿಕದ ವೈಮಾನಿಕ ದಾಳಿ ಎಲ್ಲ ಉಗ್ರರನ್ನು ನಾಶ ಪಡಿಸಲು ಸಾಧ್ಯವಿಲ್ಲ. ಅಮೆರಿಕವು ಪ್ರತಿ ಬಾರಿ ಬಾಂಬ್ ಹಾಕಿದಾಗಲೂ, ಉಗ್ರರ ಸಂಖ್ಯೆ ಹೆಚ್ಚುತ್ತಾ ಹೋಗುತ್ತದೆ ಎನ್ನುವುದು ಜರ್ಗನ್‌ರ ಅಭಿಪ್ರಾಯ.
ಜಗತ್ತನ್ನೇ ಆಕ್ರಮಿಸಿಕೊಳ್ಳುವ ಗುರಿ
ಇಸಿಸ್ ಉಗ್ರರು ಅವರದ್ದೇ ಆದ ಒಂದು ರಾಜ್ಯ ಸ್ಥಾಪಿಸಲು ಬಹಳಷ್ಟು ಶ್ರಮಿಸಿದ್ದಾರೆ. ಸಾಮಾಜಿಕ ಕಲ್ಯಾಣ ಸಂಸ್ಥೆ, ಶಾಲಾ ವ್ಯವಸ್ಥೆಗಳನ್ನೂ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಯೋಜನೆಯೂ ಅವರಿಗಿದೆ ಎಂದು ತಿಳಿದು ನನಗೆ ಅಚ್ಚರಿಯಾಯಿತು. ಅವರ ಅಪಾಯಕಾರಿ ಉದ್ದೇಶಗಳಲ್ಲಿ ಒಂದೆಂದರೆ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪುವ ಧರ್ಮಕ್ಕೆ ಬದುಕುವು ಹಕ್ಕಿಲ್ಲ ಎನ್ನುವ ಇಸಿಸ್ ವಾದ. ಇಡೀ ಜಗತ್ತನ್ನೇ ಆಕ್ರಮಿಸಿಕೊಳ್ಳಬೇಕು ಎನ್ನುವುದು ಇಸಿಸ್ ಗುರಿ. ಕುರಾನ್ ಬಗ್ಗೆ ಇಸಿಸ್ ಏನು ಹೇಳುತ್ತದೆಯೋ ಅದನ್ನು ಒಪ್ಪದವರನ್ನು ಕೊಲ್ಲಲಾಗುತ್ತದೆ. ಬೇರೆ ಧರ್ಮಗಳಿಗೆ ಅವಕಾಶವೇ ಇಲ್ಲ. ಮಾನವ ಇತಿಹಾಸದಲ್ಲೇ ಅತಿದೊಡ್ಡ ಧಾರ್ಮಿಕ ವಿನಾಶದ ಕಾರ್ಯತಂತ್ರ ಇದಾಗಿದೆ ಎನ್ನುತ್ತಾರೆ ಪತ್ರಕರ್ತ ಜರ್ಗನ್. ಜರ್ಗನ್ ಅವರು ತಮ್ಮ 10 ದಿನಗಳ ಮೊಸೂಲ್ ವಾಸದ ಬಗ್ಗೆ ಸದ್ಯದಲ್ಲೇ 10 ಡೇಸ್ ಇನ್ ದಿ ಇಸ್ಲಾಮಿಕ್ ಸ್ಟೇಟ್ ಎಂಬ ಪುಸ್ತಕ ಬರೆಯಲಿದ್ದಾರೆ.
ಇಸಿಸ್‌ಗೆ ಹಿನ್ನಡೆ
ಮೊಸೂಲ್‌ನತ್ತ ಕುರ್ದಿಷ್
ಇರಾಕ್‌ನಲ್ಲಿ ಇಸಿಸ್ ಉಗ್ರರಿಗೆ ಭಾರಿ ಹಿನ್ನಡೆಯಾಗಿದೆ. ಇಸಿಸ್ ವಶದಲ್ಲಿದ್ದ ಸುಮಾರು 20 ಗ್ರಾಮಗಳನ್ನು ಮರಳಿ ತಮ್ಮ ವಶಕ್ಕೆ ಪಡೆದುಕೊಳ್ಳುವಲ್ಲಿ ಕುರ್ದಿಷ್ ಹೋರಾಟಗಾರರು ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲ, ಇಸಿಸ್ ಹಿಡಿತದಲ್ಲಿರುವ ಮೊಸೂಲ್‌ನತ್ತ ಮುನ್ನುಗ್ಗತೊಡಗಿದ್ದಾರೆ. ಈ ಬೆಳವಣಿಗೆಯು ಇಸಿಸ್‌ನ ಸ್ವಘೋಷಿತ ನಕ್ಷೆಯನ್ನೇ ಬದಲಾಯಿಸಿದೆ. ಇದೇ ವೇಳೆ, ಭಾನುವಾರ ಇರಾಕ್‌ನಲ್ಲಿ 13 ಕಡೆ ಹಾಗೂ ಸಿರಿಯಾದಲ್ಲಿ 3 ಕಡೆ ಇಸಿಸ್ ಉಗ್ರರನ್ನು ಗುರಿಯಾಗಿಟ್ಟುಕೊಂಡು ಅಮೆರಿಕ ವೈಮಾನಿಕ ದಾಳಿ ನಡೆಸಿದೆ.