

ಇಂಪಾಲ: ಎಂಟು ವರ್ಷದ ಬಾಲಕಿ ಮೇಲೆ 24 ವರ್ಷದ ಯುವಕನೊಬ್ಬ ಅತ್ಯಾಚಾರವೆಸಗಿ ಹತ್ಯೆ ಮಾಡಿರುವ ಘಟನೆ ಮಣಿಪುರದ ಇಂಪಾಲ ಜಿಲ್ಲೆಯಲ್ಲಿ ನಡೆದಿದೆ.
ಭತ್ತ ವ್ಯವಸಾಯದಲ್ಲಿ ತೊಡಗಿದ್ದ ತಾಯಿಗೆ ಟೀ ಕೊಟ್ಟು ಬರುತ್ತಿದ್ದ ಬಾಲಕಿಯನ್ನು ಎಳೆದೊಯ್ದ ಸ್ಥಳೀಯ ಚಿಂಗಂಗ್‌ಬಮ್ ಸಮ್ಜಾಯ್(24) ಎಂಬಾತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಹತ್ಯೆಗೈದಿದ್ದಾನೆ.
ಹಲವು ಘಂಟೆಗಳಾದರು ಬಾಲಕಿ ಮನೆಗೆ ಬಾರದಿರುವುದನ್ನು ಗಮನಿಸಿದ ಮನೆಯವರು ಬಾಲಕಿಯನ್ನು ಹುಡುಕಲು ಪ್ರಾರಂಭಿಸಿದಾಗ, ಬಾಲಕಿಯ ದೇಹ ದೊರಕಿದೆ. ಈ ವೇಳೆ ನೆರೆಯ ಯುವಕರನ್ನು ವಿಚಾರಿಸಿದಾಗ ಚಿಂಗಂಗ್‌ಬಮ್ ಸಮ್ಜಾಯ್ ಮೇಲೆ ಅನುಮಾನ ಬಂದಿದೆ. ಆರೋಪಿಯನ್ನು ವಿಚಾರಿಸಿದಾಗ ವಿಷಯ ಬಾಯಿಬಿಟ್ಟಿದ್ದಾನೆ.
ಸಿಟ್ಟಿಗೆದ್ದ ಬಾಲಕಿಯ ಮನೆಯವರು ಹಾಗೂ ಊರಿನವರು ಆರೋಪಿಯನ್ನು ಥಳಿಸಿದ್ದಾರೆ. ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಸ್ಥಳೀಯ ವೈದ್ಯಕೀಯ ವಿಜ್ಞಾನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ನೀಡಿದ ವೈದ್ಯರು ಆರೋಪಿಯ ಸ್ಥಿತಿ ಗಂಭೀರವಾಗಿರುವುದಾಗಿ ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ತನಿಖೆ ಕೈಗೊಂಡಿದ್ದಾರೆ.