

ನವದೆಹಲಿ: 'ದೇಶ ಕಟ್ಟಲು ಅಮೂಲ್ಯ ಸಲಹೆಗಳಿದ್ದಲ್ಲಿ ಅದನ್ನು ನೇರವಾಗಿ ನನಗೆ ಪತ್ರದ ಮುಖೇನ ತಿಳಿಸಿ' ಎಂದು ಪ್ರಧಾನಿ ಮೋದಿ ಕರೆ ಕೊಟ್ಟಿದ್ದು ಅಗಾಧ ಪರಿಣಾಮ ಬೀರಿದೆ.
ವಾಟ್ಸಾಪ್, ಫೇಸ್‌ಬುಕ್ ಗದ್ದಲದ ನಡುವೆ ಪತ್ರ ವ್ಯವಹಾರ ಮರೆತೇ ಬಿಟ್ಟಿದ್ದ ಜನ ಈಗ ಲೇಖನಿ ಹಿಡಿದು ಕೂರುತ್ತಿದ್ದಾರೆ.
ಮೋದಿ ಪ್ರಧಾನಿ ಅವರಿಗೆ ಪತ್ರ ಬರೆಯುತ್ತಿದ್ದಾರೆ. ದೇಶದ ಮೂಲೆಮೂಲೆಗಳಿಂದ ಪತ್ರಗಳ ಮಹಾಪೂರವೇ ಪ್ರಧಾನಿ ವಿಳಾಸಕ್ಕೆ ಹರಿದು ಬರುತ್ತಿದೆ. ದಿನವೊಂದಕ್ಕೆ ಸುಮಾರು 5 ಸಾವಿರಕ್ಕೂ ಹೆಚ್ಚು ಪತ್ರಗಳು ಇಲ್ಲಿನ ಪ್ರಧಾನ ಅಂಚೆಕಚೇರಿಗೆ ಬಂದು ತಲುಪುತ್ತಿವೆ ಎಂದರೆ ನೀವಿದನ್ನು ನಂಬಲೇಬೇಕು!
ಸ್ವಾಗತಾರ್ಹ ಬೆಳವಣಿಗೆ: ಮೊಬೈಲ್‌ಗಳು ಬಂದ ಮೇಲಂತು ಪತ್ರ ವಿನಿಮಯ ಎಂಬ ಸಾಂಪ್ರದಾಯಿಕ ಸಂದೇಶ ರವಾನಿಸುವ ಸಂಸ್ಕೃತಿಗೆ ಬಹುತೇಕರು ಗುಡ್ ಬೈ ಹೇಳಿದ್ದರು.
ಅದರಲ್ಲೂ ಸ್ಮಾರ್ಟ್ ಫೋನ್ ಬಳಕೆ ಜನಪ್ರಿಯವಾಗತೊಡಗಿದ ಮೇಲಂತೂ ಕಾಗದ ಬರೆಯುವ ಹವ್ಯಾಸಕ್ಕೆ ಪೂರ್ಣ ವಿರಾಮ ಬಿದ್ದಿತ್ತು. ಆದರೆ, ಮೋದಿ ಅವರಿಂದಾಗಿ ಆ ಸಂಸ್ಕೃತಿ ಮತ್ತೊಮ್ಮೆ ಬೆಳೆಯುತ್ತಿದೆ.
ಪತ್ರ ವ್ಯವಹಾರಕ್ಕೆ ಪ್ರಧಾನಿ ಅವರಿಂದಾಗಿ ಸ್ಫೂರ್ತಿ ಸಿಕ್ಕಿದಂತಾಗಿದೆ. ಅತ್ತ, ರೇಡಿಯೋ ಮೂಲಕ ಮನ್ ಕೀ ಬಾತ್ ಹಂಚಿಕೊಳ್ಳುತ್ತಾ ಆಕಾಶವಾಣಿಗೆ ಹೊಸ ಮೆರುಗು ತಂದ ಪ್ರಧಾನಿಯವರು, ಈಗ ಅಂಚೆ ಇಲಾಖೆಗೂ ಹೊಸ ಸ್ಪರ್ಶ ನೀಡಿದ್ದಾರೆ.