

ಬೆಂಗಳೂರು: ಮೇಕೆ ದಾಟುವಿನಲ್ಲಿ ನೀರು ಸಂಗ್ರಹಿಸುವ ಯೋಜನೆ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಬದ್ಧವಾಗಿದ್ದು, ಸುಮಾರು 48 ಟಿಎಂಸಿ ನೀರು ಸಂಗ್ರಹಿಸುವ ಯೋಜನೆಗೆ ಟೆಂಡರ್ ಆಹ್ವಾನಿಸಲಾಗಿದೆ ಎಂದು ಜಲ ಸಂಪನ್ಮೂಲ ಖಾತೆ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಕಾವೇರಿ ನೀರು ಬಳಕೆ ಸಂಬಂಧ ರಾಜ್ಯದ ಪರ ವಾದ ನಡೆಸುತ್ತಿರುವ ಹಿರಿಯ ವಕೀಲ ನಾರಿಮನ್ ಅವರ ಸಲಹೆ ಪಡೆಯಲಾಗಿದ್ದು, ಅವರು ಈ ಯೋಜನೆ ಅನುಷ್ಠಾನಗೊಳಿಸಲು ಯಾವುದೇ ತೊಂದರೆ ಇಲ್ಲ. ಮುಂದುವರಿಸಿ ಎಂದು ಸಲಹೆ ನೀಡಿದ್ದಾರೆ. ಹೀಗಾಗಿ, ನಾವು ಯೋಜನೆ ಜಾರಿಗೆ ಮುಂದಾಗಿದ್ದು ಜಾಗತಿಕ ಮಟ್ಟದ ಟೆಂಡರ್ ಆಹ್ವಾನಿಸಲಾಗಿದೆ ಎಂದು ಸುದ್ದಿಗಾರರಿಗೆ ಮಂಗಳವಾರ ಹೇಳಿದರು.
ಮೇಕೆದಾಟುವಿನಲ್ಲಿ ನೀರು ಸಂಗ್ರಹಕ್ಕೆ 22 ಪ್ರದೇಶಗಳನ್ನು ಗುರುತಿಸಲಾಗಿದೆ. ಇದರಲ್ಲಿ ಒಂದು ಪ್ರದೇಶದಲ್ಲಿ ಸಂಗ್ರಹಾಗಾರ ನಿರ್ಮಾಣ ಮಾಡಿ ದರೂ 25ರಿಂದ 48 ಟಿಎಂಸಿ ನೀರು ಸಂಗ್ರಹವಾಗುತ್ತದೆ. ಯಾವ ಪ್ರದೇಶದಲ್ಲಿ ಸಂಗ್ರಹವಾಗ ಬೇಕು ಎಂಬ ಬಗ್ಗೆ ಸಮಗ್ರ ಯೋಜನಾ ವರದಿಯಲ್ಲಿ ಎಲ್ಲವೂ ನಿರ್ಧಾರವಾಗುತ್ತದೆ. ಜಾಗತಿಕ ಮಟ್ಟದ ಟೆಂಡರ್ ಆಹ್ವಾನ ಮಾಡಿರುವುದರಿಂದ ಅತ್ಯುನ್ನತ ತಂತ್ರಜ್ಞಾನ ಅಳವಡಿಸಿಕೊಂಡು ಕಾಮಗಾರಿ ನಡೆಸಲಾಗುತ್ತದೆ. ಸುಮಾರು 2500 ಎಕರೆ ಅರಣ್ಯ ಮುಳುಗಡೆಯಾಗಲಿದ್ದು, ಇದಕ್ಕಾಗಿ ಎಳ್ಲ ರೀತಿಯ ಅನುಮತಿಗೆ ಅಗತ್ಯ ಪ್ರಕ್ರಿಯೆ ಆರಂಭಿಸಲಾಗುತ್ತದೆ.
ಕುಡಿಯುವ ನೀರಿನ ಯೋಜನೆಯಾಗಿರುವುದರಿಂದ ಇದಕ್ಕೆ ಶೀಘ್ರವಾಗಿ ಅನುಮತಿ ಸಿಗುವ ಸಾಧ್ಯತೆ ಇದೆ ಎಂದು ವಿವರಿಸಿದರು.
ಎತ್ತಿನಹೊಳೆಯಿಂದ ಹೆಚ್ಚುವರಿ ನೀರು: ಎತ್ತಿನಹೊಳೆ ಯೋಜನೆಯಿಂದ ಈ ಹಿಂದೆ ನಿರೀಕ್ಷಿಸಲಾಗಿದ್ದ 22 ಟಿಎಂಸಿ ನೀರಿನ ಜತೆ ಹೆಚ್ಚುವರಿಯಾಗಿ ಸುಮಾರು 6 ಟಿಎಂಸಿ ನೀರು ಲಭ್ಯವಾಗಲಿದೆ. ಒಟ್ಟಾರೆ 28 ರಿಂದ 30 ಟಿಎಂಸಿ ನೀರು ಸಿಗಲಿದೆ. ಇದನ್ನು ಸಂಗ್ರಹಿಸುವ ಯೋಜನೆಯನ್ನೂ ಮಾಡಲಾಗಿದ್ದು, ಮಳೆಗಾಲವಲ್ಲದೆ ಇನ್ನೂ ಎರಡು ತಿಂಗಳು ನೀರು ಲಭ್ಯವಾಗಲಿದೆ ಎಂದರು.
ಎತ್ತಿನಹೊಳೆ ಯೋಜನೆಯಿಂದ ಲಭ್ಯವಾಗುವ ಹೆಚ್ಚುವರಿ ನೀರಿನಲ್ಲಿ ಶೇ.50 ರಷ್ಟು ನೀರನ್ನು ಕೋಲಾರ ಹಾಗೂ ಚಿಕ್ಕಬಳ್ಳಾಪುರಕ್ಕೆ ನೀಡಲಾಗುತ್ತದೆ. ಉಳಿದ್ದನ್ನು ಬೆಂಗಳೂರು ಗ್ರಾಮಾಂತರಕ್ಕೆ ನೀಡಲು ಚಿಂತಿಸಲಾಗಿದೆ ಎಂದರು. ಆಂಧ್ರ ವಿಭಜನೆಯಾಗಿರುವುದರಿಂದ ಆ ಎರಡು ರಾಜ್ಯಗಳೇ ಕೃಷ್ಣಾನದಿ ನೀರು ಹಂಚಿಕೆ ಬಗ್ಗೆ ತೀರ್ಮಾನ ಕೈಗೊಳ್ಳಬೇಕು. ನ್ಯಾಯಾಧಿಕರಣದ ತೀರ್ಪನ್ನು ರದ್ದುಗೊಳಿಸಬೇಕು ಎಂದು ವಾದಿಸುವುದು ಸರಿಯಲ್ಲ ಎಂದು ಅವರು ಹೇಳಿದರು.