

ನವದೆಹಲಿ: ಕದನ ವಿರಾಮ ಉಲ್ಲಂಘನೆ ಹಿನ್ನೆಲೆಯಲ್ಲಿ ಹಳಸಿದ್ದ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಸುಧಾರಣೆಗೆ ಸಾರ್ಕ್ ಶೃಂಗ ವೇದಿಕೆ ಒದಗಿಸಿಕೊಡುವ ನಿರೀಕ್ಷೆ ಇದೆ.
ನೇಪಾಳದಲ್ಲಿನ ನ.26, 27ರಂದು ನಡೆಯಲಿರುವ ಸಾರ್ಕ್ ರಾಷ್ಟ್ರಗಳ ಶೃಂಗದಲ್ಲಿ ಪಾಕ್ ಪ್ರಧಾನಿ ನವಾಜ್ ಷರೀಫ್ ಹಾಗೂ ನರೇಂದ್ರ ಮೋದಿ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯುವ ಸಾಧ್ಯತೆ ಇದೆ.
ದಕ್ಷಿಣ ಏಷ್ಯಾ ರಾಷ್ಟ್ರಗಳೊಂದಿಗೆ ಅರ್ಥಪೂರ್ಣ ಮಾತುಕತೆಗೆ ಮೋದಿ ಉತ್ಸುಕರಾಗಿದ್ದಾರೆ. ಸಾರ್ಕ ಸದಸ್ಯ ರಾಷ್ಟ್ರಗಳ ನಾಯಕರ ಜತೆಗಿನ ಭೇಟಿಗೆ ಸಂಬಂಧಿಸಿದ ವಿವಿರಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಭಾರತದ ಉದ್ದೇಶ ಎಲ್ಲ ರಾಷ್ಟ್ರಗಳೊಂದಿಗೆ ಅರ್ಥಪೂರ್ಣ ಮಾತುಕತೆ ನಡೆಸುವುದಾಗಿದೆ. ಇಂಥ ಪರಿಸ್ಥಿತಿಯಲ್ಲಿ ಪಾಕ್ ಜತೆಗೆ ಮಾತುಕತೆ ನಡೆದರೂ ಅಚ್ಚರಿ ಇಲ್ಲ ಎನ್ನಲಾಗುತ್ತದೆ.
ಮೋದಿ-ಷರೀಫ್ ಪರಸ್ಪರ ಮಾತುಕತೆ ನಡೆಸಲಿದ್ದಾರೆಯೇ ಎನ್ನುವ ಪ್ರಶ್ನೆಗೆ ಭಾರತದ ವಿದೇಶಾಂಗ ಇಲಾಖೆ ವಕ್ತಾರ ಸೈಯದ್ ಅಕ್ಬರುದ್ದೀನ್ ಅವರೂ ನೇರ ಉತ್ತರ ನೀಡಿಲ್ಲ. ಆದರೆ, ಅವರು ಇಂಥ ಸಾಧ್ಯತೆಯನ್ನು ತಳ್ಳಿಹಾಕಿಯೂ ಇಲ್ಲ. ಇದು ಎರಡೂ ನಾಯಕರ ಮಾತುಕತೆ ಊಹಾಪೋಹಕ್ಕೆ ಇನ್ನಷ್ಟು ಬಲ ನೀಡಿದೆ.
ಭಾರತವು ಪಾಕ್ ಜತೆಗೆ ಶಾಂತಿಯುವ ಸಂಬಂಧ ಭಾರತ ಬಯಸುತ್ತದೆ. ಕಾಶ್ಮೀರ ವಿವಾದವನ್ನು ಒಪ್ಪಿತ ನಿಯಮಾವಳಿಯಂತೆ ಪರಿಹರಿಸಿಕೊಳ್ಳಲು ಸಿದ್ಧವಿದೆ ಎಂದು ಅಕ್ಬರುದ್ದೀನ್ ತಿಳಿಸಿದ್ದಾರೆ. ಆದರೆ, ಷರೀಫ್ ಉತ್ಸುಕರಾಗಿದ್ದಾರೆಯೇ ಎನ್ನುವ ವಿಚಾರ ಇನ್ನೂ ಖಚಿತವಾಗಿಲ್ಲ.