

ನವದೆಹಲಿ: ಪದ್ಮ ಪ್ರಶಸ್ತಿ ನೀಡುವುದನ್ನು ನಿಲ್ಲಿಸಲಿ ಎಂದು ಜೆಡಿಯು ಅಧ್ಯಕ್ಷ ಶರದ್ ಯಾದವ್ ಸೋಮವಾರ ಹೇಳಿದ್ದಾರೆ.
ಯೋಗ್ಯತೆ ಇಲ್ಲದವರಿಗೆ, ಅಪ್ರಾಮಾಣಿಕವಾಗಿ ಪದ್ಮ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಎರಡು ದಿನಗಳ ಹಿಂದೆ ದೂರಿದ್ದರು. ಇದರ ಬೆನ್ನಲ್ಲೇ ಇಂದು ಪದ್ಮ ಪ್ರಶಸ್ತಿ ನೀಡುವುದೇ ನಿಲ್ಲಬೇಕು ಎಂದು ಆಗ್ರಹಿಸಿ ವಿವಾದಕ್ಕೀಡಾಗಿದ್ದಾರೆ.
ಸರ್ಕಾರಕ್ಕೆ ಜೊತೆ ಉತ್ತಮ ಸಂಬಂಧ ಹೊಂದಿರುವಂತವರಿಗೆ ಪದ್ಮ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿ ಆಯ್ಕೆಯಲ್ಲಿ ಅಕ್ರಮ ನಡೆಯುತ್ತಿದೆ. ಅಲ್ಲದೇ, ಅರ್ಹರಲ್ಲದವರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಇದರಲ್ಲೂ ರಾಜಕೀಯ ಮಾಡಲಾಗುತ್ತಿದೆ. ಹಾಗಾಗಿ, ಪದ್ಮ ಪ್ರಶಸ್ತಿ ಕೊಡುವುದೇ ನಿಲ್ಲಬೇಕು ಎಂದು ಅವರು ಹೇಳಿದ್ದಾರೆ.
ಈ ಪ್ರಶಸ್ತಿ ನೀಡಬೇಕಾದರೆ ಸಾಕಷ್ಟು ಜನರನ್ನು ನಿರ್ಲಕ್ಷಿಸಲಾಗಿದೆ. ಸಾಮಾಜಿಕ , ಆರ್ಥಿಕವಾಗಿ ಹಿಂದುಳಿದವರನ್ನು ಹಿಂದಿನಿಂದಲೂ ಕಡೆಗಣಿಸುತ್ತಿದ್ದು, ಇದನ್ನು ಮೋದಿ ನೇತೃತ್ವದ ಸರ್ಕಾರ ಅನುಸರಿಸುತ್ತಾ ಬಂದ ಹಾಗಿದೆ ಎಂದು ದೂರಿದ್ದಾರೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಅಲ್ಪಸಂಖ್ಯಾತರು ಹಾಗೂ ರೈತ ಸಮುದಾಯದ ಯಾರೊಬ್ಬರಿಗೂ ಈ ವರ್ಷ ಪ್ರಶಸ್ತಿ ಬಂದಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.