

ಚೆನ್ನೈ: ಭಾರತೀಯ ಚಿತ್ರರಂಗದ ಅಭಿಜಾತ ಕಲಾವಿದ ಬಹುಭಾಷಾ ನಟ ಕಮಲ್ ಹಾಸನ್ ಅಭಿನಯದ 'ಉತ್ತಮ ವಿಲನ್' ಚಿತ್ರ ಬಿಡುಗಡೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆಯಾದರು, ಸೆನ್ಸಾರ್ ಮಂಡಳಿ ವಿರುದ್ಧ ಕಮಲ ಹಾಸನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಮಲ್ ಹಾಸನ್ ಅಭಿನಯದ ಚಿತ್ರ ಬಿಡುಗಡೆ ವೇಳೆ ಸೆನ್ಸಾರ್ ಮಂಡಳಿಯೊಂದಿಗೆ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತದೆ. ಅದೇ ರೀತಿ ಈ ಬಾರಿಯು ಕಮಲ್ ಹಾಸನ್ ಅಭಿನಯದ ಉತ್ತಮ ವಿಲನ್ ಸೆನ್ಸಾರ್ ಮಂಡಳಿ ನಡುವೆ ಕೆಲವು ಮನಸ್ತಾಪ ಮೂಡಿರುವುದಂತೂ ನಿಜ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಮಲಹಾಸನ್ ಅವರು, ಸೆನ್ಸಾರ್ ಮಂಡಳಿ, ನಟ, ನಿರ್ದೇಶಕ ಹಾಗೂ ತಾಂತ್ರಿಕಾಗಾರರ ಕ್ರಿಯಾತ್ಮಕತೆಗೆ ನಿರ್ಬಂಧ ಹಾಕುತ್ತಿದೆ. ಕ್ರಿಯಾತ್ಮಕತೆಗೆ ಆದ್ಯತೆ ನೀಡುತ್ತಿಲ್ಲ. ನನ್ನ ಯಾವುದೇ ಚಿತ್ರ ಬಿಡುಗಡೆಯಾಗಬೇಕಾದರು ಸೆನ್ಸಾರ್ ಮಂಡಳಿ ಒಂದಲ್ಲ ಒಂದು ಸಮಸ್ಯೆಯನ್ನು ಹುಡುಕುತ್ತದೆ. ಕ್ರಿಯಾತ್ಮಕತೆಗೆ ಕಡಿವಾಣ ಹಾಕುತ್ತದೆ. ಇದರಿಂದ ನನಗೆ ಸಾಕಷ್ಟು ಅಸಮಾಧಾನವನ್ನುಂಟು ಮಾಡಿದೆ ಎಂದು ಹೇಳಿದ್ದಾರೆ.
ಮೇ 1ರಂದು ಬಿಡುಗಡೆಯಾಗಲಿರುವ ಉತ್ತಮ ವಿಲನ್‌ಗೆ ಕೇಂದ್ರೀಯ ಸೆನ್ಸಾರ್ ಮಂಡಳಿ ಕ್ಲೀನ್‌ಚಿಟ್ ನೀಡಿದೆ.
ಸ್ಯಾಂಡಲ್‌ವುಡ್ ನಟ, ನಿರ್ದೇಶಕ ರಮೇಶ್ ಅರವಿಂದ್ ನಿರ್ದೇಶನದ 'ಉತ್ತಮ ವಿಲನ್' ಚಿತ್ರದಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವಂತಾ ದೃಶ್ಯಗಳಿದ್ದು, ಈ ಚಿತ್ರವನ್ನು ನಿಷೇಧಿಸಬೇಕೆಂದು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿತ್ತು. ಕಮಲ್ ಹಾಸನ್ ಅವರು ಪಬ್ಲಿಸಿಟಿಗಾಗಿ ಚೀಪ್ ಟ್ರಿಕ್ಸ್ ಮಾಡುತ್ತಿದ್ದಾರೆ. ಈ ಹಿಂದೆ 'ವಿಶ್ವರೂಪಂ' ಚಿತ್ರದಲ್ಲೂ ಮುಸ್ಲಿಮರ ಧಾರ್ಮಿಕ ಭಾವನೆಗಳ ವಿರುದ್ಧವಾಗಿ ಚಿತ್ರ ಮಾಡಿದ್ದರು. ಹೀಗಾಗಿ 'ಉತ್ತಮ ವಿಲನ್' ಚಿತ್ರವನ್ನು ನಿಷೇಧಿಸಬೇಕೆಂದು ಮುಸ್ಲಿಂ ಸಂಘಟನೆಯೂ ಒತ್ತಾಯಿಸಿತ್ತು.