

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಟ್ಲರ್ ಗೆ ಹೋಲಿಕೆ ಮಾಡುವ ಹಾಗೂ ಪ್ರತ್ಯೇಕತಾವಾದಿ ನಾಯಕ ಮಸರತ್ ಅಲಂನನ್ನು ಸಾಹಬ್ ಎಂದು ಕರೆಯುವ ಮೂಲಕ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಶುಕ್ರವಾರ ಹೊಸ ವಿವಾದ ಸೃಷ್ಟಿಸಿದ್ದಾರೆ. ದಿಗ್ವಿಜಯ್ ಸಿಂಗ್ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಕಾಶ್ಮೀರದಲ್ಲಿ ಪಾಕ್ ಧ್ವ ಹಾರಿಸಿದ್ದಕ್ಕೆ ಹಾಗೂ ಹಿಂಸೆಗೆ ಪ್ರೋತ್ಸಾಹ ನೀಡಿದಕ್ಕಾಗಿ ಆಲಂನನ್ನು ರಾಜ್ಯ ಸರ್ಕಾರ ಬಂಧಿಸಿತ್ತು. ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿದ ಸಿಂಗ್, `ಪ್ರತ್ಯೇಕವಾದಿಗಳ ನಡೆ ಹಾಗೂ ಹೇಳಿಕೆ ದೇಶ ವಿರೋಧಿಯಾಗಿದೆ. ಹಾಗಾಗಿ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಬೇಕೆಂದು ದಿಗ್ವಿಜಯ್ ಸಿಂಗ್ ಆಗ್ರಹಿಸಿದ್ದಾರೆ.
ಇದೇ ವೇಳೆ, ಕೆನಡಾ ಪ್ರವಾಸ ವೇಳೆ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ್ದಕ್ಕೆ ಮೋದಿ ವಿರುದ್ಧವೂ ದಿಗ್ವಿಜಯ್ ಸಿಂಗ್ ಹರಿಹಾಯ್ದಿದ್ದಾರೆ. ದೇಶದ ಆಂತರಿಕ ರಾಜಕೀಯದ ಕುರಿತು ಪ್ರಧಾನಿಯೊಬ್ಬರು ಹೊರ ದೇಶದಲ್ಲಿ ಮಾತನಾಡಿದ್ದು ಸರಿಯಲ್ಲ. 1947ರಿಂದ ಈವರೆಗೆ ಯಾವ ಪ್ರಧಾನಿಯೂ ದೇಶದ ಆಂತರಿಕ ರಾಜಕೀಯ ಕುರಿತು ಮಾತನಾಡಿಲ್ಲ.
ಅಮೆರಿಕ ಅಧ್ಯಕ್ಷ ಒಬಾಮಾ ರಿಪಬ್ಲಿಕನ್ ಪಕ್ಷದವರ ಜತೆಗಿನ ಭಿನ್ನಮತವನ್ನು ಭಾರತದಲ್ಲಿ ಪ್ರಸ್ತಾಪಿಸಿದ್ದರೇ ಎಂದು ದಿಗ್ವಿಜಯ್ ಸಿಂಗ್ ಪ್ರಶ್ನಿಸಿದ್ದಾರೆ.
ಒಬಾಮ ಅವರು ಮೋದಿ ಕುರಿತು ಟೈಮ್ ಮ್ಯಾಗಝೀನ್ ನಲ್ಲಿ ಪ್ರೊಫೈಲ್ ಬರೆದಿರುವ ವಿಚಾರವನ್ನು ಸಿಂಗ್ ಗಮನಕ್ಕೆ ತಂದಾಗ, ಅಡಾಲ್ಫ್ ಹಿಟ್ಲರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಬ್ರಿಟನ್ ನ ಮಾಜಿ ಪಿಎಂ ವಿನ್ಸಂಟ್ ಚರ್ಚಿಲ್ ಕೂಡ ಹೇಳಿಕೆ ನೀಡಿದ್ದರು. ಆದರೆ, ನಂತರ ತಮ್ಮ ಹೇಳಿಕೆ ವಾಪಸ್ ಪಡೆಯಬೇಕಾಯಿತು ಎಂದಿದ್ದಾರೆ ಸಿಂಗ್.