

ನವದೆಹಲಿ: ಇನ್ನು ಮುಂದೆ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳಿಗೆ ರು.5 ಸಾವಿರಕ್ಕೂ ಹೆಚ್ಚಿನ ಮೌಲ್ಯದ ಉಡುಗೊರೆ ತೆಗೆದುಕೊಳ್ಳುವ ಮೊದಲು ಕೇಂದ್ರ ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯ!
ಈ ಹಿಂದೆ ಅಧಿಕಾರಿಗಳು ರು.1 ಸಾವಿರಕ್ಕಿಂತ ಹೆಚ್ಚಿನ ಮೌಲ್ಯದ ಉಡುಗೊರೆಗೆ ಸರ್ಕಾರದ ಪೂರ್ವಾನುಮತಿ ಪಡೆಯಬೇಕಿತ್ತು. ಆದರೆ, ಆಲ್ ಇಂಡಿಯಾ ಸರ್ವೀಸಸ್ ರೂಲ್ಸ್ ಗೆ ಇತ್ತೀಚೆಗೆ ಮಾಡಿದ ತಿದ್ದುಪಡಿಯನ್ವಯ ಉಡುಗೊರೆ ಮೌಲ್ಯವನ್ನು ಹೆಚ್ಚಿಸಲಾಗಿದೆ.
ಈ ಹಿಂದೆ ಹತ್ತಿರದ ಸಂಬಂಧಿಗಳು ಅಥವಾ ಗೆಳೆಯರಿಂದ ರು.5 ಸಾವಿರಕ್ಕಿಂತ ಕಡಿಮೆ ಮೌಲ್ಯದ ಉಡುಗೊರೆಗಳನ್ನು ತೆಗೆದುಕೊಂಡರೆ ಸರ್ಕಾರಕ್ಕೆ ಮಾಹಿತಿ ನೀಡಬೇಕಿರಲಿಲ್ಲ. ಆದರೆ ಹೊಸ ನಿಯಯಾವಳಿ ಪ್ರಕಾರ, ಸದಸ್ಯರು ತಮ್ಮ ಹತ್ತಿರದ ಸಂಬಂಧಿಕರು ಅಥವಾ ವೈಯಕ್ತಿಕ ಗೆಳೆಯರಿಂದ ಮದುವೆ, ವಾರ್ಷಿಕೋತ್ಸವ, ಧಾರ್ಮಿಕ ಕಾರ್ಯಕ್ರಮಗಳ ವೇಳೆ ಪಡೆಯುವ ಉಡುಗೊರೆಗಳ ಮೌಲ್ಯ ರು. 25 ಸಾವಿರಕ್ಕಿಂತ ಕಡಿಮೆ ಇದ್ದರೆ ಸರ್ಕಾರಕ್ಕೆ ಮಾಹಿತಿ ನೀಡಬೇಕೆಂದಿಲ್ಲ.