

ಸಿಡ್ನಿ, ಆಸ್ಟ್ರೇಲಿಯಾ: ನೇಪಾಳದಲ್ಲಿ ಶನಿವಾರ ಸಂಭವಿಸಿದ ಭಯಾನಕ ಭೂಕಂಪದಿಂದಾಗಿ ರಾಜಧಾನಿ ಕಠ್ಮಂಡು ಅಕ್ಷರಶಃ ನಡುಗಿಹೋಗಿದ್ದು, ಭೂಕಂಪದಿಂದಾಗಿ ಕಠ್ಮಂಡು ಮೂರು ಮೀಟರ್ ಸ್ಥಾನಪಲ್ಲಟಗೊಂಡಿದೆ. ಆದರೆ ಮೌಂಟ್ ಎವರೆಸ್ಟ್ ಪರ್ವತದ ಎತ್ತರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಮಂಗಳವಾರ ಭೂಗೋಳ ತಜ್ಞರು ಹೇಳಿದ್ದಾರೆ.
ನೇಪಾಳದಲ್ಲಿ ಸಂಭವಿಸಿದ 7.9 ತೀವ್ರತೆಯ ಭೂಕಂಪದಿಂದ ಕಠ್ಮಂಡು ಸುಮಾರು ಮೂರು ಮೀಟರ್ (10 ಅಡಿ)ನಷ್ಟು ದಕ್ಷಿಣಕ್ಕೆ ಸ್ಥಾನಪಲ್ಲಟಗೊಂಡಿದೆ ಎಂದು ಕೇಂಬ್ರಿಜ್ ವಿಶ್ವವಿದ್ಯಾಲಯದ ಭೂರಚನಾ ಅಧ್ಯಯನ ಪರಿಣಿತ ಜೇಮ್ಸ್ ಜಾಕ್ಸನ್ ಹೇಳಿದ್ದಾರೆ.
ಭೂಕಂಪ ಸಂಭವಿಸಿದಾಗ ಅದರ ಜತೆಗೇ ಸಾಗುವ ಕಂಪನ ಅಲೆಗಳ ಪ್ರಾಥಮಿಕ ವಿಶ್ಲೇಷಣೆಯಿಂದ ಈ ಅಂಶ ತಿಳಿದುಬಂದಿದೆ ಎಂದು ಜಾಕ್ಸನ್ ಪ್ರತಿಪಾದಿಸಿದ್ದಾರೆ.
ನೇಪಾಳದ ಕಠ್ಮಂಡು ಕಣಿವೆಯ ಭೂಗರ್ಭದಲ್ಲಿರುವ ಸುಮಾರು 150 ಕಿಮೀ ಉದ್ದ ಮತ್ತು 50 ಕಿಮೀನಷ್ಟು ಅಗಲದ ಶಿಲಾಪದರದಲ್ಲಿ ಭೂಕಂಪನದಿಂದ ಉಂಟಾಗಿರುವ ಒತ್ತಡದಿಂದ ಪಲ್ಲಟ ಉಂಟಾಗಿದೆ. ಶಿಲಾಪದರದ ಮೇಲ್ಭಾಗ ದಕ್ಷಿಣಕ್ಕೆ ಜರುಗಿರುವ ಸಂಭವ ಇದೆ ಎಂದು ಜಾಕ್ಸನ್ ವಿವರಿಸಿದ್ದಾರೆ.
ಕಠ್ಮಂಡು ಕಣಿವೆಯ ಶಿಲಾ ಪದರವು ಭಾರತ ಹಾಗೂ ಯುರೇಷ್ಯನ್ (ಯುರೋಪ್- ಏಷ್ಯಾ) ಭೂಪದರಗಳ ನಡುವೆ ರಚನೆಯಾಗಿದೆ. ಭಾರತ ಭೂಪದರವು ಯುರೇಷ್ಯನ್ ಭೂಪದರವನ್ನು ನೂಕುತ್ತಿದೆ. ಈ ಎರಡು ಭೂಪದರಗಳ ನಡುವಿನ ಘರ್ಷಣೆಯ ಪ್ರಮಾಣ 2 ಸೆಂಟಿ ಮೀಟರ್‌ನಷ್ಟಿದೆ ಎಂದು ಅವರು ಹೇಳಿದ್ದಾರೆ.