

ಪಾಟ್ನ: ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ವಾಗ್ಧಾಳಿ ಮುಂದುವರೆಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಇದೀಗ ಮೋದಿ ಅವರ ಡಿಎನ್ಎ ಹೇಳಿಕೆ ಕುರಿತಂತೆ ಮತ್ತೆ ತಮ್ಮ ವಾಗ್ಧಾಳಿಯನ್ನು ಮುಂದವರೆಸಿದ್ದು, ಬಿಹಾರ ಜನತೆಯ ಡಿಎನ್ಎ ಬಗ್ಗೆ ನಿಮಗೆ ಸಂಶಯವೇ?...ಹಾಗಾದರೆ ಬಿಹಾರದಲ್ಲಿರುವ 50 ಲಕ್ಷ ಜನತೆಯೆಲ್ಲರೂ ರಕ್ತದ ಸ್ಯಾಂಪಲ್ ಕಳುಹಿಸುತ್ತೇವೆ ಪರೀಕ್ಷೆ ನಡೆಸಿ ಎಂದು ಹೇಳಿದ್ದಾರೆ.
ಡಿಎನ್ಎ ಹೇಳಿಕೆ ಕುರಿತಂತೆ ಟ್ವಿಟ್ಟರ್ ನಲ್ಲಿ ಕಿಡಿಕಾರಿರುವ ಅವರು, ಮೋದಿ ಅವರ ಹೇಳಿಕೆಯನ್ನು ಬಿಹಾರ ಜನತೆಯು ಗಂಭೀರವಾಗಿ ಪರಿಗಣಿಸಿದ್ದು, ಇನ್ನು ಸ್ವಲ್ಪ ದಿನದಲ್ಲೇ ಮೋದಿ ವಿರುದ್ಧ ಶಬ್ಧ್ ವಾಪ್ಸಿ(ಹೇಳಿಕೆ ಹಿಂಪಡೆಯುವ ಚಳುವಳಿ) ಚಳುವಳಿಯನ್ನು ಆರಂಭಿಸಲಾಗುತ್ತದೆ ಎಂದು ಹೇಳಿದ್ದಾರೆ.
ತಮ್ಮ ಚಳುವಳಿ ಕುರಿತಂತೆ ಟ್ವಿಟರ್ ನಲ್ಲಿ ಬಹಿರಂಗ ಪತ್ರ ಬರೆದಿರುವ ನಿತೀಶ್ ಕುಮಾರ್ ಅವರು, ಮೋದಿ ಅವರ ಹೇಳಿಕೆ ವಿರುದ್ಧ ಇದೀಗ ಶಬ್ಧ್ ವಾಪ್ಸಿ(ಹೇಳಿಕೆ ಹಿಂಪಡೆಯುವ ಚಳುವಳಿ) ಚಳುವಳಿಯನ್ನು ಆರಂಭಿಸಲು ಚಿಂತನೆ ನಡೆಸಲಾಗಿದ್ದು, ಹೋರಾಟದಲ್ಲಿ ಜನರ ಸಹಿ ಸಂಗ್ರಹ ಅಭಿಯಾನವನ್ನು ಆಯೋಜಿಸಲಾಗಿದೆ. ಅಭಿಯಾನದಲ್ಲಿ ರಕ್ತದ ಸ್ಯಾಂಪಲ್ ನೀಡುವ ಕುರಿತಂತೆ ಜನರ ಒಪ್ಪಿಗೆಯನ್ನು ಪಡೆಯಲಾಗುವುದು. ನಂತರ ಬಿಹಾರ ಜನತೆಯ ರಕ್ತ ಸ್ಯಾಂಪಲ್ ನ್ನು ಮೋದಿ ಅವರಿಗೆ ಕಳುಹಿಸಲಾಗುತ್ತದೆ. ಹೋರಾಟದಲ್ಲಿ 50 ಲಕ್ಷ ಬಿಹಾರ ಜನತೆ ಭಾಗವಹಿಸುವ ನಿರೀಕ್ಷೆಯಿದೆ. ಮೋದಿ ವಿರುದ್ಧ ಚಳುವಳಿ ಕುರಿತಂತೆ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ಮೋದಿಯವರು ಬಿಹಾರ ಜನತೆಯ ಡಿಎನ್ಎ ಕುರಿತಂತೆ ತಕರಾರು ಎತ್ತಿದ್ದು, ಅವರ ತಕರಾರಿಗೆ ಚಳುವಳಿ ಮೂಲಕ ತಕ್ಕ ಉತ್ತರ ನೀಡೋಣ ಎಂದು ಹೇಳುವ ಮೂಲಕ ನಿತೀಶ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಮೋದಿ ವಿರುದ್ಧ ಬಹಿರಂಗ ಪತ್ರವೊಂದನ್ನು ಬಿಡುಗಡೆ ಮಾಡಿದ್ದಾರೆ.
ಬಿಹಾರ ಚುನಾವಣೆ ಸಂಬಂಧ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ನಿತೀಶ್ ಕುಮಾರ್ ನನ್ನೊಬ್ಬನಿಗೆ ಮಾತ್ರವೇ ಅಗೌರವ ಸೂಚಿಸಿಲ್ಲ. ಮಹಾದಲಿತರಾದ ಜಿತನ್ ರಾಮ್ ಮಾಂಝಿ ಅವರಿಗೂ ಈ ಹಿಂದೆ ಅಗೌರವ ಸೂಚಿಸಿದ್ದಾರೆ. ಇಲ್ಲಿರುವ ಜನತೆಯ ಡಿಎನ್ಎಗೂ ನಿತೀಶ್ ಕುಮಾರ್ ಅವರ ಡಿಎನ್ ಎಗೂ ಸಾಕಷ್ಟು ವ್ಯತ್ಯಾಸವಿದ್ದು, ಅವರ ಡಿಎನ್ಎಯಲ್ಲಿ ಏನಾದರೂ ಸಮಸ್ಯೆ ಇರಬಹುದು ಎಂದು ಹೇಳಿದ್ದರು. ಮೋದಿ ಅವರ ಈ ಹೇಳಿಕೆ ಇದೀಗ ಹಲವು ವಿವಾದಗಳನ್ನು ಸೃಷ್ಟಿ ಮಾಡಿದ್ದು, ಪ್ರತಿಪಕ್ಷಗಳ ನಡುವೆ ವಾಕ್ಸಮರ ಆರಂಭವಾಗುವಂತೆ ಮಾಡಿದೆ.