

ನವದೆಹಲಿ: ಲಲಿತ್ ಮೋದಿ ಪ್ರಕರಣದ ಬಗ್ಗೆ ಲೋಕಸಭೆಯಲ್ಲಿ ನಡೆದ ಚರ್ಚೆ ವೇಳೆ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿದ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ಲಲಿತ್ ಮೋದಿ ಗೆ ಮಾನವೀಯ ನೆಲೆಯಲ್ಲಿ ಸಹಾಯ ಮಾಡಬೇಕೆಂದಿದ್ದರೆ ಸುಷ್ಮಾ ಸ್ವರಾಜ್ ಅವರು ಕಾನೂನು ಚೌಕಟ್ಟಿನಲ್ಲಿ ಸಹಾಯ ಮಾಡಬೇಕಿತ್ತು. ಆದರೆ ಸುಷ್ಮಾ ಸ್ವರಾಜ್ ಕಾನೂನು ವ್ಯಾಪ್ತಿಯನ್ನು ಮೀರಿ ಸಹಾಯ ಮಾಡಿದ್ದಾರೆ. ತಾವು ಲಲಿತ್ ಮೋದಿಗೆ ಸಹಾಯ ಮಾಡಿರುವುದರಿಂದ ಭಾರತ- ಯು.ಕೆ ನಡುವಿನ ಸಂಬಂಧಕ್ಕೆ ಧಕ್ಕೆ ಉಂಟಾಗುವುದಿಲ್ಲ ಎಂದು ಹೇಳಿದರೆ ಶಿಫಾರಸು ಮಾಡಿದಂತಲ್ಲವೇ ಎಂದು ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.
ಸುಷ್ಮಾ ಸ್ವರಾಜ್ ಅವರ ಸ್ಪಷ್ಟನೆ ನೀಡಿದರೂ ಚರ್ಚೆ ವೇಳೆ ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತರಿರಬೇಕೆಂದು ಸ್ಪೀಕರ್ ಸುಮಿತ್ರ ಮಹಾಜನ್ ಗೆ ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದರು. ನಾವು ಹೇಳುವುದನ್ನು ಪ್ರಧಾನಿ ಆಲಿಸಿದರೆ, ಕ್ರಮ ಕೈಗೊಳ್ಳುವ ಭರವಸೆ ಮೂಡುತ್ತದೆ ಆದ್ದರಿಂದ ಪ್ರಧಾನಿ ಮೋದಿ ಚರ್ಚೆಯಲ್ಲಿ ಭಾಗವಹಿಸಬೇಕೆಂದು ಖರ್ಗೆ ಹೇಳಿದ್ದಾರೆ. ಲಲಿತ್ ಮೋದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಸುಷ್ಮಾ ಸ್ವರಾಜ್, ಮೋದಿಗೆ ಸಹಾಯ ಮಾಡಲು ಯು.ಕೆ ಸರ್ಕಾರಕ್ಕೆ ಶಿಫಾರಸು ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಲಲಿತ್ ಮೋದಿ ಪತ್ನಿಗೆ ಮಾತ್ರ ಸಹಾಯ ಮಾಡಿದ್ದಾಗಿ ತಿಳಿಸಿದ್ದರು.