ನವದೆಹಲಿ: ``ಸಮಾನ ಶ್ರೇಣಿ; ಸಮಾನ ಪಿಂಚಣಿ'' ಯೋಜನೆ ಜಾರಿ ಮಾಡುವಾಗ ಪ್ರತಿ ವರ್ಷ ಪಿಂಚಣಿ ಪರಿಷ್ಕರಿಸುವುದು ಸಾಧ್ಯವೇ ಇಲ್ಲ ಎಂದು ಹಣಕಾಸು ಸಚಿವ ಅರುಣ್ ಜೆಟ್ಲಿ ಸ್ಪಷ್ಟಪಡಿಸಿದ್ದಾರೆ.
ಇದರೊಂದಿಗೆ ಯೋಜನೆ ಜಾರಿಗೆ ಒತ್ತಾಯಿಸಿ 78 ದಿನಗಳಿಂದ ಹೋರಾಟ ನಡೆಸುತ್ತಿರುವ ಮಾಜಿ ಸೈನಿಕರು ಮತ್ತು ಕೇಂದ್ರದ ನಡುವಿನ ಸಂಘರ್ಷ ಮತ್ತೊಂದು ಮಜಲು ಮುಟ್ಟಿದೆ. ಮಾಜಿ ಸೈನಿಕರು ಹೋರಾಟ ಆರಂಭಿಸಿದ ನಂತರ ಇದೇ ಮೊದಲ ಬಾರಿಗೆ ಯೋಜನೆ ಜಾರಿಗೆ ಅಡ್ಡಿಯಾಗಿರುವ ಅಂಶಗಳ ಬಗ್ಗೆ ಸಚಿವ ಅರುಣ್ ಜೇಟ್ಲಿ ಮಾತನಾಡಿದ್ದಾರೆ.
``ಸಮಾನ ಶ್ರೇಣಿ; ಸಮಾನ ಪಿಂಚಣಿ ಯೋಜನೆ ಜಾರಿಗೆ ಬದ್ಧವಾಗಿದೆ. ಆದರೆ, ಯೋಜನೆಯನ್ನು ಅಂಕಗಣಿತಕ್ಕೆ ಪರಿವರ್ತಿಸುವ ಹಂತದಲ್ಲಿ ಸಮಸ್ಯೆ ಉದ್ಭವಿಸಿದೆ. ಯೋಜನೆ ಬಗ್ಗೆ ನನ್ನದೇ ಆದ ಸೂತ್ರ ಇದೆ. ಬೇರೆಯವರ ಬಳಿ ಅವರದೇ ಆದ ಸೂತ್ರ ಇದೆ. ಆದರೆ, ಜಾರಿಮಾಡುವ ಹೊತ್ತಿಗೆ ಸೂತ್ರವು ಆರ್ಥಿಕವಾಗಿ ಸಮಂಜಸ ಮತ್ತು ತಾತ್ವಿಕವಾಗಿರಬೇಕು.
ವಿಶ್ವದ ಯಾವ ಭಾಗದಲ್ಲೂ ಪ್ರತಿ ವರ್ಷ ಪಿಂಚಣಿ ಪರಿಷ್ಕರಿಸುತ್ತಿರುವ ಉದಾಹರಣೆ ಇಲ್ಲ'' ಎಂದು ಹೇಳಿದ್ದಾರೆ. ``ಆರ್ಥಿಕ ವಿವೇಕದ ಬಗ್ಗೆ ನಾನುಸದಾ ಜಾಗೃತನಾಗಿರುತ್ತೇನೆ. ನನ್ನದು ಸಾಧಾರಣ ಗೃಹಿಣಿಯ ಕೆಲಸ. ಆದಾಯದ ಪ್ರತಿಯೊಂದು ರುಪಾಯಿಯನ್ನು ಅಳೆದು ತೂಗಿ ವೆಚ್ಚ ಮಾಡಬೇಕು. ಹೆಚ್ಚು ವೆಚ್ಚಮಾಡಿ, ಸಾಲ ಮಾಡುವಂತಾಗಬಾರದು. ಒಂದು ಮಿತಿ ದಾಟಿ ಸಾಲ ಮಾಡಿದರೆ, ಆರ್ಥಿಕ ಅಶಿಸ್ತಿಗೆ ಒಳಗಾದಂತೆಯೀ''ಎಂದು ವಿವರಿಸಿದ್ದಾರೆ.
``ಪ್ರತಿ ವರ್ಷವೂ ಪಿಂಚಣಿ ಪರಿಷ್ಕರಿಸುವುದಿಲ್ಲ ಎಂದ ಮಾತ್ರಕ್ಕೆ ನಿವೃತ್ತ ಸೈನಿಕರಿಗೆ ಅನ್ಯಾಯ ಮಾಡುವುದಿಲ್ಲ. 35- 38 ವರ್ಷಕ್ಕೆ ನಿವೃತ್ತರಾಗುವು ಸೈನಿಕರ ಕ್ಷೇಮಾಭಿವೃದ್ಧಿ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ಆದ್ದರಿಂದ ಬೇಗ ನಿವೃತ್ತರಾಗುವವರಿಗೆ ವಿಶೇಷ ಸೂತ್ರದಡಿ ಹೆಚ್ಚಿನ ಪಿಂಚಣಿ ನಿಗದಿ ಮಾಡಿ ಸರಿದೂಗಿಸಲಾಗುವುದು.
ಆದರೆ, ಪ್ರತಿ ವರ್ಷವೂ ಪಿಂಚಣಿ ಪರಿಷ್ಕರಿಸುವುದು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. ಈ ನಡುವೆ, ಪ್ರತಿಭಟನೆ ವೇಳೆ ನಿತ್ರಾಣರಾಗಿ ಕುಸಿದುಬಿದ್ದಿದ್ದ 72 ವರ್ಷದ ಹವಾಲ್ದಾರ್ ಬಾಲ್ ಸಿಂಗ್ ರನ್ನು ಆರ್ಮಿ ರಿಸರ್ಚ್ ಆ್ಯಂಡ್ ರೆಫರಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.