

ನವದೆಹಲಿ: ದಲಿತ ಮಕ್ಕಳಿಬ್ಬರ ಹತ್ಯೆ ಕುರಿತು ಪ್ರತಿಕ್ರಿಯಿಸುವಾಗ ನಾಯಿಯ ಉದಾಹರಣೆ ನೀಡಿದ್ದ ವಿದೇಶಾಂಗ ಖಾತೆ ರಾಜ್ಯ ಸಚಿವ ಜ. ವಿ ಕೆ ಸಿಂಗ್ ರಾಜಿನಾಮೆಗೆ ಆಗ್ರಹಿಸಿ ಲೋಕಸಭೆಯಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತು.
ಕಲಾಪದ ಆರಂಭದಲ್ಲಿಯೇ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸಿಂಗ್ ಹೇಳಿಕೆ ವಿಚಾರವಾಗಿ ನಿಲುವಳಿ ಮಂಡನೆಗೆ ಮುಂದಾದರು. ಸ್ಪೀಕರ್ ಸುಮಿತ್ರಾ ಮಹಾಜನ್ ಅದಕ್ಕೆ ಅವಕಾಶ ನೀಡದಿದ್ದಾಗ ಸದನದ ಬಾವಿಗಿಳಿದು ಧರಣಿ ಆರಂಭಿಸಿದರು. ಅವರಿಗೆ ತೃಣಮೂಲ ಕಾಂಗ್ರೆಸ್ ಸದಸ್ಯರು ಸಹ ಬೆಂಬಲ ನೀಡಿದರು. ಈ ಬಗ್ಗೆ ಗೃಹ ಸಚಿವ ರಾಜನಾಥ ಸಿಂಗ್ ಮಂಗಳವಾರವೇ ವಿವರವಾದ ಉತ್ತರ ನೀಡಿದ್ದಾರೆ ಎಂಬ ಸ್ಪೀಕರ್ ಹೇಳಿಕೆಗೆ ಮಣಿಯದ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು.