

ಕೋಲ್ಕತಾ: 2012ರಲ್ಲಿ ಕೋಲ್ಕತಾ ಪಾರ್ಕ್ ಸ್ಟ್ರೀಟ್ ನಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಕೋಲ್ಕತಾ ಕೋರ್ಟ್ ದೋಷಿ ಎಂದು ತೀರ್ಪು ನೀಡಿದೆ.
ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಐವರು ಆರೋಪಿಗಳಿದ್ದು ಇಬ್ಬರು ನಾಪತ್ತೆಯಾಗಿದ್ದು, ಇನ್ನುಳಿದಂತೆ ಮೂವರ ವಿರುದ್ಧ ಆರೋಪ ಸಾಬೀತಾಗಿದೆ. ಶಿಕ್ಷೆಯ ಪ್ರಮಾಣವನ್ನು ಕೋರ್ಟ್ ಶುಕ್ರವಾರ ಪ್ರಕಟಿಸಲಿದೆ.
ಇಬ್ಬರು ಪ್ರಮುಖ ಆರೋಪಿಗಳಾದ ಖಾದಿರ್ ಖಾನ್ ಮತ್ತು ಅಲಿ ತಲೆಮರೆಸಿಕೊಂಡಿದ್ದು, ಈವರೆಗೂ ಅವರನ್ನು ಬಂಧಿಸಲು ಸಾಧ್ಯವಾಗಿಲ್ಲ. ಇನ್ನು ಮೂವರಾದ ರುಮಾನ್ ಖಾನ್, ನಾಸೆರ್ ಖಾನ್ ಮತ್ತು ಸುಮಿತ್ ಬಜಾಜ್ ದೋಷಿ ಎಂದು ಅಡಿಷನಲ್ ಸೆಷನ್ಸ್ ಜಡ್ಜ್ ಭಟ್ಟಾಚಾರ್ಯ ತೀರ್ಪು ನೀಡಿದ್ದಾರೆ.
2012ರ ಫೆಬ್ರುವರಿ 5ರಂದು ಆಂಗ್ಲೋ ಇಂಡಿಯನ್ ಸಮುದಾಯದ ಮಹಿಳೆ ಮೇಲೆ ಚಲಿಸುತ್ತಿದ್ದ ಕಾರಿನಲ್ಲೇ ಐವರು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಬಳಿಕ ಆಕೆಯನ್ನು ರಸ್ತೆ ಬದಿ ಎಸೆದು ಹೋಗಿದ್ದರು. ಕೆಲವು ದಿನಗಳ ನಂತರ ಆಕೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೀರ್ಘ ಕಾಲದ ಕಾನೂನು ಹೋರಾಟದಿಂದಾಗಿ ಮೆದುಳು ರೋಗಕ್ಕೆ ತುತ್ತಾದ ಆಕೆ ಮಾರ್ಚ್ ನಲ್ಲಿ ನಿಧನರಾಗಿದ್ದರು.