

ಲಖನೌ: ಗೋಮಾಂಸ ರಫ್ತು ವಿರೋಧಿಸುತ್ತಿರುವ ಬಿಜೆಪಿ ಗೋಮಾಂಸ ರಫ್ತು ಮಾಡುವ ವ್ಯಕ್ತಿಯಿಂದಲೇ ಪಕ್ಷಕ್ಕೆ 200 ಕೋಟಿ ದೇಣಿಗೆ ಪಡೆದಿದೆ ಎಂದು ಉತ್ತರ ಪ್ರದೇಶ ಸಚಿವ ಆಜಂ ಖಾನ್ ಆರೋಪಿಸಿದ್ದಾರೆ.
ಬಿಜೆಪಿ ಗೋಮಾಂಸ ವಿಚಾರದಲ್ಲಿ ರಾಜಕೀಯ ಮಾಡುತ್ತದೆ. ಆದರೆ ಗೋಮಾಂಸ ಮಾರಾಟ ಮಾಡುವ ವ್ಯಕ್ತಿಯಿಂದಲೇ 200 ಕೋಟಿ ರೂಪಾಯಿ ದೇಣಿಗೆ ಪಡೆದಿದೆ. ಅಕ್ರಮವಾಗಿ ಎಷ್ಟು ಹಣ ಸ್ವೀಕರಿಸಿದೆ ಎಂಬುದರ ಬಗ್ಗೆ ಬಿಜೆಪಿ ಸ್ಪಷ್ಟನೆ ನೀಡಬೇಕು ಎಂದು ಆಜಂ ಖಾನ್ ಆಗ್ರಹಿಸಿದ್ದಾರೆ.
ಆಜಂ ಖಾನ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ ವಿಜಯ್ ಬಹದ್ದೂರ್ ಪಾಠಕ್, ಆಜಂ ಖಾನ್ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಬಿಜೆಪಿ ವಿರುದ್ಧ ಆರೋಪ ಮಾಡುವುದಕ್ಕೂ ಮುನ್ನ ಮುಲಾಯಂ ಸಿಂಗ್ ಯಾದವ್ ಅವರ ಜನ್ಮದಿನಾಚರಣೆಗೆ ಖರ್ಚಾದ ಹಣದ ಬಗ್ಗೆ ಮಾಹಿತಿ ನೀಡಲಿ, ಎಸ್ ಪಿ ನಾಯಕ ಮುಲಾಯಂ ಸಿಂಗ್ ಯಾದವ್ ಜನ್ಮ ದಿನವನ್ನು ಅದ್ಧೂರಿಯಾಗಿ ಆಚರಿಸಲು ಭೂಗತ ಪಾತಕಿ ದಾವೂದ್ ಇಬ್ರಾಹಿಂ ನಿಂದ ಹಣ ಬರುತ್ತಿದೆ ಎಂದು ಸ್ವತಃ ಆಜಂ ಖಾನ್ ಅವರೇ ಈ ಹಿಂದೆ ಹೇಳಿದ್ದರು. ಮೊದಲು ಈ ಬಗ್ಗೆ ಸ್ಪಷ್ಟನೆ ನೀಡಲಿ ಎಂದು ಪಾಠಕ್ ಒತ್ತಾಯಿಸಿದ್ದಾರೆ.