

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಪರಮಾಪ್ತರೆಂದೇ ಹೇಳಲಾಗುವ ಕರ್ನಾಟಕದ ದತ್ತಾತ್ರೇಯ ಹೊಸಬಾಳೆ ಅವರನ್ನು ಮುಂದಿನ ತಿಂಗಳು ಆರ್‍ಎಸ್ಎಸ್‍ನ ಸರಕಾರ್ಯವಾಹರಾಗಿ ನೇಮಿಸುವ ಸಾಧ್ಯತೆ ದಟ್ಟವಾಗಿದೆ.
ಮಾರ್ಚ್ ತಿಂಗಳಲ್ಲಿ ನಾಗ್ಪುರದಲ್ಲಿ ಅಖಿಲ ಭಾರತೀಯ ಪ್ರತಿನಿ„ ಸಭೆ ನಡೆಯಲಿದ್ದು, ಈ ವೇಳೆ ಸುರೇಶ್ ಭಯ್ಯಾಜಿ ಜೋಶಿ ಸ್ಥಾನಕ್ಕೆ ಹೊಸಬಾಳೆ ಅವರನ್ನು ತರಲಾಗುವುದು ಎಂದು ಹೇಳಲಾಗುತ್ತಿದೆ. ಸದ್ಯ ಆರೆಸ್ಸೆಸ್‍ನ ಸಹ ಸರಕಾರ್ಯವಾಹರಾಗಿರುವ ಹೊಸಬಾಳೆ ಅವರು ಮುಂದೆ ಮೋಹನ್ ಭಾಗವತ್ ಅವರ ಸ್ಥಾನ ತುಂಬಲಿದ್ದಾರೆ ಎಂದೂ ಹೇಳಲಾಗುತ್ತಿದೆ.
ಇದೇ ವೇಳೆ, ಖಾಲಿ ಇರುವ ಆರೆಸ್ಸೆಸ್ ಜಂಟಿ ಪ್ರಧಾನ ಕಾರ್ಯದರ್ಶಿಗಳ ಹುದ್ದೆಯನ್ನು ಮಾರ್ಚ್ ಎರಡನೇ ವಾರ ನಾಗ್ಪುರದಲ್ಲಿ ನಡೆಯಲಿರುವ ಪ್ರತಿನಿಧಿ ಸಭೆಯಲ್ಲಿ ಭರ್ತಿ ಮಾಡಲಾಗುತ್ತದೆ. ಸಂಘದ ಉನ್ನತ ಸ್ತರದಲ್ಲಿ ಆಗುತ್ತಿರುವ ಬದಲಾವಣೆ ಬಿಜೆಪಿ ಮತ್ತು ಸಂಘದ ನಡುವೆ ಉತ್ತಮ ಸಮನ್ವಯ ಮೂಡಿಸಲಿದೆ ಎಂದೂ ಹೇಳಲಾಗಿದೆ.
ಮೇಲ್ವಿಚಾರಣೆ ಹೊಣೆ ಹೊತ್ತ ಆರೆಸ್ಸೆಸ್ ದೆಹಲಿಯಲ್ಲಿ ಬಿಜೆಪಿ ಸೋಲುಂಡಿರುವುದು ಕೇವಲ ಪಕ್ಷಕ್ಕೆ ಮಾತ್ರವಲ್ಲ, ಆರೆಸ್ಸೆಸ್‍ಗೂ ಆಘಾತ ಉಂಟುಮಾಡಿದೆ. ಹೀಗಾಗಿ ಮುಂದೆ ಚುನಾವಣೆ ನಡೆಯಲಿರುವ ಬಿಹಾರದಲ್ಲಿ ಬಿಜೆಪಿಯ ಕಾರ್ಯತಂತ್ರದ ಮೇಲ್ವಿಚಾರಣೆ ನಡೆಸಲು ಆರೆಸ್ಸೆಸ್ ನಿರ್ಧರಿಸಿದೆ. ಈ ಸಂಬಂಧ ಸೋಮವಾರ ರಾತ್ರಿ ಹೊಸಬಾಳೆ ಅವರು ಬಿಜೆಪಿ ನಾಯಕರನ್ನು ಭೇಟಿಯಾಗಿ ಬಿಹಾರ ಕಾರ್ಯತಂತ್ರದ ಬಗ್ಗೆ ಚರ್ಚಿಸಿದ್ದಾರೆ. ಅಷ್ಟೇ ಅಲ್ಲ, ಬಿಹಾರದ ರಾಜಕೀಯ ಬಿಕ್ಕಟ್ಟಿನಲ್ಲಿ ನೇರ ಹಸ್ತಕ್ಷೇಪ ಮಾಡದಂತೆ ಬಿಜೆಪಿಗೆ ಆರೆಸ್ಸೆಸ್ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ. ಏತನ್ಮಧ್ಯೆ, ಕಾನ್ಪುರದಲ್ಲಿ ನಡೆಯುತ್ತಿರುವ `ಮಂಥನ ಬೈಠಕ್'ನಲ್ಲಿ ಸಂಘ ಮತ್ತು ಅದರ ಅಂಗಸಂಸ್ಥೆ(ಬಿಜೆಪಿ ಸೇರಿದಂತೆ)ಗಳ ನಡುವೆ ಸಮನ್ವಯ ಸಾ„ಸುವ ಬಗ್ಗೆ ಮಾತುಕತೆ ನಡೆಸಲಾಗಿದೆ. ಈ ವೇಳೆ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಆರೆಸ್ಸೆಸ್ ತಿಳಿಸಿದೆ.
ಕಾಶ್ಮೀರ ನಿರ್ಧಾರ ಮೋದಿ ಹೆಗಲಿಗೆ
ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರ ರಚನೆ ಬಿಕ್ಕಟ್ಟು ಇನ್ನೇನು ಪರಿಹಾರವಾಗಿಯೇ ಬಿಟ್ಟಿತು ಅನ್ನುವಾಗ ಪಿಡಿಪಿಯ ಲಿಖಿತ ಭರವಸೆಯ ಬೇಡಿಕೆಯಿಂದ ಹೊಸ ಗೊಂದಲ ಸೃಷ್ಟಿಯಾಗಿದೆ. ಹೀಗಾಗಿ ಮೈತ್ರಿ ಕುರಿತ ಅಂತಿಮ ನಿರ್ಧಾರವನ್ನು ಬಿಜೆಪಿಯು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಧ್ಯಕ್ಷ ಅಮಿತ್ ಶಾ ಅವರಿಗೆ ಬಿಟ್ಟಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಪಿಡಿಪಿ ನೇತೃತ್ವದ ಮೈತ್ರಿ ಸರ್ಕಾರ ಫೆ. 20ರಂದು ಅಧಿಕಾರಕ್ಕೇರುವ ಸಾಧ್ಯತೆ ಇದೆ. ಈ ಹಿಂದೆ ಎರಡೂ ಪಕ್ಷಗಳ ಮುಖಂಡರ ನಡುವೆ ನಡೆದ ಮಾತುಕತೆ ವೇಳೆ, 6 ವರ್ಷ ಪಿಡಿಪಿ ಮುಖ್ಯಸ್ಥೆ ಮುಫ್ತಿ ಮಹಮ್ಮದ್ ಸಯೀದ್ ಸಿಎಂ ಆಗಿ ಅಧಿಕಾರ ನಡೆಸಲು ಒಪ್ಪಿಗೆ ಸೂಚಿಸಲಾಗಿದೆ. ಉಪಮುಖ್ಯಮಂತ್ರಿ ಹುದ್ದೆ ಬಿಜೆಪಿ ಪಾಲಾಗಲಿದ್ದು, ಸಚಿವ ಸ್ಥಾನಗಳನ್ನು ರಾಜ್ಯದ ಮೂರೂ ಭಾಗಗಳ ಸಮಾನ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಹಂಚಿಕೊಳ್ಳಲು ನಿರ್ಧರಿಸಲಾಗಿತ್ತು.