

ಪಟನಾ: ಬಿಹಾರ ರಾಜಕೀಯದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದ್ದು, ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಬೆಂಬಲಿತ ಏಳು ಸಚಿವರನ್ನು ಮಂಗಳವಾರ ಜೆಡಿಯು ಸದಸ್ಯತ್ವದಿಂದ ಅಮಾನತು ಮಾಡಿದೆ.
ಫೆ.20ರ ವಿಶ್ವಾಸ ಮತ ಯಾಚನೆಗೆ ಮೂರು ದಿನ ಮುಂಚೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಏಳು ಸಚಿವರಿಗೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಪಕ್ಷ ಸೂಚಿಸಿತ್ತು. ಆದರೆ, ಇದನ್ನು ನಿರಾಕರಿಸಿದ್ದ ಇವರು ಮಾಂಝಿ ಅವರನ್ನು ಬೆಂಬಲಿಸಿದ್ದರು. ಹೀಗಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಶರದ್ ಯಾದವ್ ಈ ನಿರ್ಣಯ ಕೈಗೊಂಡಿದ್ದಾರೆ.
ಈಗಾಗಲೇ 20 ಮಂದಿ ಸಚಿವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಪಕ್ಷೇತರ ಸಚಿವರೊಬ್ಬರು ಮಾತ್ರ ಈಗ ಉಳಿದುಕೊಂಡಿದ್ದಾರೆ. ಆದರೆ, ಈ ಅಮಾನತುಗೊಂಡವರಲ್ಲಿ ಮೂವರು ಸಚಿವರು ಶುಕ್ರವಾರ ನಡೆಯಲಿರುವ ಬಹುಮತ ಸಾಬೀತು ವೇಳೆ ಮತ ಚಲಾಯಿಸಬಹುದಾಗಿದೆ. ವಿಧಾನ ಪರಿಷತ್‍ನ ಮೂವರು ನಾಲ್ವರು ಸದಸ್ಯರಿಗೆ ಮತ ಚಲಾವಣೆ ಹಕ್ಕಿಲ್ಲ.