

ನವದೆಹಲಿ: ಅಫ್ಘಾನಿಸ್ತಾನದ ಹೇರತ್ ಪ್ರಾಂತ್ಯದಲ್ಲಿ 8 ತಿಂಗಳ ಹಿಂದೆ ತಾಲಿಬಾನ್ ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ತಮಿಳುನಾಡಿನ ಫಾದರ್ ಅಲೆಕ್ಸಿಸ್ ಪ್ರೇಮ್ ಕುಮಾರ್ ರನ್ನು ಬಿಡುಗಡೆ ಮಾಡುವಲ್ಲಿ ಭಾರತ ಯಶಸ್ವಿಯಾಗಿದೆ.
ಯುದ್ಧ ಪೀಡಿತ ಇರಾಕ್ನಿಂದ ಕೇರಳದ ನರ್ಸ್ ಗಳನ್ನು ಬಿಡುಗಡೆಗೊಳಿಸಿದ ಬೆನ್ನಲ್ಲೇ ಈಗ ಜೆಸುಯಿತ್ ಸಂತ ಪ್ರೇಮ್ ಕುಮಾರ್ ರನ್ನು ಬಿಡುಗಡೆ ಮಾಡುವಲ್ಲಿ ಸಿಕ್ಕ ಯಶಸ್ಸು ಮೋದಿ ಸರ್ಕಾರದ ಪಾಲಿಗೆ ಮಹತ್ವದ ರಾಜತಾಂತ್ರಿಕ ವಿಜಯವೆಂದೇ ಬಣ್ಣಿಸಲಾಗುತ್ತಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಆಫ್ಘನ್ ಸರ್ಕಾರದ ಜತೆಗೆ ನಡೆಸಿದ ಸುದೀರ್ಘ ಮಾತುಕತೆಯ ಫಲವಾಗಿ ಈ ಬಿಡುಗಡೆ ಸಾಧ್ಯವಾಗಿದೆ. ಪ್ರೇಮ್ ಕುಮಾರ್ ಬಿಡುಗಡೆಗೆ ಪ್ರಧಾನಿ ಮೋದಿ ಕೂಡ ಹರ್ಷ ವ್ಯಕ್ತ ಪಡಿಸಿದ್ದಾರೆ. ` ನಾನು ಪ್ರೇಮ್ ಕುಮಾರ್ ಜತೆಗೆ ಮಾತನಾಡಿದ್ದೇನೆ. ಅವರ ಕುಟುಂಬಕ್ಕೆ ಪ್ರೇಮ್ ಕುಮಾರ್ ಬಿಡುಗಡೆಯ ವಿಚಾರ ತಿಳಿಸಿದ್ದೇನೆ' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಪ್ರೇಮ್ ಕುಮಾರ್ 3 ವರ್ಷದಿಂದ ಯುದ್ಧಪೀಡಿತ ಆಫ್ಘನ್ನಲ್ಲಿ ಪರಿಹಾರ ಕೆಲಸದಲ್ಲಿ ತೊಡಗಿದ್ದರು. ಅವರನ್ನು ಹೇರತ್ ಪ್ರಾಂತ್ಯದಲ್ಲಿ ನಿರಾಶ್ರಿತರಿಗಾಗಿ ನಡೆಸುತ್ತಿದ್ದ ಶಾಲೆಯಿಂದ ಜೂನ್ ನಲ್ಲಿ ಅಪಹರಿಸಲಾಗಿತ್ತು. ಅವರ ಅಪಹರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಜತೆಗೆ, ಅವರ ಬಿಡುಗಡೆಗಾಗಿ ಅನೇಕ ರಾಜಕೀಯ ಮುಖಂಡರು ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದ್ದರು.
ದೆಹಲಿಗೆ ಆಗಮನ: ಉಗ್ರರಿಂದ ಬಿಡುಗಡೆ
ಉಗ್ರರಿಂದ ಬಿಡುಗಡೆಗೊಂಡಿರುವ ಪ್ರೇಮ್ ಕುಮಾರ್ ಸ್ವದೇಶಕ್ಕೆ ವಾಪಸಾಗಿದ್ದಾರೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಭಾವುವಾರ ಬಂದಿಳಿದ ಅವರನ್ನು ಕುಟುಂಬ ಸದಸ್ಯರು ಸ್ವಾಗತಿಸಿದ್ದಾರೆ.