

ನವದೆಹಲಿ: ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಸಂಸದ ಚೌದರಿ ಮುನಾವಾರ್ ಸಲೀಂ ಅವರು ರಾಮ ಮಂದಿರವನ್ನು ಭಾರತದಲಲ್ಲದೆ ಮತ್ತೆಲ್ಲಿ ನಿರ್ಮಿಸಲು ಸಾಧ್ಯ ಎಂದು ಹೇಳಿದ್ದಾರೆ.
ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಮುನಾವಾರ್ ಸಲೀಂ, ಹಿಂದೂಗಳ ರಾಷ್ಟ್ರವಾಗಿರುವ ಭಾರತದಲ್ಲಿ ರಾಮ ಮಂದಿರವನ್ನು ಕಟ್ಟದೆ ಮತ್ತೆಲ್ಲಿ ನಿರ್ಮಿಸಲು ಸಾಧ್ಯ. ಹೀಗಾಗಿ ಅಯೋಧ್ಯೆಯಲ್ಲೇ ರಾಮ ಮಂದಿರ ನಿರ್ಮಾಣ ಮಾಡಬೇಕಿದ್ದು, ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
2012ರಲ್ಲಿ ಮುನಾವಾರ್ ಸಲೀಂ ಮಧ್ಯಪ್ರದೇಶದ ವಿಧಿಶದಿಂದ ಸಮಾಜವಾದಿ ಪಕ್ಷ ಸಂಸದರಾಗಿ ಆಯ್ಕೆಗೊಂಡಿದ್ದರು. ಇತ್ತೀಚೆಗಷ್ಟೇ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರು ಉತ್ತರ ಪ್ರದೇಶದ ಅಜಂಗಡ್‌ನ ಪಕ್ಷದ ಉಸ್ತುವಾರಿಯನ್ನು ಸಲೀಂಗೆ ನೀಡಿದ್ದರು.
ಸಲೀಂ ಅವರ ಹೇಳಿಕೆಯನ್ನು ಉತ್ತರಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷ ಲಕ್ಷ್ಮಿಕಾಂತ್ ಬಾಜ್‌ಪೈ ಸ್ವಾಗತಿಸಿದ್ದು, ಸಲೀಂ ಅವರು ಇಂತಹ ಹೇಳಿಕೆ ನೀಡುವ ಮುನ್ನ ಪಕ್ಷದ ಮುಖಂಡ ಅಜಂ ಖಾನ್ ಅವರ ಸಲಹೆ ಪಡೆದಿದ್ದಾರೆಯೇ? ಎಂದು ಕಾಲೆಳೆದಿದ್ದಾರೆ.