

ಬೆಂಗಳೂರು: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ವಿರುದ್ಧ 1997ರಲ್ಲಿ ಹೊರಿಸಲಾಗಿರುವ ಆರೋಪಗಳ ದಾಖಲೆಗಳನ್ನು ತಮಿಳಿನಿಂದ ಆಂಗ್ಲ ಭಾಷೆಗೆ ತರ್ಜುಮೆ ಮಾಡಿ ಜ.13ರೊಳಗೆ ಸಲ್ಲಿಸುವಂತೆ ಹೈಕೋರ್ಟ್ ಭಾಷಾಂತರ ನಿರ್ದೇಶನಾಲಯಕ್ಕೆ ಸೂಚಿಸಿದೆ.
ಜಯಲಲಿತಾ ಮತ್ತು ಇತರೆ ಮೂವರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಯನ್ನು ವಿಶೇಷ ನ್ಯಾಯಪೀಠ ನ್ಯಾ.ಸಿಆರ್ ಕುಮಾರಸ್ವಾಮಿ ಅವರ ಏಕಸದಸ್ಯ ಪೀಠ ಮಂಗಳವಾರ ಮುಂದುವರೆಸಿತು. ಜಯಾಪರ ಹಿರಿಯ ವಕೀಲ ಬಿ.ಕುಮಾರ್ ವಾದ ಮಂಡಿಸಿದರು. ನ್ಯಾಯಪೀಠ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.
ಡಾ.ಸ್ವಾಮಿಗಿಲ್ಲ ಅವಕಾಶ
ಕರ್ನಾಟಕ ಹೈಕೋರ್ಟ್‌ನಲ್ಲಿ ಜಯಲಲಿತಾ ಅಕ್ರಮ ಆಸ್ತಿ ಪ್ರಕರಣದಲ್ಲಿ ವಾದ ಮಂಡಿಸಲು ಅವಕಾಶ ಮಾಡಿಕೊಡಬೇಕೆಂಬ ಬಿಜೆಪಿ ನಾಯಕ ಡಾ. ಸುಬ್ರಹ್ಮಣ್ಯಂ ಸ್ವಾಮಿ ಬೇಡಿಕೆಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಕರ್ನಾಟಕ ಹೈಕೋರ್ಟ್ ಈ ಬಗ್ಗೆ ಆದೇಶದ ನೀಡದ ಹೊರತಾಗಿ ಯಾವುದೇ ಸೂಚನೆ ನೀಡುವಂತಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎಚ್‌ಎಲ್ ದತ್ತು ನೇತೃತ್ವದ ಪೀಠ ಆಭಿಪ್ರಾಯಪಟ್ಟಿತು.