

ಶ್ರೀನಗರ: ಕಾರು ಮತ್ತು ಲಾರಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಸಂಭವಿಸಿದೆ.
ಪ್ರಯಾಣಿಕರನ್ನು ಸಾಗಿಸುತ್ತಿದ್ದ ಕಾರ್‌ಒಂದು ಕುಪ್ವಾರದಿಂದ ಶ್ರೀನಗರದತ್ತ ಪ್ರಯಾಣ ಬೆಳೆಸಿತ್ತು. ಶ್ರೀನಗರ-ಬಾರಮುಲ್ಲ ಹೈವೇ ಮಾರ್ಗದ ಹೈಗಮ್-ಪಾಟ್ನ ಸಮೀಪ ಸಂಚರಿಸುತ್ತಿದ್ದ ವೇಳೆ ಎದುರುಬದಿಯಿಂದ ಬರುತ್ತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಕಾರು ನಜ್ಜುಗುಜ್ಜಾಗಿ, ಕಾರಿನಲ್ಲಿ ಪ್ರಯಾಣಿಸುತ್ತಿದ್ದವರ ಪೈಕಿ ಐದು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ ಕಾರಿನಲ್ಲಿದ್ದ ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯಲ್ಲಿ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಪುರುಷರು ದಾರುಣ ಸಾವನ್ನಪ್ಪಿದ್ದಾರೆ. ಮೃತರನ್ನು ನಾಜ ಬೇಗಮ್, ಸಾರ, ಮೊದಮ್ಮದ್ ಶಫಿ ಮಲಿಕ್, ದಿಲ್ಶದ್ ಅಹಮ್ಮದ್ ಪಿರ್ ಎಂದು ಗುರುತಿಸಲಾಗಿದೆ.
ಮೃತರೆಲ್ಲರು ಕುಪ್ವಾರ ಜಿಲ್ಲೆಯವರಾಗಿದ್ದಾರೆ. ಘಟನೆಯಲ್ಲಿ ಸಾವನ್ನಪ್ಪಿರುವ 30 ವರ್ಷದ ಪುರುಷನ ಗುರುತು ಇನ್ನು ಪತ್ತೆಯಾಗಿಲ್ಲ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.