

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಯಾಣಿಸಬೇಕಿದ್ದ ಹೆಲಿಕಾಪ್ಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ತನಿಖೆಗೆ ಆದೇಶಿಸಿದೆ.
ಘಟನೆ ಕುರಿತಂತೆ ಇಂದು ತನಿಖೆಗೆ ಆದೇಶಿರುವ ಗೃಹ ಸಚಿವ ಕೆ.ಜೆ.ಜಾರ್ಜ್ ಅವರು, ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ನಿಯಮ ಪಾಲಿಸುತ್ತಿಲ್ಲ. ಗಣ್ಯ ವ್ಯಕ್ತಿಗಳು ಹೊರಟ ಸಂದರ್ಭದಲ್ಲಿ ಸ್ಥಳದಲ್ಲಿ ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸಿರಬೇಕಿತ್ತು. ಆದರೆ ಘಟನಾ ಸ್ಥಳದಲ್ಲಿ ತುರ್ತುಸೇವೆಗಾಗಿ ಫೈರ್ ಎಂಜಿನ್ ಆಗಲಿ ಆ್ಯಂಬುಲೆನ್ಸ್ ಆಗಲಿ ಇರಲಿಲ್ಲ. ಇದರಿಂದ ವಿಮಾನ ನಿಲ್ಧಾಣದ ಅಧಿಕಾರಿಗಳು ಭದ್ರತಾ ಲೋಪವೆಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಈ ಕುರಿತಂತೆ ಸೂಕ್ತ ರೀತಿಯ ತನಿಖೆಗೆ ಆದೇಶಿಸಲಾಗಿದೆ ಎಂದು ಜಾರ್ಜ್ ಹೇಳಿದ್ದಾರೆ.
ಪ್ರಭಾತಂ ಏವಿಯೇಷನ್ ಕಂಪನಿಯ ಹೆಲಿಕಾಪ್ಟರ್‌ನ್ನು ಪ್ರಯಾಣಕ್ಕಾಗಿ ಬಾಡಿಗೆಗೆ ಪಡೆಯಲಾಗಿತ್ತು. ಜ.10 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮ ನಿಮಿತ್ತ ಬೆಂಗಳೂರಿನಿಂದ ಮೈಸೂರಿಗೆ ಹೆಚ್‌ಎಎಲ್ ಏರ್‌ಪೋರ್ಟ್‌ನಿಂದ ತೆರಳುತ್ತಿದ್ದರು. ಹೆಲಿಕಾಪ್ಟರ್ ಹತ್ತಿದ ಕೆಲವೇ ಕ್ಷಣದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆದರೆ ಇದು ಪೈಲಟ್ ಸೇರಿ ಒಳಗಿದ್ದ ಯಾರ ಗಮನಕ್ಕೂ ಬಂದಿರಲಿಲ್ಲ. ಹೊಗೆ ಕಂಡ ಭದ್ರತಾ ಸಿಬ್ಬಂದಿ ಕ್ಷಣಾರ್ಧದಲ್ಲಿ ದೌಡಾಯಿಸಿ ವಿಷಯ ತಿಳಿಸಿ. ಸಿಎಂ ಸೇರಿದಂತೆ ಹೆಲಿಕಾಪ್ಟರ್‌ನಲ್ಲಿ ಇದ್ದವರನ್ನು ಕೆಳಗೆ ಇಳಿಸಿದ್ದರು.