

ಶ್ರೀನಗರ: ಯಾವುದೇ ಕಾರಣಕ್ಕೂ ತಾವು ಬಿಜೆಪಿ ಪಕ್ಷದೊಂದಿಗೆ ಕೈಜೋಡಿಸಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಹೇಳಿದೆ.
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಂಟಾಗಿರುವ ಸರ್ಕಾರ ರಚನೆ ಬಿಕ್ಕಟ್ಟಿನ ಕುರಿತಂತೆ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖಂಡ ಮಹಮದ್ ಅಕ್ಬರ್ ಲೋನ್ ಅವರು, ತಮ್ಮ ಪಕ್ಷ ಯಾವುದೇ ಕಾರಣಕ್ಕೂ ಬಿಜೆಪಿಯೊಂದಿಗೆ ಕೈ ಜೋಡಿಸುವುದಿಲ್ಲ ಎಂದು ಹೇಳಿದ್ದಾರೆ.
'ಬಿಜೆಪಿ ಕೋಮುವಾದ ಪಕ್ಷವಾಗಿದ್ದು, ತಮ್ಮ ಪಕ್ಷದ ನೀತಿಗಳಿಗೂ, ಆ ಪಕ್ಷದ ನೀತಿಗಳಿಗೂ ಅಜಗಜಾಂತರ ವ್ಯತ್ಯಾಸವಿದೆ. ಹೀಗಾಗಿ ತಾವು ಯಾವುದೇ ಕಾರಣಕ್ಕೂ ಬಿಜೆಪಿಗೆ ಬೆಂಬಲ ನೀಡುವುದಿಲ್ಲ. ಘರ್‌ವಾಪಸಿ ಪ್ರಕರಣಗಳಂತಹ ಹಲವು ಪ್ರಕರಣಗಳು ನಿದರ್ಶನವಾಗಿದ್ದು, ಜಮ್ಮು ಮತ್ತು ಕಾಶ್ಮೀರದ ಜನತೆ ಯಾವುದೇ ಕಾರಣಕ್ಕೂ ಇಂತಹ ಪಕ್ಷದೊಂದಿಗೆ ಮುನ್ನಡೆಯಲು ಇಚ್ಛಿಸುವುದಿಲ್ಲ ಎಂದು ಅವರು ಹೇಳಿದರು.
ಇನ್ನು ಸರ್ಕಾರ ರಚನೆ ಸಂಬಂಧ ಮಾತನಾಡಿದ ಲೋನ್ ಅವರು, 'ಪಿಡಿಪಿ ಪಕ್ಷದ ನೀತಿಗಳು ನಮ್ಮ ನಿಲುವಿಗೆ ಹತ್ತಿರವಾಗಿದೆ. ಹೀಗಾಗಿ ಅವರು ಬಯಸಿದರೆ ನಾವು ಪಿಡಿಪಿಗೆ ಬೆಂಬಲ ನೀಡಲು ಸಿದ್ಧ. ಈ ಬಗ್ಗೆ ಮಾತುಕತೆಗಳು ನಡೆಯುತ್ತಿದೆ' ಎಂದು ತಿಳಿಸಿದರು.
ಇದಲ್ಲದೆ ವಿಧಾನಸಭಾ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಸೋಲಿಗೆ ಕಾರಣವಾದ ಅಂಶಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಚುನಾವಣೆಯಲ್ಲಿ ಪಕ್ಷದ ಹಿನ್ನಡೆ ಕುರಿತಂತೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಈ ಬಗ್ಗೆ ಈಗಾಗಲೇ ಹಿರಿಯ ಮುಖಂಡರೊಂದಿಗೆ ಚರ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಸಮರ್ಥವಾಗಿ ಕಟ್ಟುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಹೇಳಿದರು.