

ಇರೋಡ್: ಐದು ವರ್ಷದ ಬಾಲಕಿ ಮೇಲೆ ನೆರೆಮನೆಯ 65 ವರ್ಷದ ಮುದುಕನೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ತಮಿಳುನಾಡಿನ ವೀರಪ್ಪನ್‌ಛತ್ರಂ ಹಳ್ಳಿಯಲ್ಲಿ ನಡೆದಿದೆ.
ಮನೆಯಲ್ಲಿ ಯಾರೂ ಇಲ್ಲದಿರುವುದನ್ನೇ ಕಾಯುತ್ತಿದ್ದ ನೆರೆಮನೆಯ 65 ವರ್ಷದ ಮುದುಕ, ಬಾಲಕಿಯ ಪೋಷಕರು ಹೊರ ಹೋಗುತ್ತಿದ್ದಂತೆಯೇ ಮನೆಯ ಹೊರಾಂಗಣದಲ್ಲಿ ಆಟವಾಡುತ್ತಿದ್ದ ಮಗುವನ್ನು ಎತ್ತಿಕೊಂಡು ತನ್ನ ಮನೆಯ ಹಿಂಬಾಗಿಲಿಗೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಇದ್ದಕ್ಕಿದ್ದಂತೆ ಬಾಲಕಿ ಪೋಷಕರು ಮನೆಗೆ ಬಂದಿದ್ದಾರೆ.
ಮನೆಯ ಅಂಗಳದಲ್ಲಿ ಆಡುತ್ತಿದ್ದ ಬಾಲಕಿ ನಾಪತ್ತೆಯಾಗಿರುವುದನ್ನು ಕಂಡು ಮನೆಯ ಸುತ್ತಲೂ ಹುಡುಕಾಟ ನಡೆಸಿದ್ದಾರೆ. ಈ ವೇಳೆ ನೆರೆಮನೆಯಾತನೇ ಆಗಿದ್ದ ಮುದುಕನ ಮನೆಯಲ್ಲಿ ಕೇಳಲು ಹೋದಾಗ, ಹಿಂಬದಿಯ ಬಾಗಿಲಲ್ಲಿ ಮುದುಕ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸುತ್ತಿರುವ ದೃಶ್ಯ ಕಂಡು ಬಂದಿದೆ. ಗಾಬರಿಗೊಂಡ ಬಾಲಕಿಯ ತಂದೆ ಕೂಗಾಡಲು ಪ್ರಾರಂಭಿಸಿದ್ದಾನೆ.
ಬಾಲಕಿಯ ತಂದೆಯನ್ನು ಕಂಡ ಮುದುಕ ಗಾಬರಿಗೊಂಡು ಸ್ಥಳದಿಂದ ಕಾಲ್ಕಿತ್ತಿದ್ದಾನೆ. ನಂತರ ಬಾಲಕಿಯ ಪೋಷಕರು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ಕೈ ಗೊಂಡಿದ್ದ ಪೊಲೀಸರು ಪರಾರಿಯಾಗಿದ್ದ ಮುದುಕನನ್ನು ಇಂದು ಪೊಲೀಸರು ಬಂಧಿಸಿದ್ದಾರೆ.