

ಪಾಟ್ನಾ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹಿಂದುಳಿದ ಜಾತಿಗಳ ವಿರೋಧಿ ಎಂದು ಕರೆದಿರುವ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್, ಜಾತಿ ಗಣತಿಯನ್ನು ತಡೆಹಿಡಿಯದೆ ಅದನ್ನು ಬಹಿರಂಗಪಡಿಸುವಂತೆ ಸವಾಲು ಹಾಕಿದ್ದಾರೆ.
ಮೋದಿ ಅವರು ಕೆಳಜಾತಿಯಿಂದ ಬಂದವರು ಎಂದು ಹೇಳಿಕೊಳ್ಳುತ್ತಾರೆ. ಆದರೆ ಅವರು ನಿಜವಾಗಿಯೂ ಕೆಳಜಾತಿ ವಿರೋಧಿ. ಅವರು ಕೆಳಜಾತಿಯಿಂದ ಬಂದವರಾಗಿದ್ದರೆ ಜಾತಿಗಣತಿ ದಾಖಲೆಗಳನ್ನು ಬಹಿರಂಗಪಡಿಸಲಿ ಎಂದು ಸೋಮವಾರ ಪಾಟ್ನಾದಲ್ಲಿ ಗಣತಿ ಬಹಿರಂಗಪಡಿಸುವಂತೆ ಮನವಿ ಸಲ್ಲಿಸಲು ರಾಜಭವನಕ್ಕೆ ತೆರಳುವ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.
ಗಣತಿಯನ್ನು ತಡೆಹಿಡಿದಿರುವುದರ ಹಿಂದಿನ ಉದ್ದೇಶವಾದರೂ ಏನು? ನಮ್ಮಹಾಗೂ ಹಿಂದಿನ ಯುಪಿಎ ಸರ್ಕಾರದ ಕ್ರಮದಿಂದಾಗಿ ಜಾತಿ ಗಣತಿ ನಡೆಸಲಾಯಿತು ಎಂದರು.
ಸರ್ಕಾರದ ಸಾಮಾಜಿಕ-ಆರ್ಥಿಕ ಗಣತಿಯಿಂದ ನಮ್ಮ ದೇಶದ ಬಡಜನರ ಸ್ಥಿತಿಗತಿ ಅರ್ಥವಾಗುತ್ತದೆ. ಆದರೆ ಜಾತಿ ಗಣತಿಯನ್ನು ತಡೆಹಿಡಿಯಲಾಗಿದೆ. ನಮ್ಮ ದೇಶದಲ್ಲಿರುವ ಜಾತಿಗಳು ಮತ್ತು ಆಯಾ ಜಾತಿ ಜನರ ಸಂಖ್ಯೆಯನ್ನು ತಿಳಿದುಕೊಳ್ಳುವ ಹಕ್ಕು ನಮ್ಮ ದೇಶದ ಜನರಿಗಿದೆ. ಅಭಿವೃದ್ಧಿಯಲ್ಲಿ ಹಿಂದುಳಿದಿರುವ ದೇಶದ ಜನರ ಸ್ಥಿತಿಗತಿಯನ್ನು ತಿಳಿದು ಅವರನ್ನು ಮೇಲೆ ತರಬಹುದು. ಗಣತಿ ಬಹಿರಂಗಗೊಂಡರೆ ಆರ್ಥಿಕವಾಗಿ ಹಿಂದುಳಿದವರ ಮೂಲಭೂತ ಅಭಿವೃದ್ಧಿಗೆ ಗಮನಹರಿಸಬಹುದು ಎಂದು ಲಾಲೂ ಹೇಳಿದರು.
ಜುಲೈ 25ರಂದು ಆರ್ ಜೆಡಿ ಕರೆ ನೀಡಿದ್ದ ಬಿಹಾರ ಬಂದ್ ನ್ನು ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ ಎಂದು ತಿಳಿಸಿದರು. ಜಾತಿ ಗಣತಿ ಬಹಿರಂಗಪಡಿಸುವವರೆಗೆ ನಾವು ಬಿಡುವುದಿಲ್ಲ, ಹೋರಾಟ ಮುಂದುವರಿಸುವುದಾಗಿ ತಿಳಿಸಿದರು.