

ನವದೆಹಲಿ: ದೀರ್ಘಕಾಲದಿಂದ ಸಂಸತ್ತಿನ ಅನುಮೋದನೆ ಕಾಯುತ್ತಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಮಸೂದೆ ಕುರಿತ ವರದಿಯನ್ನು ಅಂತಿಮಗೊಳಿಸಲು ಮುಂದಿನ ವಾರ ರಾಜ್ಯಸಭೆಯಲ್ಲಿ ಮಂಡಿಸಲು ರಾಜ್ಯಸಭೆ ಸೆಲೆಕ್ಟ್ ಕಮಿತಿ ಕಾಯುತ್ತಿದೆ. ಈ ಕುರಿತ ತನ್ನ ವರದಿಯನ್ನು ಸೋಮವಾರ ಕೇಂದ್ರ ಸಚಿವ ಸಂಪುಟಕ್ಕೆ ಸಲ್ಲಿಸಬೇಕಾಗಿದೆ. ಆದರೆ ಕಾಂಗ್ರೆಸ್ ಪಕ್ಷ ಈ ವರದಿಗೆ ವಿರೋಧ ವ್ಯಕ್ತಪಡಿಸುವ ಸಾಧ್ಯತೆಗಳಿವೆ. ವರದಿಯನ್ನು ಸಲ್ಲಿಸಬೇಕಾದ ದಿನ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಸೆಲೆಕ್ಟ್ ಕಮಿಟಿ ಮಸೂದೆಯ ಪ್ರತಿ ಕಲಂನ್ನು ಶುಕ್ರವಾರ ಕೂಲಂಕಷವಾಗಿ ಚರ್ಚಿಸಿತು ಎಂದು ಮೂಲಗಳು ತಿಳಿಸಿವೆ. ಆದರೆ ರಾಜ್ಯಸಭೆಯಲ್ಲಿ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಈ ಮಸೂದೆ ಸರಳ ಮತ್ತು ಸಮಗ್ರವಾಗಿಲ್ಲ ಎಂದು ಹೇಳಿ ಆಕ್ಷೇಪ ಟಿಪ್ಪಣಿ ಸಿದ್ಧಪಡಿಸುತ್ತಿದೆ ಎಂದು ಮೂಲಗಳು ಹೇಳಿವೆ.