

ನವದೆಹಲಿ: ಮಧ್ಯಪ್ರದೇಶದ ಬಹುಕೋಟಿ ವ್ಯಾಪಂ ಹಗರಣ ಸಂಬಂಧ ವಿಶೇಷ ತನಿಖಾ ತಂಡದ ಅಧಿಕಾರಿಗಳು ಚಾರ್ಜ್ ಶೀಟ್ ಸಲ್ಲಿಸಲು ಸುಪ್ರೀಂಕೋರ್ಟ್ ಸೋಮವಾರ ಅನುಮತಿ ನೀಡಿದೆ.
ವ್ಯಾಪಂ ಹಗರಣ ಕುರಿತಂತೆ ಇಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿ. ಹೆಚ್.ಎಲ್.ದತ್ತು, ಕುಮಾರ್ ಮಿಶ್ರ ಹಾಗೂ ಅಮಿತಾವ ರಾಯ್ ಅವರಿದ್ದ ಪೀಠ, ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿದ್ದು, ಹಗರಣ ಕುರಿತಂತೆ ಮಧ್ಯಪ್ರದೇಶದ ಎಸ್ಐಟಿ ತನಿಖಾ ತಂಡ ಚಾರ್ಜ್ ಶೀಟ್ ಸಲ್ಲಿಸಲು ಅನುಮತಿ ನೀಡಿದೆ.
ವ್ಯಾಪಂ ಹಗರಣ ಸಂಬಂಧ 185ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಇಷ್ಟು ಪ್ರಕರಣಗಳು ಎಸ್ಐಟಿಯಿಂದ ಸಿಬಿಐ ಸಂಸ್ಥೆಗೆ ರವಾನೆಯಾಗಲು ಸಾಕಷ್ಟು ಸಮಯ ಬೇಕಾಗುತ್ತದೆ. ಈ ಸಮಯದಲ್ಲಿ ಅಪರಾಧಿಗಳು ಪ್ರಕರಣ ಸಂಬಂಧ ಜಾಮೀನು ಪಡೆದುಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಪ್ರಕರಣ ಸಂಬಂಧ ಎಸ್ಐಟಿ ಅಧಿಕಾರಿಗಳಿಗೆ ಚಾರ್ಜ್ ಶೀಟ್ ಸಲ್ಲಿಸಲು ಅನುಮತಿ ನೀಡುವಂತೆ ಕೋರಿ ಸಿಬಿಐ ಅಧಿಕಾರಿಗಳು ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.
ಸಿಬಿಐ ಸಲ್ಲಿಸಿದ್ದ ಈ ಅರ್ಜಿಯನ್ನು ಇಂದು ಪರಿಶೀಲಿಸಿರುವ ಸುಪ್ರೀಂಕೋರ್ಟ್ ಎಸ್ಐಟಿ ತನಿಖಾಧಿಕಾರಿಗಳಿಗೆ ಚಾರ್ಜ್ ಶೀಟ್ ಸಲ್ಲಿಸಲು ಅನುಮತಿ ನೀಡಿದ್ದು, ಜು.24 ವಿಚಾರಣೆ ಮುಂದೂಡಿದೆ.