

ನವದೆಹಲಿ: ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರಗಳ ನಡುವೆ ಮತ್ತೊಂದು ವಿವಾದ ಉಂಟಾಗುವ ಸಾಧ್ಯತೆಯಿದ್ದು, ತಮ್ಮ ಆಡಳಿತದಲ್ಲಿ ಮೂಗು ತೂರಿಸದಂತೆ ಕೇಂದ್ರ ಸರ್ಕಾರವನ್ನು ಆಪ್ ಕೋರಿದೆ. ಅದರಷ್ಟಕ್ಕೆ ಕೆಲಸ ಮಾಡಲು ಬಿಡುವಂತೆ ಹೇಳಿ ಭಿತ್ತಿಪತ್ತವನ್ನು ಅದು ಅಂಟಿಸಿದೆ.
ದೆಹಲಿ ಸಚಿವಾಲಯದ ಹೊರಗೆ ಈ ಪೋಸ್ಟರ್ ನ್ನು ಅಂಟಿಸಲಾಗಿದ್ದು, ಅದರಲ್ಲಿ ''ಪಿಎಂ ಸರ್, ದೆಹಲಿ ಸರ್ಕಾರಕ್ಕೆ ಕೆಲಸ ಮಾಡಲು ಬಿಡಿ, ಅದು ಚೆನ್ನಾಗಿ ಕೆಲಸ ಮಾಡುತ್ತದೆ'' ಎಂದು ಬರೆಯಲಾಗಿದೆ.
ಇದೇ ಸಂದರ್ಭದಲ್ಲಿ ಅದು, ಕೇಂದ್ರ ಸರ್ಕಾರದ ಜೊತೆ ನಡೆಸುವ ಜಗಳವಲ್ಲ ಎಂದು ಸಮರ್ಥಿಸಿಕೊಂಡಿದೆ.
ಈ ಬಗ್ಗೆ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಡಿಯಲ್ಲಿ ಕೆಲಸ ಮಾಡುತ್ತಿರುವ ಕೇಂದ್ರ ಸರ್ಕಾರ ಲೆಫ್ಟಿನೆಂಟ್ ಗವರ್ನರ್ ಮೂಲಕ ದೆಹಲಿ ಸರ್ಕಾರದ ಎಲ್ಲಾ ವಿಷಯಗಳಲ್ಲಿಯೂ ಮಧ್ಯಪ್ರವೇಶಿಸುತ್ತದೆ, ನಮ್ಮನ್ನು ನಮ್ಮಷ್ಟಕ್ಕೆ ಕೆಲಸ ಮಾಡಲು ಬಿಡುವುದಿಲ್ಲ. ಇದರಿಂದ ನಮಗೆ ತೊಂದರೆಯಾಗುತ್ತಿದೆ. ಅದಕ್ಕೆ ನಾವು ಅವರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದರು.
ಈ ಹಿಂದೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರಿಗೆ ಬರೆದ ಪತ್ರದಲ್ಲಿ, ಪ್ರಧಾನಿ ಮೋದಿಯವರ ಪರವಾಗಿ ತಾವು ಕೆಲಸ ಮಾಡುತ್ತಿದ್ದೀರೆಂದು ಆರೋಪಿಸಿದ್ದರು.