

ಬೆಂಗಳೂರು: ಕಲಾಂ ನಿಧನಕ್ಕೆ ಇಡೀ ರಾಜಧಾನಿ ಕಂಬನಿ ಮಿಡಿಯಿತು. ಎಲ್ಲೆಲ್ಲೂ ಅಬ್ದುಲ್ ಕಲಾಂ ಅವರ ನಿಧನದ ಸುದ್ದಿಯದ್ದೇ ಚರ್ಚೆ. ಹೀಗಾಗಬಾರದಿತ್ತು ಎಂಬ ಬೇಸರ ನುಡಿಗಳು. ಇನ್ನು ಅವರ ವ್ಯಕ್ತಿತ್ವದ್ದೇ ಗುಣಗಾನ. ಬಸ್ ನಿಲ್ದಾಣ, ಹೋಟೆಲ್, ಕಚೇರಿ ಎಲ್ಲೆಂದರಲ್ಲಿ ಅದೇ ಸುದ್ದಿ.
ಕಲಾಂ ಅವರನ್ನು ಕಳೆದುಕೊಂಡ ಬೇಸರದ ಮಾತುಗಳು ಪದೇ ಪದೇ ಕೇಳಿಬರುತ್ತಲೇ ಇದ್ದವು. ನಗರದ ವಿವಿಧ ಕಡೆಗಳಲ್ಲಿ ಸಂಘ ಸಂಸ್ಥೆಗಳು ಕಲಾಂ ಅವರ ಭಾವಚಿತ್ರಗಳನ್ನಿಟ್ಟು ಸಾರ್ವಜನಿಕವಾಗಿ ಸಂತಾಪ ಸೂಚಿಸಿದ್ದು ಕಂಡುಬಂತು. ಬೆಳಗ್ಗೆಯಿಂದ ಸಂಜೆವರೆಗೂ ವಿವಿಧ ಕಡೆ ಸಂತಾಪ ಸೂಚಿಸುವ ಸಭೆಗಳು ನಡೆದೇ ಇದ್ದವು. ಅನೇಕ ಖಾಸಗಿ ವಾಹನಗಳ ಮುಂದೆ ಕಲಾಂ ಅವರ ದೊಡ್ಡ ದೊಡ್ಡ ಭಾವಚಿತ್ರ- ಸಂತಾಪ ನುಡಿಗಳು ರಾರಾಜಿಸಿದ್ದವು. ಕತ್ತಲಾಗುತ್ತಿದ್ದಂತೆ ಅನೇಕ ಪ್ರಮುಖ ಕಡೆಗಳಲ್ಲಿ ಕ್ಯಾಂಡಲ್ ಹಚ್ಚಿಟ್ಟು ಸಂತಾಪ ಸೂಚಿಸಿದವರು ನೂರಾರು ಮಂದಿ. ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರಧ್ವಜವನ್ನು ಅರ್ಧಮಟ್ಟಕ್ಕೆ ಹಾರಿಸಿ ಸಂತಾಪ ಸೂಚಿಸಲಾಯಿತು. ಅನೇಕ ಕಡೆ ಭಾವಚಿತ್ರವಿಟ್ಟು ಪುಷ್ಪಾರ್ಚನೆ ನಡೆಸಿ ಮೌನಾಚರಣೆ ನಡೆಸಲಾಯಿತು.
ಬಿಜೆಪಿ ಕಚೇರಿ: ಬಿಜೆಪಿ ರಾಜ್ಯ ಕಚೇರಿಯಲ್ಲಿ ಅಬ್ದುಲ್ ಕಲಾಂಗೆ ಸಂತಾಪ ಸೂಚಿಸುವ ಸಭೆ ನಡೆಯಿತು. ಪಕ್ಷದ ರಾಜ್ಯ ವಕ್ತಾರ ಸುರೇಶ್‍ಕುಮಾರ್, ಶಾಸಕರಾದ ಸಿ.ಟಿ.ರವಿ, ಅಶ್ವತ್ಥ ನಾರಾಯಣ, ಆರ್.ಅಶೋಕ ಅವರು ಪಾಲ್ಗೊಂಡಿದ್ದ ಸಭೆ ಯಲ್ಲಿ ಕಲಾಂ ಅವರ ಗುಣಗಾನ ಮಾಡಲಾಯಿತು. ಸುರೇಶ್ ಕುಮಾರ್ ಮಾತನಾಡಿ ನುಡಿ ನಮನ ಸಲ್ಲಿಸಿದರು. ಮೌನ ಆಚರಿಸುವ ಮೂಲಕ ಕಲಾಂ ಆತ್ಮಕ್ಕೆ ಶಾಂತಿ ಕೋರಲಾಯಿತು. ಸ್ನೇಹದೀಪ: ಭಾರತಿ ನಗರ (ಕಾಕ್ಸ್ ಟೌನ್)ದಲ್ಲಿರುವ ಸ್ನೇಹದೀಪ ಸಂಸ್ಥೆಯಲ್ಲಿ ಕಲಾಂ ಅವರಿಗೆ ಸಂತಾಪ ಸೂಚಿಸಲು ಸಭೆ ನಡೆಸಲಾಯಿತು. ದೃಷ್ಟಿ ಸವಾಲು ಎದುರಿಸುತ್ತಿರುವವರೇ ಇರುವ ಈ ಸಂಸ್ಥೆಯಲ್ಲಿ ನಡೆದ ಸಭೆಯಲ್ಲಿ ಕಲಾಂ ಅವರ ಕಾರ್ಯವೈಖರಿಯ ಗುಣಗಾನ ನಡೆಯಿತು. ಸಂಸ್ಥೆ ಮ್ಯಾನೇಜಿಂಗ್ ಟ್ರಸ್ಟಿ ಪೌಲ್ ಮುದ್ದ ಅವರು ಕಲಾಂ ಅವರ ಕುರಿತು ಮಾತನಾಡಿದರು. ನಂತರ ಎರಡು ನಿಮಿಷ ಮೌನ ಆಚರಿಸಲಾಯಿತು.
ಹೆಬ್ಬಗೋಡಿ: ಇಲ್ಲಿನ ಎಚ್‍ಎಸ್‍ಆರ್ ಬಡಾವಣೆಯಲ್ಲಿ ಶ್ರದಾಟಛಿಂಜಲಿ ಸಭೆ ನಡೆಯಿತು. ಈ ವೇಳೆ ಮಾತನಾಡಿದ ಬೊಮ್ಮನಹಳ್ಳಿ ಕಾಂಗ್ರೆಸ್ ಮುಖಂಡ ವಾಸುದೇವ ರೆಡ್ಡಿ, ದೇಶದ ಯುವಜನರನ್ನು ಸದಾ ಪ್ರೋತ್ಸಾಹಿಸುತ್ತಾ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವನ್ನು ಶಕ್ತಿಶಾಲಿಗೊಳಿಸುವ ಕನಸು ಅಬ್ದುಲ್ ಕಲಾಂ ಅವರದ್ದಾಗಿತ್ತು. ಆ ನಿಟ್ಟಿನಲ್ಲಿ ಭಾರತವನ್ನು ವಿಜ್ಞಾನ ಕ್ಷೇತ್ರದಲ್ಲಿ ಗಟ್ಟಿಗೊಳಿಸಿದ ಕೀರ್ತಿ ಅವರಿಗೆ ಸಲ್ಲಬೇಕು ಎಂದರು. ಎಲ್ಲರಿಂದಲೂ ಒಬ್ಬ ವ್ಯಕ್ತಿ ಗೌರವಿಸಲ್ಪಡುವುದು ಆತನ ಉತ್ತಮ ವ್ಯಕ್ತಿತ್ವ ಮತ್ತು ಕಾರ್ಯಶ್ರದ್ಧೆಯಿಂದ ಮಾತ್ರ ಎಂಬುದನ್ನು ಅವರು ನಿರೂಪಿಸಿದ್ದರು. ವಿದ್ಯಾರ್ಥಿಗಳಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದ ಕಲಾಂ ಅವರ ಅಗಲಿಕೆಯಿಂದ, ಶಿಕ್ಷಣ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆಯೆಂದರು.
ಚಿನ್ಮಯ ಶಿಕ್ಷಣ ಸಂಸ್ಥೆಯ ಕೆ.ವಾಸುದೇವ್ ಮಾತನಾಡಿ, ಮಕ್ಕಳೆಂದರೆ ಅಬ್ದುಲ್ ಕಲಾಂ ಅವರಿಗೆ ಅಚ್ಚುಮೆಚ್ಚು ಹಾಗೂ ಅವರ ಆದರ್ಶಗಳನ್ನು ಮುಂದಿನ ಪೀಳಿಗೆಯವರು ಪಾಲಿಸು ವಂತೆ ಮಾಡುವ ಮೂಲಕ ಅವರ ಮೌಲ್ಯಗಳನ್ನು ನಾವು ಜೀವಂತವಾಗಿರಿಸಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಜಾಗೃತಿ ಸಮಿತಿ ಮುಖಂಡ ಎಸ್. ಅನಿಲ್, ಡಾ. ಕೃಷ್ಣಾರೆಡ್ಡಿ ಮತ್ತಿತರರು ಪಾಲ್ಗೊಂಡಿದ್ದರು.
ನ್ಯೂ ಹಾರ್ಡ್‍ವಿಕ್ ಶಾಲೆ: ಕೊಡಿಗೆಹಳ್ಳಿಯಲ್ಲಿರುವ ನ್ಯೂ ಹಾರ್ಡ್‍ವಿಕ್ ಶಾಲೆಯಲ್ಲಿ ಸಂತಾಪ ಸಭೆ ನಡೆಯಿತು. ಶಾಲಾ ಮಕ್ಕಳು ಕ್ಯಾಂಡಲ್ ಬೆಳಗಿ ಕಲಾಂ ಆತ್ಮಕ್ಕೆ ಶಾಂತಿ ಕೋರಿದರು.
ಯುವ ಕಾಂಗ್ರೆಸ್: ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಘಟಕದಿಂದ ಸಂತಾಪ ಸಭೆ ನಡೆಯಿತು. ದೀಪ ಬೆಳಗಿ ಕಲಾಂ ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲೆಂದು ಕೋರಲಾಯಿತು. ಕಾರ್ಯಕ್ರಮದಲ್ಲಿ ಮನೋಹರ್, ಕೃಷ್ಣಮೂರ್ತಿ, ರಾಜಣ್ಣ, ಜನಾರ್ದನ, ಮಾರನ್, ರವಿ, ಅಂಜನಮೂರ್ತಿ, ಲೋಕೇಶ್, ಶೇಖರ್ ಮತ್ತಿತರರು ಇದ್ದರು.
ಮ್ಯಾಕ್ಸ್ ಮುಲ್ಲರ್ ಶಾಲೆ: ಬಸವೇಶ್ವರ ನಗರದ ಮ್ಯಾಕ್ಸ್ ಮುಲ್ಲರ್ ಪಬ್ಲಿಕ್ ಶಾಲೆಯಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಶಾಲಾ ಮಕ್ಕಳು, ಶಿಕ್ಷಕ ವೃಂದದವರು ಕಲಾಂ ಅವರಿಗೆ ಸಂತಾಪ ಸೂಚಿಸಿದರು. ದೇಶಕಂಡ ಆದರ್ಶ ಪುರುಷ, ಸರಳತೆಯ ಮೂಲಕ ದೇಶಕ್ಕೆ ನಿರಂತರವಾಗಿ ಅಭಿವೃದ್ಧಿ ಹಾಗೂ ಶಿಕ್ಷಣದ ಬಗ್ಗೆ ಅರಿವು ಮೂಡಿಸಿ ವಿದ್ಯಾರ್ಥಿಗಳ ಪಾಲಿಗೆ ಕಲಾಂ ಬೆಳಕಾಗಿದ್ದರು. ಅವರು ಅಗಲಿರುವುದು ನೋವಿನ ಸಂಗತಿ ಎಂದು. ಅವರ ಪ್ರಾಮಾಣಿಕತೆ ದೂರದೃಷ್ಟಿಯನ್ನು ನಾವೆಲ್ಲರೂ ಸದಾ ನೆನಪಿಸಿಕೊಂಡು ಸರಳ ಜೀವನ ನಡೆಸಬೇಕು ಎಂದು ಶಾಲೆಯ ಪ್ರಾಂಶುಪಾಲರು ತಿಳಿಸಿದರು.
ಲಾರಿ ಮಾಲೀಕರ ಸಂಘ: ಅಬ್ದುಲ್ ಕಲಾಂ ನಿಧನಕ್ಕೆ ಫೆಡರೇಷನ್ ಆಫ್ ಕರ್ನಾಟಕ ಸ್ಟೇಟ್ ಲಾರಿ ಓನರ್ಸ್ ಆ್ಯಂಡ್ ಏಜೆಂಟ್ಸ್ ಅಸೋಸಿಯೇಷನ್ ಸಂತಾಪ ವ್ಯಕ್ತಪಡಿಸಿದೆ. 2005ರಲ್ಲಿ ನಡೆದ ಅಖಿಲ ಭಾರತ ಮೋಟಾರ್ ಟ್ರಾನ್ಸ್ ಪೋರ್ಟ್ ಕಾರ್ಯಕಾರಿಣಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಅಬ್ದುಲ್ ಕಲಾಂ ಅವರು ಪಾಲ್ಗೊಂಡು ಮಾರ್ಗದರ್ಶನ ಮಾಡಿದ್ದರು. ಅವರ ಸರಳತೆ, ವಿನೀತ ಭಾವ, ಸೌಜನ್ಯಪೂರಿತ ನಡೆ ನುಡಿ ಇಡೀ ಮನುಕುಲಕ್ಕೆ ಮಾದರಿ ಎಂದು ಸಂಘಟನೆಯ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ಮತ್ತು ಕಾರ್ಯದರ್ಶಿ ಬಿ.ವಿ.ನಾರಾಯಣಪ್ಪ ತಿಳಿಸಿದ್ದಾರೆ.
ಆದ್ಯಮದಲ್ಲಿ ಸ್ಮರಣೆ: ಅದಮ್ಯ ಚೇತನ ಶ್ರೀಮತಿ ಗಿರಿಜಾಶಾಸ್ತ್ರಿ ಸ್ಮಾರಕ ಸಂಸ್ಥೆಯ ಕಚೇರಿಯಲ್ಲಿ ಮಂಗಳವಾರ ಕಲಾಂ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಂಸ್ಥೆಯ ನೂರಾರು ಕಾರ್ಯ ಕರ್ತರು ಹಾಗೂ ಇನ್ನಿತರ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅದಮ್ಯ ಚೇತನ ಸಂಸ್ಥೆಯ `ಆರೋಗ್ಯ ಚೇತನ' ಯೋಜನೆಯನ್ನು ಡಾ.ಎ.ಪಿ.ಜೆ.ಅಬ್ದುಲ್ ಕಲಾಂರವರು ಉದ್ಘಾಟಿಸಿದ್ದನ್ನು ಇದೇ ಸಂದರ್ಭದಲ್ಲಿ ಸ್ಮರಿಸಲಾಯಿತು.